Advertisement

ನಾಳೆ ಎಸ್‌.ಎಂ. ಕೃಷ್ಣ  ಬಿಜೆಪಿ ಸೇರ್ಪಡೆ

11:35 AM Mar 14, 2017 | Karthik A |

ಬೆಂಗಳೂರು: ಕಾಂಗ್ರೆಸ್‌ ತೊರೆದಿರುವ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಬಿಜೆಪಿ ಸೇರುವ ದಿನಾಂಕ ಅಂತಿಮವಾಗಿದ್ದು, ಬುಧವಾರ (ಮಾ. 15) ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಲಿದ್ದಾರೆ. ದಿಲ್ಲಿಯ ರಾಷ್ಟ್ರೀಯ ಬಿಜೆಪಿ ಕಚೇರಿಯಲ್ಲಿ ಸರಳ ಸಮಾರಂಭದಲ್ಲಿ ಎಸ್‌.ಎಂ.ಕೃಷ್ಣ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಬಹುತೇಕ ಬೆಳಗ್ಗೆ 11.30ಕ್ಕೆ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದ್ದು, ಮಂಗಳವಾರ ಕೃಷ್ಣ ಅವರು ದಿಲ್ಲಿಗೆ ತೆರಳಿದ ಬಳಿಕ ಅದು ಸ್ಪಷ್ಟವಾಗಲಿದೆ. ದಿಲ್ಲಿಯಲ್ಲಿ ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ನಡೆಯಲಿದ್ದು, ಅದಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ದಿಲ್ಲಿಗೆ ತೆರಳುತ್ತಿದ್ದಾರೆ. ಹೀಗಾಗಿ ಬುಧವಾರ ಎಸ್‌.ಎಂ.ಕೃಷ್ಣ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರೂ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

Advertisement

ಪಂಚ ರಾಜ್ಯಗಳ ಚುನಾವಣೆ ಫ‌ಲಿತಾಂಶದಲ್ಲಿ ಸ್ಪಷ್ಟತೆ ಸಿಗದಿದ್ದರೆ ಎಸ್‌.ಎಂ.ಕೃಷ್ಣ ಅವರು ಬಿಜೆಪಿಗೆ ಸೇರುವುದು ಸ್ವಲ್ಪ ವಿಳಂಬವಾಗಬಹುದು ಎಂದು ಹೇಳಲಾಗಿತ್ತು. ಆದರೆ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆತಿರುವುದು ಹಾಗೂ ಅತಂತ್ರ ಸ್ಥಿತಿ ಎದು ರಾಗಿದ್ದ ಗೋವಾ ಮತ್ತು ಮಣಿಪುರಗಳಲ್ಲೂ ಬಿಜೆಪಿ ಸರಕಾರ ರಚಿಸುವುದು ಖಚಿತವಾದ ಹಿನ್ನೆಲೆಯಲ್ಲಿ ಮಾ. 15ರಂದೇ ಅವರು ಬಿಜೆಪಿ ಸೇರುತ್ತಿದ್ದಾರೆ.

ಸುಮಾರು 46 ವರ್ಷಗಳ ಸುದೀರ್ಘ‌ ಅವಧಿ ಕಾಂಗ್ರೆಸ್‌ ಪಕ್ಷದಲ್ಲಿ ಕೆಲಸ ಮಾಡಿದ್ದ ಎಸ್‌.ಎಂ.ಕೃಷ್ಣ ಅವರು ಪಕ್ಷದ ಇತ್ತೀಚಿನ ವಿದ್ಯಮಾನಗಳಿಂದ ಬೇಸತ್ತು ಕಳೆದ ಜನವರಿ 28ರಂದು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಬಿಜೆಪಿಯ ಆರ್‌.ಅಶೋಕ್‌ ಅವರು 2-3 ಬಾರಿ ಕೃಷ್ಣ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಹೀಗಾಗಿ ನಂತರದ ಒಂದು ವಾರ ಅವರು ಬಿಜೆಪಿಗೆ ಸೇರಲಿದ್ದಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತಾದರೂ ಬಳಿಕ ಆ ಸದ್ದು ಅಡಗಿತ್ತು. ಆದರೆ, ಮಾ. 6ರಂದು ವರಿಷ್ಠರ ಸೂಚನೆಯಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಎಸ್‌.ಎಂ.ಕೃಷ್ಣ ಅವರನ್ನು ಭೇಟಿಯಾಗಿ ಬಿಜೆಪಿ ಸೇರುವಂತೆ ಅಧಿಕೃತ ಆಹ್ವಾನ ನೀಡಿದ್ದರು. ಅದರಂತೆ ಅವರ ಪಕ್ಷ ಸೇರ್ಪಡೆಗೆ ಸಮಯ ನಿಗದಿಯಾಗಿದೆ.

ಉಪ ಚುನಾವಣೆಯಲ್ಲಿ ಪ್ರಚಾರ?: ಎಸ್‌.ಎಂ.ಕೃಷ್ಣ ಅವರು ಬಿಜೆಪಿ ಸೇರಿದ ಬೆನ್ನಲ್ಲೇ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪ್ರಚಾರ ಮಾಡುವ ಸಾಧ್ಯತೆ ಇದೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಎಸ್‌.ಎಂ.ಕೃಷ್ಣ ಅವರ ಪ್ರಭಾವ ಸ್ವಲ್ಪ ಮಟ್ಟಿಗೆ ಇದ್ದು, ಅದನ್ನು ಉಪಚುನಾವಣೆಯಲ್ಲಿ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಬುಧವಾರ ಬಿಜೆಪಿಗೆ ಸೇರಿ ಅಮಿತ್‌ ಶಾ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಕೃಷ್ಣ ಅವರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next