Advertisement

ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್‌ ನಿಲ್ದಾಣಕ್ಕೆ “ತುಕ್ಕು’!

01:07 AM Jan 16, 2020 | Team Udayavani |

ಮಹಾನಗರ: ತುಕ್ಕು ಹಿಡಿದು ಸವೆದಿರುವ, ಬುಡವೇ ಇಲ್ಲದೆ ಛಾವಣಿ ಜತೆ ನೇತಾಡುವ ಕಂಬಗಳು, ಪಕ್ಕದ ಆವರಣಗೋಡೆ ಮೇಲೆ ನಿಂತಿರುವ ಛಾವಣಿ, ತಂಗುದಾಣ ತುಂಬಾ ವಾಹನ, ಮಳೆ, ಬಿಸಿಲಿಗೆ ನಿಂತುಕೊಳ್ಳುವ ಪ್ರಯಾಣಿಕರು ಮತ್ತು ಬಸ್‌ ಸಿಬಂದಿ…

Advertisement

ಇದು ಸ್ಟೇಟ್‌ಬ್ಯಾಂಕ್‌ನಲ್ಲಿರುವ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್‌ ತಂಗುದಾಣದ ದುಃಸ್ಥಿತಿ. ನಿತ್ಯ ನೂರಾರು ಮಂದಿ ಪ್ರಯಾಣಿಕರು ಬಂದು ಹೋಗುವ ಈ ಬಸ್‌ ತಂಗುದಾಣ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದ್ದು, ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಆತಂಕ ಎದುರಾಗಿದೆ.

ವಾಸ್ತವದಲ್ಲಿ ಇದು ನಗರದ ಖಾಸಗಿ ಸರ್ವಿಸ್‌ ಬಸ್‌ ನಿಲ್ದಾಣ. ಇದೇ ಬಸ್‌ ನಿಲ್ದಾಣದ ಒಂದು ಬದಿಯಲ್ಲಿ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್‌ಗಳ ನಿಲುಗಡೆಗೆ ಅವಕಾಶ ಮಾಡಿ ಕೊಡಲಾಗಿದೆ. ಪ್ರಯಾಣಿಕರು ತಂಗಲು, ಬಸ್‌ ಸಿಬಂದಿ ಕುಳಿತುಕೊಳ್ಳಲು ತಂಗುದಾಣ ಮಾದರಿಯಲ್ಲಿ ವ್ಯವಸ್ಥೆ ಮಾಡಿಕೊಡಲಾಗಿತ್ತು. ಆದರೆ ಪ್ರಸ್ತುತ ಈ “ತಂಗುದಾಣ’ದಲ್ಲಿ ಕಬ್ಬಿಣದ ಕಂಬಗಳ ಮೇಲೆ ಸಿಮೆಂಟ್‌ ಶೀಟಿನ ಛಾವಣಿ ನಿರ್ಮಿಸಲಾಗಿತ್ತು. ಆದರೆ ಈಗ ಇದರ ಕಂಬಗಳಿಗೆ ತುಕ್ಕು ಹಿಡಿದಿವೆ. ಕೆಲವು ನೇತಾಡುತ್ತಿವೆ. ಇನ್ನು ಕೆಲವು ಸವೆದು ಹೋಗಿವೆ. ಛಾವಣಿಯ ಒಂದು ಪಾರ್ಶ್ವ ಪೂರ್ಣವಾಗಿ ಆವರಣ ಗೋಡೆ ಮೇಲಿದೆ. ಕುಸಿದು ಬೀಳುವ ಭೀತಿ ಉಂಟಾಗಿದೆ.

ದಿನಕ್ಕೆ 100ಕ್ಕೂ ಅಧಿಕ ಟ್ರಿಪ್‌
ಖಾಸಗಿ ನಿಲ್ದಾಣದ ಮೂಲೆಯಲ್ಲಿ ಒಂದಿಷ್ಟು ಜಾಗವನ್ನು ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ನೀಡಲಾಗಿದೆಯಾದರೂ ಇಲ್ಲಿನ ಬಸ್‌ಗಳಿಗೆ ಪ್ರಯಾಣಿಕರಿಂದ ಭಾರೀ ಬೇಡಿಕೆ ಇದೆ.

