Advertisement

ನಗರಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಭಾಗದ ರಸ್ತೆಗಳು ಗುಂಡಿಮಯ!

08:30 PM Nov 08, 2021 | Team Udayavani |

ಮಹಾನಗರ: ಅತ್ತ ಗ್ರಾಮೀಣ ಭಾಗವೂ, ಇತ್ತ ಸಿಟಿಯೂ ಅಲ್ಲ; ಆದರೂ ಇಲ್ಲಿನ ಮಂದಿ ಪ್ರಮುಖ ಕೆಲಸಗಳಿಗೆ ನಗರ ಪ್ರದೇಶವನ್ನೇ ಅವಲಂಬಿಸಿದ್ದಾರೆ. ತಿರುವೈಲು, ಪದವು ಪಶ್ಚಿಮ, ಕದ್ರಿ ಪದವು ಮತ್ತು ದೇರೆಬೈಲ್‌ ಉತ್ತರ ಈ ವಾರ್ಡ್‌ ಗಳಲ್ಲಿ ಕೆಲವೊಂದು ಪ್ರದೇಶ ನಗರ ಪ್ರದೇಶಕ್ಕಿಂತ ತುಸು ದೂರವಿದೆ. ಒಳ ರಸ್ತೆಗಳ ಅಭಿವೃದ್ಧಿ ಕಡೆಗೆ ಜನಪ್ರತಿನಿಧಿಗಳು ಮತ್ತಷ್ಟು ಗಮನಹರಿಸಬೇಕಿದೆ.

Advertisement

ವಾಮಂಜೂರು ಬಳಿಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸಂಪರ್ಕಿಸುವ ರಸ್ತೆಯು ಜಲ್ಲಿಯಿಂದ ಕೂಡಿದ್ದು, ಕೆಲವು ಕಡೆಗಳಲ್ಲಿ ಗುಂಡಿ ಬಿದ್ದಿದೆ. ಈ ರಸ್ತೆ ಮತ್ತಷ್ಟು ಅಭಿವೃದ್ಧಿ ಕಂಡರೆ ಸುತ್ತಮುತ್ತಲಿನ ಮನೆಗಳಿಗೆ ದೇವಸ್ಥಾನ ಸಂಪರ್ಕಕ್ಕೆ ಉಪಯೋಗವಾಗಬಹುದು. ವಾಮಂಜೂರು ಜಂಕ್ಷನ್‌ನಿಂದ ಪಿಲಿಕುಳ ಸಂಪರ್ಕಿಸುವ ರಸ್ತೆ ಉತ್ತಮವಾಗಿದ್ದರೂ ಈ ರಸ್ತೆಯಿಂದ ಸಂಪರ್ಕಿಸುವ ಒಳ ರಸ್ತೆಗಳಲ್ಲಿ ಕೆಲವೊಂದು ಕಡೆ ಹೊಂಡ ಸೃಷ್ಟಿಯಾಗಿವೆ. ಮುಖ್ಯರಸ್ತೆಯಿಂದ ಟಿ.ಬಿ. ಆಸ್ಪತ್ರೆ ಸಂಪರ್ಕ ರಸ್ತೆ ಅಭಿವೃದ್ಧಿಯಾಗಬೇಕಿದೆ. ಮುಖ್ಯ ರಸ್ತೆಯಿಂದ ಕೊಳಕೆಬೈಲ್‌, ಓಂಕಾರ ನಗರ ಸಂಪರ್ಕಿಸುವ ರಸ್ತೆಯೂ ಹಾಳಾಗಿದ್ದು, ಕಾಮಗಾರಿಗಾಗಿ ಕಾಯುತ್ತಿದೆ. ಗುರುಪುರ ಸೇತುವೆ ಬಳಿ ಇರುವ ವಿಶ್ವನಾಥ ಮಹಾಗಣಪತಿ ದೇವಸ್ಥಾನ ಸಂಪರ್ಕಿಸುವ ರಸ್ತೆ ಡಾಮರು ಭಾಗ್ಯ ಕಂಡಿದ್ದರೂ ಅಲ್ಲಲ್ಲಿ ಗುಂಡಿ ಬಿದ್ದಿದೆ.

