Advertisement

 ’ಎದೆ ತುಂಬಿ ಹಾಡುವೆನು’ಮೂಲಕ ಮನೆಮಾತಾದ ಸಂದೇಶ್‌ ನೀರುಮಾರ್ಗ

09:27 AM Sep 27, 2021 | Team Udayavani |

ಮಹಾನಗರ: ಸಾಧಿಸುವ ಛಲ ಇದ್ದರೆ ಯಾವುದೇ ಅಡೆ ತಡೆ ಮೀರಿ ಗೆಲುವು ಸಾಧಿಸಬಹುದು ಎಂಬುವುದಕ್ಕೆ ಇವರು ಉತ್ತಮ ಉದಾಹರಣೆ. ಮನೆಯಲ್ಲಿ ಕಡು ಬಡತನ ಇದ್ದರೂ ಸಂಗೀತಕ್ಕೆ ಇದು ಅಡ್ಡಿಯಾಗಲಿಲ್ಲ. ತನ್ನ ಸ್ವ -ಆಸಕ್ತಿಯಿಂದ ಸಂಗೀತ ಕಲಿತು ಇದೀಗ ಕರುನಾಡಿನಲ್ಲಿ ಮನೆಮಾತಾದ ಕರಾವಳಿಯ ಹಾಡುಗಾರ ಸಂದೇಶ್‌ ನೀರುಮಾರ್ಗ ಅಪ್ಪಟ ಗ್ರಾಮೀಣ ಪ್ರತಿಭೆ.

Advertisement

ಕಲರ್ ಕನ್ನಡ ವಾಹಿನಿಯಲ್ಲಿ ಪ್ರಸಾರ ವಾಗುತ್ತಿರುವ “ಎದೆ ತುಂಬಿ ಹಾಡುವೆನು’ ರಿಯಾಲಿಟಿ ಶೋ ಮುಖೇನ ತನ್ನ ವಿಶಿಷ್ಟ ಹಾಡುಗಳ ಮೂಲಕ ಮೋಡಿ ಮಾಡುತ್ತಿದ್ದಾರೆ ಸಂದೇಶ್‌.

ಭಜನೆಯತ್ತ ಆಸಕ್ತಿ
ನೀರುಮಾರ್ಗದ ತನ್ನ ಮನೆಯ ಪಕ್ಕದಲ್ಲಿಯೇ ಸುಬ್ರಹ್ಮಣ್ಯ ಭಜನ ಮಂದಿರ ಇದ್ದ ಕಾರಣ ಅದೇ ಅವರಿಗೆ ಮೊದಲ ಕಲಿಕಾ ಶಾಲೆಯಾಗಿತ್ತು. ಬಾಲ್ಯದಲ್ಲಿಯೇ ಭಜನೆಯತ್ತ ಆಸಕ್ತಿ ಹೊಂದಿದ ಇವರು ಬಳಿಕ ಹಲವಾರು ಏಳು ಬೀಳು ಕಂಡು ಸದ್ಯ ಈ ಶೋನ ಟಾಪ್‌ ಸಿಂಗರ್‌ ಆಗಿ ಹೊರಹೊಮ್ಮುತ್ತಿದ್ದಾರೆ.

ಗಾಯನಕ್ಕೆ ಸಂಗೀತ ದಿಗ್ಗಜರಾದ ರಾಜೇಶ್‌ ಕೃಷ್ಣನ್‌, ಗುರುಕಿರಣ್‌, ಹರಿಕೃಷ್ಣ, ರಘು ದೀಕ್ಷಿತ್‌ ಅವರ ಬಳಿ ಶಹಭಾಸ್‌ ಎನಿಸಿಕೊಂಡ ಸಂದೇಶ್‌ ಅವರು ಹಾಡುಗಾರಿಕೆ ಜತೆ ನಟನೆ ಕೂಡ ಮಾಡಬಲ್ಲರು. ಸಾಹಿತ್ಯದಲ್ಲಿಯೂ ನಿಸ್ಸೀ ಮರು. ಈಗಾಗಲೇ ಹಲವು ಹಾಡುಗಳನ್ನು ಬರೆದಿದ್ದು, ಕಿರುಚಿತ್ರ ನಟನೆಯಲ್ಲಿಯೂ ತನ್ನನ್ನು ಗುರುತಿಸಿಕೊಂಡಿದ್ದಾರೆ.

