Advertisement
ಬೆಂಗಳೂರಿನಲ್ಲಿ ದಿನೇ ದಿನೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಮತ್ತೂಂದೆಡೆ ಅದೇ ವೇಗದಲ್ಲಿ ವಾಹನ ಕಳವು ಪ್ರಮಾಣವೂ ಅಧಿಕಗೊಂಡಿದೆ. ಹಾಗೆಯೇ ಕಳುವಾದ ವಾಹನಗಳನ್ನು ಪೊಲೀಸರು ಪತ್ತೆ ಹಚ್ಚಿ ಜಪ್ತಿ ಮಾಡಿ, ನಿರ್ದಿಷ್ಟ ಪ್ರದೇಶದಲ್ಲಿ ನಿಲುಗಡೆ ಮಾಡುತ್ತಿದ್ದಾರೆ. ಆದರೆ, ಕೆಲ ಮಾಲೀಕರು ವಾಹನಗಳನ್ನು ವಾಪಸ್ ಪಡೆದುಕೊಂಡರೆ, ಇನ್ನು ಕೆಲವರು ತಮ್ಮ ವಾಹನದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹ್ಯಾಂಡಲ್ ಲಾಕ್ ಮುರಿದು ದ್ವಿಚಕ್ರ ವಾಹನಗಳ ಕಳವು ಮಾಡುವ ಕಳ್ಳರು(ರಾಜ್ಯ ಮತ್ತು ಅಂತಾಜ್ಯ) ಗಡಿಭಾಗದಲ್ಲಿ ಕಡಿಮೆ ಬೆಲೆಗೆ ಮಾರುತ್ತಿದ್ದಾರೆ. ಮೋಜಿಗಾಗಿ ಕಳವು ಮಾಡುವವರು ಪೆಟ್ರೋಲ್ ಖಾಲಿಯಾಗುತ್ತಿದ್ದಂತೆ ವಾಹನವನ್ನು ಎಲ್ಲೆಂದರಲ್ಲಿ ಬಿಟ್ಟು ಪರಾರಿಯಾಗುತ್ತಿದ್ದಾರೆ. ಅಂತಹ ಗಾಡಿಗಳನ್ನು ಪೊಲೀಸರು ಜಪ್ತಿ ಮಾಡಿದರೂ ವಾಹನ ಮಾಲೀಕರು ವಾಪಸ್ ಪಡೆಯಲು ಹಿಂಜರಿಯುತ್ತಾರೆ. ಏಕೆಂದರೆ, ವಾಹನ ಕಳುವಾದ ಕೆಲ ದಿನಗಳಲ್ಲೇ ಎಫ್ಐಆರ್ ಪ್ರತಿ ಆಧರಿಸಿ ವಿಮೆ ಪಡೆದು ಹೊಸ ವಾಹನ ಖರೀದಿಸುತ್ತಾರೆ. ಮತ್ತೂಂದೆಡೆ ಕೋರ್ಟ್‌ನಲ್ಲಿ ಪ್ರಕರಣಗಳ ವಿಚಾರಣೆ ಕೂಡ ವಿಳಂಬವಾಗುತ್ತಿದ್ದು, ಕಳವು ವಾಹನಗಳು ಠಾಣೆಗಳ ಆವರಣದಲ್ಲಿ ವರ್ಷಗಟ್ಟಲೇ ನಿಂತಲ್ಲೇ ನಿಂತು ತುಕ್ಕು ಹಿಡಿದು ಗುಜರಿ ಪಾಲಾಗುತ್ತಿವೆ.