ಪುತ್ತೂರು, ವಿಟ್ಲ, ಧರ್ಮಸ್ಥಳ, ಬಿ.ಸಿ.ರೋಡ್‌ ಮೊದಲಾದ ಗ್ರಾಮೀಣ ಭಾಗಗಳಿಗೆ ದಿನಕ್ಕೆ ಸುಮಾರು 30 ಬಸ್‌ಗಳು ಒಟ್ಟು 100ಕ್ಕೂ ಅಧಿಕ ಬಾರಿ ಸಂಚಾರ ನಡೆಸುತ್ತವೆ. ಬಹುತೇಕ ಎಲ್ಲ ಬಸ್‌ಗಳು ಕೂಡ ಪ್ರಯಾಣಿಕರಿಂದ ಭರ್ತಿಯಾಗುತ್ತವೆ. ಸರಕಾರಿ ಕಾಲೇಜು, ಬದ್ರಿಯಾ, ರೊಜಾರಿಯೋ ಮೊದಲಾದ ವಿದ್ಯಾ ಸಂಸ್ಥೆಗಳ ನೂರಾರು ವಿದ್ಯಾ ರ್ಥಿಗಳು, ಇತರೆ ಸಾರ್ವಜನಿಕರು ಈ ಬಸ್‌ಗಳನ್ನು ಅವಲಂಬಿಸಿದ್ದಾರೆ. ಅಲ್ಲದೆ ಭಟ್ಕಳ, ಮಣಿಪಾಲ ಕಡೆಗೆ ಹೋಗುವ ಬಸ್‌ಗಳಿಗೆ ಕೂಡ ಇದು ನಿಲ್ದಾಣವಾಗಿದೆ. ಆದರೆ ಬಸ್‌ಗಾಗಿ ಕಾದು ನಿಲ್ಲುವುದಕ್ಕೆ ಜಾಗವಿಲ್ಲ. ಮಳೆಗಾಲಕ್ಕೆ ಮತ್ತಷ್ಟು ದುಸ್ಥಿತಿ. ನಿಲ್ದಾಣದಲ್ಲಿ ಹೊಂಡಗಳೂ ಹೆಚ್ಚುತ್ತಿವೆ.

Advertisement

ಇಲ್ಲಿಯೇ ಪಕ್ಕದಲ್ಲಿ ಶೌಚಾಲಯವಿದೆ. ಆದರೆ ಆ ಶೌಚಾಲಯಕ್ಕೆ ತೆರಳುವುದಕ್ಕೂ ಸ್ಥಳಾವಕಾಶವಿಲ್ಲ. ಕೆಲವು ಮಂದಿ ಹೊರಭಾಗದಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಾರೆ. ರಾತ್ರಿ ಸಮರ್ಪಕ ವಿದ್ಯುತ್‌ ದೀಪದ ವ್ಯವಸ್ಥೆಯೂ ಇಲ್ಲ. ಕತ್ತಲಾ ಗುತ್ತಿದ್ದಂತೆಯೇ ಸೊಳ್ಳೆಗಳ ಉಪಟಳ. ಕೆಎಸ್‌ಆರ್‌ಟಿಸಿ ಸಿಬಂದಿ, ಅಧಿಕಾರಿಗಳು ಅಸಹಾಯಕರಾಗಿ ಕೆಲಸ ಮಾಡಬೇಕಿದೆ.

ನಮ್ಮ ನಿಯಂತ್ರಣದಲ್ಲಿಲ್ಲ
ಇದು ಕೆಎಸ್‌ಆರ್‌ಟಿಸಿಗೆ ಸೇರಿದ ಜಾಗವಲ್ಲ. ಮಹಾನಗರ ಪಾಲಿಕೆ ಇದರ ನಿರ್ವಹಣೆ ಮಾಡುತ್ತದೆ. ನಾವು ಇಲ್ಲಿ ನಮ್ಮ ಸಂಚಾರ ನಿಯಂತ್ರಕರ ಕಚೇರಿ(ಟಿಸಿ ಪಾಯಿಂಟ್‌) ಮಾಡಿದ್ದೇವೆ. ಸಾರ್ವಜನಿಕರಿಗೆ ಸಾಧ್ಯವಾದಷ್ಟು ಉತ್ತಮ ಸೇವೆ ನೀಡಲು ಪ್ರಯತ್ನಿಸುತ್ತಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಸಂಚಾರ ನಿಯಂತ್ರಕರೊಬ್ಬರು ಉದಯವಾಣಿ ಸುದಿನಕ್ಕೆ ತಿಳಿಸಿದ್ದಾರೆ.