ವಾಮಂಜೂರಿನ ಅಮೃತೇಶ್ವರ ದೇವಸ್ಥಾನ ದ್ವಾರದ ಬಳಿ ಕಿರಿದಾದ ರಸ್ತೆಯಿದೆ. ಈ ರಸ್ತೆಯ ಇಕ್ಕೆಲಗಳಲ್ಲಿ ಹುಲ್ಲಿನಿಂದ ಕೂಡಿದ್ದು, ಕಾರು, ಜೀಪು ಸಂಚಾರ ಕಷ್ಟ. ಈ ರಸ್ತೆ ಹಲವು ಮನೆಗಳನ್ನು ಸಂಪರ್ಕಿಸುತ್ತಿದ್ದು, ಕೆಲವು ದಿನಗಳ ಹಿಂದೆ ಕಾಂಕ್ರೀಟ್‌ ಮಾಡಲಾಗಿದೆ. ರಸ್ತೆಯ ಕೆಲವು ಭಾಗದಲ್ಲಿ ಈಗಾಗಲೇ ಗುಂಡಿ ಸೃಷ್ಟಿಯಾಗಿ ಅಪಾಯ ಆಹ್ವಾನಿಸುತ್ತಿದೆ.

ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರ ಬಳಿ ಅಕ್ಕಪಕ್ಕದ ಮನೆಗಳಿಗೆ ಸಂಪರ್ಕ ಕಲ್ಪಿಸಲು ಸೂಕ್ತ ರಸ್ತೆಯಿಲ್ಲ. ಈಗಾಗಲೇ ಇರುವ ಮಣ್ಣಿನ ರಸ್ತೆ ಅಲ್ಲಲ್ಲಿ ಗುಂಡಿ ಬಿದ್ದು, ವಾಹನ ಸಂಚಾರ ಕಷ್ಟ. ಈಡನ್‌ ಕ್ಲಬ್‌ನಿಂದ ಶಕ್ತಿನಗರ, ಬಿಕರ್ನಕಟ್ಟೆ ಒಳ ರಸ್ತೆಗೆ ಕಾಂಕ್ರೀಟ್‌ ಹಾಕಲಾಗಿದೆ. ಆದರೆ ಈ ಭಾಗದಲ್ಲಿರುವ ಕಿರು ಸೇತುವೆ ಕೆಲವು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಕುಸಿದಿದೆ. ಇದರಿಂದ ಕಾಂಕ್ರೀಟ್‌ ರಸ್ತೆಯೂ ಅಪಾಯದ ಅಂಚಿನಲ್ಲಿದೆ.

ಇದನ್ನೂ ಓದಿ:ವಿಜಯಪುರ : ಜಗತ್ತಿನ ಅದ್ಭುತ ಗೋಲಗುಮ್ಮಟ ಕಂಡು ನಿಬ್ಬೆರಗಾದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್

