Advertisement
ಹೀಗೆಂದು ತಮ್ಮ ದೇಶದ ಪ್ರಜೆಗಳಲ್ಲಿ ಸಮಯ ಕೇಳಿದವರು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್. ಇದು ಭಯೋತ್ಪಾದನೆಯನ್ನು ನಿಗ್ರಹಿಸಲು ಯಾವುದೇ ರಾಷ್ಟ್ರ ಮಾಡಿದ ಶಪಥ ಅಲ್ಲ.ಚುನಾವಣೆ ಸಂದರ್ಭ ಕೇಳಿಬರುವ ಆಶ್ವಾಸನೆಗಳಲ್ಲ. ಬದಲಾಗಿ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕೋವಿಡ್ 19 ವಿರುದ್ಧದ ಘೋಷಣೆ. ಕೋವಿಡ್ 19 ಜಗತ್ತಿನಾದ್ಯಂತ 27 ಸಾವಿರಕ್ಕೂ ಅಧಿಕ ಜೀವಗಳನ್ನು ಬಲಿ ಪಡೆದಿದೆ. ಇನ್ನೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ಇತರ ದೇಶಗಳಿಗೆ ಹೋಲಿಸಿದರೆ ಚೀನ ಮತ್ತು ದ. ಕೊರಿಯಾದಲ್ಲಿ ಹರಡುವಿಕೆಯ ಪ್ರಮಾಣ ಕಡಿಮೆಯಾಗಿದೆ. ಈ ಮಧ್ಯೆ ಪುಟಿನ್ ಪುಟಿದೆದ್ದಿದ್ದಾರೆ.
ಸುದ್ದಿ ಸಂಸ್ಥೆ ಕ್ಸಿನುವಾ, ಈ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಸಾಮರ್ಥ್ಯ ರಷ್ಯಾಕ್ಕೆ ಇದೆ. ಎರಡು ಅಥವಾ ಮೂರು ತಿಂಗಳಲ್ಲಿ ರಷ್ಯಾವು ಕೋವಿಡ್ 19 ವೈರಸ್ ವಿರುದ್ಧದ ಸಮರದಲ್ಲಿ ಜಯಿಸಲಿದೆ ಎಂದು ಪುಟಿನ್ ಹೇಳಿರುವುದಾಗಿ ವರದಿ ಮಾಡಿದೆ. ಶುಕ್ರವಾರವಷ್ಟೇ ನೊಬೆಲ್ ಪ್ರಶಸ್ತಿ ವಿಜೇತ ಮತ್ತು ಸ್‌ಟ್ಯಾನ್‌ಫೋರ್ಡ್ ಜೈವಿಕ ಭೌತಶಾಸ್ತ್ರಜ್ಞ ಮೈಕೆಲ್ ಲೆವಿಟ್ ಅವರು ಕೋವಿಡ್ 19 ಕೆಲವೇ ದಿನಗಳ ಅತಿಥಿ ಎಂದು ಹೇಳಿರುವುದನ್ನು ನಾವಿಲ್ಲಿ ಸ್ಮರಿಸಬಹುದು. ಮೈಕೆಲ್ 2013ರಲ್ಲಿ ರಸಾಯನಶಾಸ್ತ್ರ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದರು. ಇತ್ತೀಚಿನ ಮಾಹಿತಿಯ ಪ್ರಕಾರ, ರಷ್ಯಾದಲ್ಲಿ ಸೋಂಕಿತರ ಸಂಖ್ಯೆ 840ಕ್ಕೆ ತಲುಪಿದೆ. ಇದರಲ್ಲಿ ಮಾಸ್ಕೋದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಈವರೆಗೆ 38 ಜನರು ಚೇತರಿಸಿಕೊಂಡಿದ್ದು, ಇಬ್ಬರು ಬಲಿಯಾಗಿದ್ದಾರೆ.