Advertisement

ರಷ್ಯಾ ಬಳಿಯಿದೆ 12 ಲಕ್ಷ ಕೋಟಿ ರೂ.!

08:32 PM Jun 01, 2023 | Team Udayavani |

ಬ್ಲೂಮ್‌ಬರ್ಗ್‌: ಉಕ್ರೇನ್‌ ಮೇಲೆ ಮುಗಿಬಿದ್ದು ಆರ್ಥಿಕ ದಿಗ್ಬಂಧನಕ್ಕೊಳಗಾಗಿ ಪರದಾಡುತ್ತಿರುವ ರಷ್ಯಾ ಒಂದು ವಿಚಿತ್ರ ಪೀಕಲಾಟದಲ್ಲಿ ಸಿಕ್ಕಿಬಿದ್ದಿದೆ.

Advertisement

ಭಾರತಕ್ಕೆ ಅದು ಪೆಟ್ರೋಲ್‌-ಡೀಸೆಲ್‌ ಸೇರಿದಂತೆ ಕೆಲವು ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಅದಕ್ಕೆ ಪ್ರತಿಯಾಗಿ ಭಾರತ ರೂಪಾಯಿಯಲ್ಲಿ ಪಾವತಿ ಮಾಡುತ್ತಿದೆ. ಹೀಗಾಗಿ ರಷ್ಯಾ 147 ಬಿಲಿಯನ್‌ ಡಾಲರ್‌ (12 ಲಕ್ಷ ಕೋಟಿ ರೂ.) ಮೌಲ್ಯದ ರೂಪಾಯಿಗಳನ್ನು ಹೊಂದಿದೆ.

ಆದರೆ ಅದನ್ನು ಹೇಗೆ ಖರ್ಚು ಮಾಡುವುದು ಎಂದು ತಿಳಿಯದೇ ಒದ್ದಾಡುತ್ತಿದೆ. ರಷ್ಯಾದ ಬ್ಯಾಂಕುಗಳು, ಅದರ ಕರೆನ್ಸಿ ರೂಬೆಲ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಷೇಧವಿದೆ. ಆ ದೇಶದ ಕರೆನ್ಸಿ ತನ್ನ ಮೌಲ್ಯವನ್ನೇ ಕಳೆದುಕೊಂಡಿದೆ. ಇಂತಹ ಹೊತ್ತಿನಲ್ಲಿ ಅದಕ್ಕೆ ಆಸರೆಯಾಗಿರುವುದು ಭಾರತ. ಆದರೆ ಭಾರತದೊಂದಿಗೆ ವ್ಯಾಪಾರ ನಡೆಸಿದರೂ, ಅದಕ್ಕೆ ಉಪಯೋಗವಾಗುತ್ತಿಲ್ಲ.

ಭಾರತ ರಷ್ಯಾದಿಂದ ತರಿಸಿಕೊಳ್ಳುತ್ತಿದ್ದರೂ, ರಫ್ತು ಮಾಡುವ ಪ್ರಮಾಣ ತೀರಾ ಕಡಿಮೆಯಿದೆ. ಆಮದು-ರಫ್ತು ಪ್ರಮಾಣ ಒಂದು ಹಂತದಲ್ಲೇನಾದರೂ ಇದ್ದಿದ್ದರೆ ಹಾಗೆಯೇ ಸರಿಹೊಂದಿಸಬಹುದಿತ್ತು. ಅದೂ ಆಗುತ್ತಿಲ್ಲ. ಭಾರತದ ಕರೆನ್ಸಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಸಲು ರಷ್ಯಾಕ್ಕೆ ಆಗುತ್ತಿಲ್ಲ. ಪ್ರತೀ ತ್ತೈಮಾಸಿಕದಲ್ಲಿ ಅಸಮತೋಲನ 2ರಿಂದ 3 ಬಿಲಿಯನ್‌ ಡಾಲರ್‌ ಮೌಲ್ಯದ ರೂಪಾಯಿ ಸಂಗ್ರಹ ಹೆಚ್ಚಾಗುತ್ತಲೇ ಇದೆ. ಭಾರತವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಕರೆನ್ಸಿ ಬಳಕೆಯನ್ನು ಹೆಚ್ಚಿಸಬೇಕೆಂಬ ಉದ್ದೇಶ ಹೊಂದಿದೆ.

ಹಾಗಾಗಿ ಭಾರತಕ್ಕೆ ರಫ್ತು ಮಾಡುವ ದೇಶಗಳಿಗೆ ಹೆಚ್ಚುವರಿ ರೂಪಾಯಿಯಲ್ಲೇ ಪಾವತಿ ಮಾಡುತ್ತಿದೆ. ರೂಪಾಯಿ ಉಳಿದರೆ, ಅದನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಆರ್‌ಬಿಐ ವಿದೇಶಿ ಕಂಪನಿಗಳಿಗೆ ಸಲಹೆ ನೀಡಿದೆ.

Advertisement

ರಷ್ಯಾಕ್ಕಿರುವ ಆಯ್ಕೆಗಳೇನು?: ಭಾರತೀಯ ಬ್ಯಾಂಕುಗಳಲ್ಲಿ ಸಂಗ್ರಹವಾಗಿರುವ ರೂಪಾಯಿಯನ್ನು, ಭಾರತೀಯ ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡಿ, ಕಾಲಾನುಕ್ರಮದಲ್ಲಿ ಅದರ ಲಾಭ ಪಡೆಯಬಹುದು ಎಂಬ ಆಯ್ಕೆಯೂ ರಷ್ಯಾ ಮುಂದಿದೆ. ಆರಂಭದಲ್ಲಿ ಇದಕ್ಕೆ ಒಪ್ಪದಿದ್ದರೂ, ಸದ್ಯ ಇದೇ ರಷ್ಯಾ ಮುಂದಿರುವ ಉತ್ತಮ ಆಯ್ಕೆ ಎನಿಸಿದೆ. ಇನ್ನು ರಷ್ಯಾ ಮೂರನೇ ರಾಷ್ಟ್ರವಾದ ಚೀನಾದ ಯುವಾನ್‌, ಯುಎಇಯ ದಿರ್ಹಾಮ್‌ ಕರೆನ್ಸಿಯನ್ನು ಬಳಸಬಹುದು. ಇನ್ನೂ ಮುಖ್ಯವಾಗಿ ಭಾರತಕ್ಕೆ ಸರಿಸಮನಾಗಿ ರಷ್ಯಾದಿಂದ ತೈಲವನ್ನು ತರಿಸಿಕೊಳ್ಳುವ ರಾಷ್ಟ್ರಗಳು ತೀರಾ ಕಡಿಮೆಯಿವೆ. ಯಾವುದೇ ರೀತಿಯಲ್ಲಿ ನೋಡಿದರೂ ವಿಶ್ವದ ಬಹುತೇಕ ರಾಷ್ಟ್ರಗಳು ಹೇರಿರುವ ಆರ್ಥಿಕ ದಿಗ್ಬಂಧನ ಆ ದೇಶಕ್ಕೆ ಹೊರೆಯಾಗಿದೆ.

ರಷ್ಯಾದ ಸಂಕಷ್ಟಕ್ಕೆ ಇನ್ನೊಂದು ಮುಖ್ಯ ಕಾರಣವಿದೆ. ಆ ದೇಶದ ಬ್ಯಾಂಕುಗಳು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನಿಷೇಧಕ್ಕೊಳಗಾಗಿವೆ. ಹಾಗಾಗಿ ಅನ್ಯದೇಶಗಳಿಂದ ಹಣ ಪಡೆಯಲು ಕಷ್ಟವಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next