Advertisement

ಅಲ್ಲಲ್ಲಿ ಗುಂಡಿ; ರಸ್ತೆಯಲ್ಲಿ ನೀರು
ಯೆಯ್ಯಾಡಿ ಬಳಿಯ ಜಂಕ್ಷನ್‌ನಿಂದ ಎಡ ಭಾಗದಲ್ಲಿರುವ ಒಳ ರಸ್ತೆ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್‌ ರಸ್ತೆ ಸಮೀಪಕ್ಕೆ ಸೇರುತ್ತದೆ. ಈ ರಸ್ತೆಯ ಅಕ್ಕ-ಪಕ್ಕದಲ್ಲಿ ಹಲವಾರು ಮನೆಗಳಿದ್ದು, ರಸ್ತೆಯ ಅಲ್ಲಲ್ಲಿ ಗುಂಡಿ ಬಿದ್ದಿದೆ. ಮಳೆ ಬಂದರಂತೂ ಗುಂಡಿ ತುಂಬಾ ನೀರು ತುಂಬಿ ಸಂಚಾರಕ್ಕೆ ತೊಂದರೆಯಾಗುತ್ತದೆ. ದಂಡಕೇರಿ ಸಂಪರ್ಕ ಒಳ ರಸ್ತೆಯ ಅರ್ಧ ಭಾಗ ಕಾಂಕ್ರೀಟ್‌ ಆಗಿದ್ದು, ಮತ್ತರ್ಧ ಭಾಗ ಮಣ್ಣಿನ ರಸ್ತೆ ಇದೆ. ಈ ರಸ್ತೆ ಕವಲೊಡೆದು ಸಾಗುವ ಕಾರಣ, ಅಪಘಾತಕ್ಕೆ ಎಡೆಮಾಡಿಕೊಡುತ್ತಿದೆ. ಗುರುನಗರ ಬಳಿಯ ಶಿವರಾಮ ಕಾರಂತ ಬಡಾವಣೆ ರಸ್ತೆ, ಬ್ರಹ್ಮಶ್ರೀ ನಾರಾಯಣ ಗುರು ರಸ್ತೆಯೂ ಅಲ್ಲಲ್ಲಿ ಗುಂಡಿ ಬಿದ್ದಿದ್ದು, ಇನ್ನಷ್ಟೇ ಕಾಂಕ್ರೀಟ್‌ ಕಾಣಬೇಕಿದೆ. ದಂಡಕೇರಿ ಸಂಪರ್ಕ ಪಡೆಯುವ ಡಾಮರು ರಸ್ತೆ ಅಲ್ಲಲ್ಲಿ ಗುಂಡಿ ಬಿದ್ದು, ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಕಾಂಕ್ರೀಟ್‌ ಕಾಮಗಾರಿ ನಡೆಸಬೇಕು ಎಂಬುವುದು ಸ್ಥಳೀಯರ ಆಗ್ರಹವಾಗಿದೆ. ಈ ಭಾಗದ ಕೆಲವೊಂದು ಓಣಿ ರಸ್ತೆಗಳು ಮತ್ತಷ್ಟು ಅಭಿವೃದ್ಧಿಯಾಗಬೇಕು. ರಸ್ತೆಗಳ ಇಕ್ಕೆಲದಲ್ಲಿ ಹುಲ್ಲು, ಪೊದೆ ತುಂಬಿಕೊಂಡಿದ್ದು, ಇನ್ನಷ್ಟೇ ಕಟಾವು ಮಾಡಬೇಕಿದೆ.

ಅರ್ಧ ಕಾಂಕ್ರೀಟ್‌; ಮತ್ತರ್ಧ ಡಾಮರು
ಉರ್ವದಿಂದ ಕೋಡಿಕಲ್‌ ಸಂಪರ್ಕ ಪಡೆಯುವ ರಸ್ತೆಯೂ ವಿವಿಧೆಡೆ ಗುಂಡಿ ಬಿದ್ದಿದೆ. ಇದೇ ಭಾಗದ ಗಣೇಶ ನಗರ ಬಳಿಯ ಮಂಜಪ್ಪ ಉಳ್ಳಾಲ ರಸ್ತೆಯ ಅರ್ಧ ಭಾಗಕ್ಕೆ ಕಾಂಕ್ರೀಟ್‌ ಹಾಕಲಾಗಿದೆ. ಮತ್ತರ್ಧ ಡಾಮರು ರಸ್ತೆಯಿದ್ದು, ಹೊಂಡ ಗುಂಡಿಯಿಂದ ಕೂಡಿದೆ. ಅಶೋಕನಗರ ಬಳಿಯ ಸೈಂಟ್‌ ಡೊಮೇನಿಕ್‌ ಚರ್ಚ್‌ ಸುತ್ತಮುತ್ತಲಿನ ರಸ್ತೆಯಲ್ಲಿಯೂ ಸುಗಮ ಸಂಚಾರ ಕಷ್ಟಕರ. ಇಲ್ಲಿನ ಒಳರಸ್ತೆಗಳಲ್ಲೂ ಗುಂಡಿಗಳಿದ್ದು, ಕೂಡಲೇ ಅಭಿವೃದ್ಧಿ ಕಾಣಬೇಕಿದೆ. ಸಾಗರ್‌ಕೋರ್ಟ್‌ ಪ್ರಮುಖ ಜನವಸತಿ ಪ್ರದೇಶವಾಗಿದ್ದು, ಇಲ್ಲಿನ ಮಂದಿ ಒಂದಲ್ಲ ಒಂದು ಕಾರಣದಿಂದ ಸಿಟಿಯನ್ನು ಅವಲಂಬಿಸಿದ್ದಾರೆ. ಕೋಡಿಕಲ್‌ನಿಂದ ಕೊಟ್ಟಾರ ಸಂಪರ್ಕಿಸುವ ಒಳ ರಸ್ತೆ ಇದಾಗಿದ್ದು, ಸಾಗರ್‌ಕೋರ್ಟ್‌ 1, 2ನೇ ಒಳ ರಸ್ತೆಯು ವಿವಿಧೆಡೆ ಗುಂಡಿ ಬಿದ್ದಿದೆ. ಕುದ್ಮುಲ್ ರಂಗರಾವ್‌ ರಸ್ತೆಗೂ ಕಾಂಕ್ರೀಟ್‌ ಅಳವಡಿಸಬೇಕಿದೆ.

