ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 2036ರವರೆಗೂ ಅಧಿಕಾರದ ಗದ್ದುಗೆಯಲ್ಲಿರುವ ರಷ್ಯಾ ಜನರು ಮತ ಚಲಾಯಿಸುವ ಮೂಲಕ ಹಾದಿಯನ್ನು ಸುಗಮಗೊಳಿಸಿರುವುದಾಗಿ ವರದಿ ತಿಳಿಸಿದೆ. ದೇಶಾದ್ಯಂತ ನಡೆದ ಮತ ಚಲಾವಣೆಯಲ್ಲಿ ಪುಟಿನ್ ಅಗ್ರ ಸ್ಥಾನ ಪಡೆದಿರುವುದಾಗಿ ವರದಿ ಹೇಳಿದೆ.
ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಧ್ಯಕ್ಷ ಸ್ಥಾನದ ಅಧಿಕಾರದ ಅವಧಿ 2024ಕ್ಕೆ ಕೊನೆಗೊಳ್ಳಬೇಕಾಗಿತ್ತು. ಆದರೆ ಪುಟಿನ್ ಅಧಿಕಾರದಲ್ಲಿ ಮುಂದುವರಿಯುವ ನಿಟ್ಟಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಮತ್ತೆ 12 ವರ್ಷಗಳವರೆಗೆ ನಿರಾತಂಕವಾಗಿ ಅಧಿಕಾರ ಚಲಾಯಿಸುವ ಅಧಿಕಾರಕ್ಕೆ ರಷ್ಯಾ ಸಂಸತ್ತು ಇತ್ತೀಚೆಗೆ ಹಸಿರು ನಿಶಾನೆ ತೋರಿಸಿತ್ತು.
ರಷ್ಯಾದ 383 ಸಂಸದರು ಸಂವಿಧಾನ ತಿದ್ದುಪಡಿ ಪರವಾಗಿ ಮತ ಚಲಾಯಿಸಿದ್ದು, 43 ಸಂಸದರು ಮತದಾನಕ್ಕೆ ಗೈರಾಗಿದ್ದರು. ಸಂಸತ್ ನ ಮೇಲ್ಮನೆಯೂ ತಿದ್ದುಪಡಿಗೆ ಒಪ್ಪಿಗೆ ನೀಡಿತ್ತು. ನಿಗದಿಯಂತೆ ಉದ್ದೇಶಿತ ತಿದ್ದುಪಡಿಗೆ ಏಪ್ರಿಲ್ 22ರಂದು ದೇಶಾದ್ಯಂತ ಸಾರ್ವತ್ರಿಕ ಮತದಾನ ನಡೆಯಬೇಕಾಗಿತ್ತು. ಆದರೆ ಕೋವಿಡ್ 19 ಹಿನ್ನೆಲೆಯಲ್ಲಿ ಜುಲೈ 1ರಂದು ನಡೆದಿರುವುದಾಗಿ ವರದಿ ತಿಳಿಸಿದೆ.
ಆರಂಭಿಕ ಫಲಿತಾಂಶದ ಪ್ರಕಾರ ಕೆಜಿಬಿ ಮಾಜಿ ಅಧಿಕಾರಿ ಪುಟಿನ್ ಎರಡು ದಶಕಕ್ಕೂ ಹೆಚ್ಚು ಕಾಲ ಅಧ್ಯಕ್ಷರಾಗಿ/ಪ್ರಧಾನಿಯಾಗಿ ಅಧಿಕಾರ ಚಲಾಯಿಸಿದಂತಾಗಿದೆ. ಅಂದರೆ ಪುಟಿನ್ ಮತ್ತೆ 16 ವರ್ಷಕ್ಕೂ ಹೆಚ್ಚು ಕಾಲ ರಷ್ಯಾದ ಅಧ್ಯಕ್ಷಗಾದಿಯಲ್ಲಿ ಮುಂದುವರಿದಂತಾಗಿದೆ. ಪೂರ್ಣ ಫಲಿತಾಂಶ ಇನ್ನಷ್ಟೇ ಘೋಷಣೆಯಾಗಬೇಕಾಗಿದೆ ಎಂದು ವರದಿ ಹೇಳಿದೆ.