21 ವರ್ಷಗಳಿಂದ ಭಜನೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ಪತ್ನಿ ಮನಿಷಾ ಸಂದೇಶ್‌ ಕೂಡ ಬೆಂಬಲ ನೀಡುತ್ತಿದ್ದಾರೆ.

Advertisement

ಇದನ್ನೂ ಓದಿ:65 ಗಂಟೆಗಳಲ್ಲಿ 20 ಸಭೆ ನಡೆಸಿದ ಮೋದಿ : ವಿಮಾನ ಪ್ರಯಾಣದ ವೇಳೆಯೂ 4 ಮೀಟಿಂಗ್‌

ಸಾಧನೆಗೆ‌ ಬಡತನ ಅಡ್ಡಿಯಾಗಲಿಲ್ಲ
ತನ್ನ ಪದವಿ ಪೂರ್ಣಗೊಂಡ ಬಳಿಕ ಖಾಸಗಿ ಕೊರಿಯರ್‌ ಸಂಸ್ಥೆಯೊಂದರಲ್ಲಿ ಉದ್ಯೋಗಕ್ಕೆ ಸೇರಿದರು. ಬಳಿಕ ಇವರ ಕೈ ಹಿಡಿದದ್ದು ಚಾಲಕ ವೃತ್ತಿ. ರಿಕ್ಷಾದಲ್ಲಿ ದಿನವಿಡೀ ಬಾಡಿಗೆಗೆ ತೆರಳುತ್ತಿದ್ದರು. ಆದರೆ ಆ ವೇಳೆ ಅಪ್ಪಳಿಸಿದ ಕೋವಿಡ್‌ನಿಂದಾಗಿ ಹೆಚ್ಚಿನ ಬಾಡಿಗೆ ಸಿಗದೇ ಮತ್ತೆ ಸಂಕಷ್ಟ ಅನುಭವಿಸಬೇಕಾಯಿತು. ಆ ವೇಳೆ ರಿಕ್ಷಾ ಚಾಲಕ ದುಡಿಮೆ ಬಿಟ್ಟು, ಕುಲಶೇಖರ ಕೈಕಂಬದಲ್ಲಿ ಮೀನು ಮಾರಾಟ ಮಾಡಲು ಸಂದೇಶ್‌ ಮುಂದಾದರು.

ಕೋವಿಡ್‌ ಅನ್‌ಲಾಕ್‌ ಬಳಿ ಆಹಾರ ಡೆಲಿವರಿ ಬಾಯ್‌ ಆಗಿಯೂ ಕೆಲಸ ನಿರ್ವಹಿಸುತ್ತಿದ್ದರು. ಆಗ ಕಲರ್ ಕನ್ನಡ ವಾಹಿನಿಯ “ಎದೆ ತುಂಬಿ ಹಾಡುವೆನು’ ರಿಯಾಲಿಟಿ ಶೋ ಆಫರ್‌ ಬಂತು.

ಹಾಡುಗಾರನಾಗುವ ಆಸೆಯಿತ್ತು
ನಾನೊಬ್ಬ ಉತ್ತಮ ಹಾಡುಗಾರ ಆಗಬೇಕೆಂಬ ಆಸೆ ಬಾಲ್ಯದಿಂದಲೇ ಇತ್ತು. ಸದ್ಯ ನನಗೆ ದೊಡ್ಡ ವೇದಿಕೆ ಸಿಕ್ಕಿದೆ. ಸಂಗೀತ ಗುರುಗಳ ಮಾರ್ಗದರ್ಶನದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ನೀಡುತ್ತೇನೆ. ಜೀವನದಲ್ಲಿ ಅನೇಕ ಏಳು ಬೀಳುಗಳನ್ನು ನೋಡಿದ್ದು, ಮುಂದಿನ ದಿನಗಳಲ್ಲಿ ಸಂಗೀತ ಕ್ಷೇತ್ರದಲ್ಲೇ ಮುಂದುವರಿಯುತ್ತೇನೆ.
-ಸಂದೇಶ್‌ ನೀರುಮಾರ್ಗ, ಗಾಯಕರು

Advertisement

Udayavani is now on Telegram. Click here to join our channel and stay updated with the latest news.

Next