Related Articles
Advertisement
ವಾಹನ ವಿಲೇವಾರಿಯೂ ವಿಳಂಬ: ವಾಹನ ಪತ್ತೆಗೆ ಕನಿಷ್ಠ 15-20 ದಿನಗಳ ಬೇಕಾಗುತ್ತದೆ. ಐದಾರು ತಿಂಗಳ ಬಳಿಕ ವಾಹನ ಸಿಕ್ಕಾಗ ವಾಹನಗಳ(ಅಸಲಿ ನೊಂದಾಯಿತ ನಂಬರ್ ಇಲ್ಲದಾಗ) ಚಾರ್ಸಿ, ಎಂಜಿನ್ ನಂಬರ್ ನೊಂದಾಯಿಸಿ ಆರ್‌ಟಿಒದಿಂದ ಅಸಲಿ ನಂಬರ್, ಮಾಲೀಕರ ಪತ್ತೆ ಹಚ್ಚುತ್ತೇವೆ. ಮಾಲೀಕರು ವಾಹನ ವಾಪಸ್ ಪಡೆಯಲು ಇಚ್ಚಿಸದಿದ್ದಾಗ, ಕೋರ್ಟ್‌ಗೆ ತಿಳಿಸಿದ ಹರಾಜು ಪ್ರಕ್ರಿಯೆ ನಡೆಸುತ್ತೇವೆ. ಈ ಎಲ್ಲ ಪ್ರಕ್ರಿಯೆಗಳಿಗೆ ಕನಿಷ್ಠ 6-8 ತಿಂಗಳು ಬೇಕಾಗುತ್ತದೆ. ಅಷ್ಟರಲ್ಲಿ ವಾಹನಗಳು ಸಂಚರಿಸುವ ಸ್ಥಿತಿ ಕಳೆದುಕೊಳ್ಳುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ನಗರದಲ್ಲಿ ಹೆಚ್ಚುತ್ತಿರುವ ವಾಹನ ಕಳವು: ಕಳೆದ 8 ತಿಂಗಳಲ್ಲಿ 7,632 ದ್ವಿಚಕ್ರವಾಹನ ಕಳ್ಳತನವಾಗಿದೆ. ಒಂದೆಡೆ ಕದ್ದ ದ್ವಿಚಕ್ರವಾಹನಗಳನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದರೂ, ದುಪ್ಪಟ್ಟು ಪ್ರಮಾಣದಲ್ಲಿ ಮತ್ತೆ ಕಳುವಾಗುತ್ತಿರುವುದು ಆತಂಕಕ್ಕೀಡು ಮಾಡಿದೆ. 2020ರಲ್ಲಿ ರಾಜ್ಯಾದ್ಯಂತ 7,991 ದ್ವಿಚಕ್ರವಾಹನ ಕಳವು ಪ್ರಕರಣ ದಾಖಲಾಗಿತ್ತು. ಆದರೆ, 2022ರಲ್ಲಿ ಆಗಸ್ಟ್‌ವರೆಗೆ 7,632 ದ್ವಿಚಕ್ರವಾಹನ ಕಳ್ಳತನವಾಗಿದೆ. ವರ್ಷದಿಂದ ವರ್ಷಕ್ಕೆ ದ್ವಿಚಕ್ರವಾಹನ ಕಳವು ಪ್ರಕರಣದಲ್ಲಿ ಭಾರಿ ಏರಿಕೆ ಕಂಡು ಬರುತ್ತಿ ರುವುದನ್ನು ರಾಜ್ಯ ಪೊಲೀಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ. ದ್ವಿಚಕ್ರವಾಹನ ಕಳವು ತಡೆಗಟ್ಟಲು ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆಗೆ ಮುಂದಾಗಿದ್ದು, ಬೆಂಗಳೂರು ನಗರ ಸೇರಿ ರಾಜ್ಯಾದ್ಯಂತ ಹಳೆ ದ್ವಿಚಕ್ರವಾಹನ ಕಳ್ಳರ ಪಟ್ಟಿ ಸಿದ್ಧಪಡಿಸಲಾಗಿದೆ. ಜಪ್ತಿ ಮಾಡಲು ಬಾಕಿ ಉಳಿದಿರುವ 36 ಸಾವಿರಕ್ಕೂ ಅಧಿಕ ದ್ವಿಚಕ್ರವಾಹನಗಳಿಗಾಗಿ ಶೋಧ ನಡೆಸುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಳ್ಳತನವಾದ ಬೈಕ್ ಪತ್ತೆ ಹೇಗೆ?: ಮನೆ ಮುಂದೆ ನಿಲುಗಡೆ ಮಾಡಿರುವ ದ್ವಿಚಕ್ರವಾಹನಗಳನ್ನೇ ಟಾರ್ಗೆಟ್ ಮಾಡುವ ಕಳ್ಳರು, ಹ್ಯಾಂಡ್‌ಲಾಕ್ ಮುರಿದು ಕ್ಷಣ ಮಾತ್ರದಲ್ಲಿ ಬೈಕ್ ಲಪಟಾಯಿಸುತ್ತಾರೆ. ನಂತರ ಬೈಕ್‌ನ ನಂಬರ್ ಪ್ಲೇಟ್ ಬದಲಾಯಿಸಿ ಸಿಕ್ಕಿದ ಬೆಲೆಗೆ ಮಾರಾಟ ಮಾಡುತ್ತಾರೆ. ಇತ್ತ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾದ ದ್ವಿಚಕ್ರ ವಾಹನಗಳ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳುವ ವೇಳೆ ಕೃತ್ಯ ನಡೆದ ಆಸು-ಪಾಸಿನಲ್ಲಿ ಅಳವಡಿಸಿರುವ ಸಿಸಿಕ್ಯಾಮರಾ, ಟವರ್ ಲೊಕೇಶನ್ ಸೇರಿ ಇನ್ನೀತರ ತಾಂತ್ರಿಕ ಕಾರ್ಯಾಚರಣೆ ನಡೆಸುತ್ತಾರೆ. ಆ ವೇಳೆ ಕಳ್ಳರ ಸುಳಿವು ಸಿಕ್ಕಿದರೆ ಕೂಡಲೇ ಅವರನ್ನು ಬಂಧಿಸಿ ಕದ್ದ ಬೈಕ್‌ನ ಮಾಹಿತಿ ಕಲೆ ಹಾಕುತ್ತಾರೆ. ದ್ವಿಚಕ್ರವಾಹನ ಕಳ್ಳರು ನಂಬರ್ ಪ್ಲೇಟ್ ಬದಲಾ ಯಿಸಿದರೂ, ಕಳ್ಳತನವಾದ ದ್ವಿಚಕ್ರವಾಹನದ ಚಾಸಿಸ್ ನಂಬರ್ ಹಾಗೂ ಎಂಜಿನ್ ನಂಬರ್ ಅನ್ನು ವಾಹನ ಮಾಲೀಕರಿಂದ ಪೊಲೀಸರು ಪಡೆಯುತ್ತಾರೆ. ಈ ಆಧಾರದ ಮೇಲೆ ಸಾಕ್ಷ್ಯ ಸಮೇತ ಕಳ್ಳತನವಾದ ಬೈಕ್ ಅನ್ನು ಪೊಲೀಸರು ಪತ್ತೆ ಹಚ್ಚುತ್ತಾರೆ.
ಮಾಲೀಕರ ಅಸಹಕಾರ: ರಸ್ತೆ ಅಪಘಾತದಲ್ಲಿ ಜಪ್ತಿಯಾದ ವಾಹನಗಳನ್ನು ಕೆಲ ಮಾಲೀ ಕರು ಬಿಡಿಸಿಕೊಳ್ಳುವುದಿಲ್ಲ. ಈ ಬಗ್ಗೆ 2-3 ಬಾರಿ ನೋಟಿಸ್ ಕೊಟ್ಟರೂ ಮಾಲೀಕರು ಪ್ರತಿಕ್ರಿಯಿಸುವುದಿಲ್ಲ. ಮತ್ತೂಂದೆಡೆ ಪೊಲೀಸರನ್ನು ಕಂಡು ಸ್ಥಳದಲ್ಲಿ ಬಿಟ್ಟು ಹೋಗುವ ವಾಹನಗಳು ಅಧಿಕ ಸಂಖ್ಯೆಯಲ್ಲಿವೆ. ನಂಬರ್ ಪ್ಲೇಟ್ ಬದಲಾಯಿಸಿದ ವಾಹನಗಳ ಮಾಲೀಕರ ಪತ್ತೆ ದೊಡ್ಡ ಸವಾಲು. ವಾಹನ ಚಾರ್ಸಿ ನಂಬರ್, ಎಂಜಿನ್ ನಂಬರ್ ನೊಂದಾಯಿಸಿ ಆರ್‌ಟಿಓಗೆ ಮಾಹಿತಿ ನೀಡಿ ಮಾಲೀಕರಿಗೆ(ಹೊರ ರಾಜ್ಯ ಸೇರಿ) ನೋಟಿಸ್ ನೀಡುತ್ತೇವೆ. ಕೆಲವರು ಬಂದರೆ, ಬಹುತೇಕ ಮಂದಿ ಆಸಕ್ತಿ ತೋರುವುದಿಲ್ಲ. ಕೆಲವೊಮ್ಮೆ ವಿಳಾಸ ತಪ್ಪಾಗಿರುತ್ತದೆ. ಮಾಲೀಕರು ವಾಹನ ಮಾರಾಟ ಮಾಡಿದ್ದೇವೆ ಎನ್ನುತ್ತಾರೆ. ಅಂತಹ ವಾಹನಗಳು ಹೆಚ್ಚಾಗಿವೆ ಎನ್ನುತ್ತಾರೆ ಪೊಲೀಸರು.