ಒಂದು ಬದಿಯಲ್ಲಿ ಶೌಚಾಲಯ, ಇನ್ನೊಂದು ಬದಿ ಮೀನು ಮಾರುಕಟ್ಟೆ, ಇತರ ವಾಹನಗಳ ನಡುವೆ ಸಂಚಾರ ನಿಯಂತ್ರಕರ ಕಚೇರಿ ಇದೆ.

ತುಂಬಿದ ಹಳೆವಾಹನ
ಪ್ರಯಾಣಿಕರು ತಂಗಲು ಮೀಸಲಿಟ್ಟ ಜಾಗವನ್ನು ವಾಹನಗಳು ಆವರಿಸಿ ಕೊಂಡಿವೆ. ಕೆಟ್ಟು ಹೋದ ರಿಕ್ಷಾ ಟೆಂಪೋಗಳನ್ನು ಕೂಡ ಇಲ್ಲಿ ನಿಲ್ಲಿಸಿ ಅವುಗಳನ್ನು ಕೆಲವು ಅಂಗಡಿಯವರು ಗೋದಾಮಿನ ರೀತಿಯಲ್ಲಿ ಉಪಯೋಗಿಸುತ್ತಿದ್ದಾರೆ. ದ್ವಿಚಕ್ರ ವಾಹನಗಳನ್ನು ಕೂಡ ಬೇಕಾಬಿಟ್ಟಿಯಾಗಿ ನಿಲುಗಡೆ ಮಾಡಲಾಗಿದೆ. ಈ ಹಿಂದೆ ಇಲ್ಲಿ ಹಲವು ಸಿಮೆಂಟ್‌ ಬೆಂಚುಗಳಿದ್ದವು. ಆದರೆ ಈಗ ಒಂದು ಮಾತ್ರ ಇದೆ. ಅದು ಕೂಡ ಮುರಿದು ಹೋಗಿದೆ. ಪ್ರಯಾಣಿಕರು, ಬಸ್‌ ಸಿಬಂದಿ, ಸಂಚಾರ ನಿಯಂತ್ರಕರು ಅತ್ತಿಂದಿತ್ತ ಮುಕ್ತವಾಗಿ ಸಂಚರಿಸುವುದಕ್ಕೂ ಸ್ಥಳಾವಕಾಶವಿಲ್ಲ.

ಸ್ಮಾರ್ಟ್‌ ಸಿಟಿಯಲ್ಲಿ ಪ್ರಸ್ತಾವನೆ
ಬಸ್‌ ನಿಲ್ದಾಣವನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಇದೆ. ಆ ಸಂದರ್ಭ ಅಗತ್ಯ ಸೌಕರ್ಯ ಒದಗಿಸಿಕೊಡಲಾಗುವುದು. ಪ್ರಮುಖ ಸಮಸ್ಯೆಗಳ ಬಗ್ಗೆ ಕೂಡಲೇ ಪಾಲಿಕೆ ಪರಿಶೀಲನೆ ನಡೆಸಲಿದೆ.
– ಗಾಯತ್ರಿ,ಉಪ ಆಯುಕ್ತರು (ಕಂದಾಯ), ಪಾಲಿಕೆ

ಕುಳಿತುಕೊಳ್ಳಲು ಜಾಗವಿಲ್ಲ
ಬಸ್‌ಗಾಗಿ ಕಾದು ಕುಳಿತುಕೊಳ್ಳಲು ಜಾಗವಿಲ್ಲ. ಸ್ವತ್ಛತೆಯೂ ಇಲ್ಲ. ಸರಿಯಾದ ದೀಪದ ವ್ಯವಸ್ಥೆ ಇಲ್ಲ. ಬಸ್‌ಗಳ ಬಗ್ಗೆ ವಿಚಾರಿಸಲು ಸಂಚಾರ ನಿಯಂತ್ರಕರ ಬಳಿ ತೆರಳುವುದು ಕೂಡ ಕಷ್ಟವಾಗುತ್ತದೆ.
-ಪವಿತ್ರಾ,
ವಿದ್ಯಾರ್ಥಿನಿ, ವಿಟ್ಲ

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next