ಐಶಾರಾಮಿ ವಾಹನಗಳಿಗೆ ಹೆಚ್ಚಿನ ಬೇಡಿಕೆ: ರಾಜ್ಯಾದ್ಯಂತ ದ್ವಿಚಕ್ರವಾಹನ ಕಳ್ಳತನ ಪ್ರಕರಣಗಳಲ್ಲಿ ಶೇ.70 ರಾಜ್ಯ ರಾಜಧಾನಿ ಪಾಲಾದರೆ, ಇನ್ನುಳಿದ ಶೇ.25 ಇತರ ಪ್ರಮುಖ ನಗರಗಳಲ್ಲಿ ನಡೆಯುತ್ತಿವೆ. ಗ್ರಾಮೀಣ ಭಾಗಗಳಲ್ಲಿ ಶೇ.5 ದ್ವಿಚಕ್ರವಾ ಹನ ಕಳವು ಕೇಸ್ ದಾಖಲಾಗುತ್ತಿದೆ. ಕದ್ದ ಆಕ್ಟಿವಾ, ಜ್ಯುಪಿಟರ್‌ನಂತಹ ಗೇರ್‌ಲೆಸ್ ದ್ವಿಚಕ್ರವಾಹನಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಇವುಗಳನ್ನು ಖರೀದಿಸಲೆಂದೇ ಕೆಲ ಗ್ಯಾರೆಜ್ ಮಾಲೀಕರು ಹಾಗೂ ದ್ವಿಚಕ್ರವಾಹನ ಏಜೆಂಟರು ಕಳ್ಳರ ಜತೆಗೆ ನಿರಂತರ ಸಂಪರ್ಕದಲ್ಲಿರುವುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿದೆ. ಐಶಾರಾಮಿ ರಾಯಲ್ ಎನ್‌ಫೀಲ್ಡ್, ಕೆಟಿಎಂ ಡ್ನೂಕ್, ಬಿಎಂಡಬ್ಲ್ಯೂ ಸೇರಿ ಇನ್ನಿತರ ಐಶಾರಾಮಿ ಬೈಕ್‌ಗಳ ಬಿಡಿ ಭಾಗಗಳನ್ನು ಮಾರಾಟ ಮಾಡುವ ಜಾಲವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬೈಕ್ ಕಳ್ಳರ ಮೇಲೆ ನಿಗಾ ಇಡಲಾಗಿದ್ದು, ಈಗಾಗಲೇ ಹಲವು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ ಮೌಲ್ಯಯುತ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಚಾರ್ಸಿ ನಂಬರ್ ಮತ್ತು ತಾಂತ್ರಿಕ ಕಾರ್ಯಾಚರಣೆಯಿಂದ ಕಳವು ಬೈಕ್‌ಗಳನ್ನು ಪತ್ತೆ ಹಚ್ಚಿ, ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. -ವಿನಾಯಕ್ ಪಾಟೀಲ್, ಉತ್ತರ ವಿಭಾಗ ಡಿಸಿಪಿ
-ಮೋಹನ್ ಭದ್ರಾವತಿ/ಅವಿನಾಶ್ ಮೂಡಂಬಿಕಾನ