ನಾಗರಿಕರ ಬೇಡಿಕೆಗಳೇನು?
– ವ್ಯಾಸನಗರ ಬಳಿ ಕೆಲವೊಂದು ರಸ್ತೆಯಲ್ಲಿ ಅರ್ಧಂಬರ್ಧ ಕಾಮಗಾರಿ ನಡೆಸಲಾಗಿದೆ.
– ಕೋಡಿಕಲ್‌ ರಸ್ತೆ ಗುಂಡಿ ಬಿದ್ದಿದ್ದು, ಅಭಿವೃದ್ಧಿ ಕಾಣಬೇಕಿದೆ.
– ಜೆ.ಬಿ. ಲೋಬೋ ಒಳ ರಸ್ತೆಯ ಕೆಲವು ಭಾಗಗಳಲ್ಲಿ ಗುಂಡಿ ಬಿದ್ದಿದೆ.
– ಆನೆಗುಂಡಿ ಪ್ರಶಾಂತ ನಗರ ಸಂಪರ್ಕ ಒಳರಸ್ತೆ ಗುಂಡಿ ಬಿದ್ದು ಹಾಳಾಗಿದೆ.

ತಿರುವೈಲು, ಪದವು ಪಶ್ಚಿಮ, ಕದ್ರಿ ಪದವು ಮತ್ತು ದೇರೆಬೈಲ್‌ ಉತ್ತರ ವಾರ್ಡ್‌ಗಳಲ್ಲಿ ಉದಯವಾಣಿ ಸುದಿನ ತಂಡ ಸಂಚರಿಸಿ ಮಾಹಿತಿ ಸಂಗ್ರಹಿಸಿದ್ದು, ಈ ವ್ಯಾಪ್ತಿಯ ವಿವಿಧೆಡೆ ಒಳರಸ್ತೆಗಳು ಹೊಂಡ-ಗುಂಡಿಯಿಂದ ಕೂಡಿವೆ. ಕೆಲವೆಡೆ ರಸ್ತೆಗಳು ಡಾಮರು ಭಾಗ್ಯವನ್ನಾದರೂ ಕಂಡಿದ್ದರೆ, ಇನ್ನು ಕೆಲವೆಡೆ ಮಣ್ಣಿನ ರಸ್ತೆಯಾಗಿಯೇ ಉಳಿದಿರುವುದು ದುರದೃಷ್ಟ. ಇದರಿಂದ ಸುಗಮ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. ಸಂಬಂಧಪಟ್ಟವರು ಶೀಘ್ರ ಈ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕಿದೆ. ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು 9900567000 ನಂಬರ್‌ಗೆ ಕಳುಹಿಸಬಹುದು.

– ನವೀನ್‌ ಭಟ್‌ ಇಳಂತಿಲ

ಚಿತ್ರಗಳು: ಸತೀಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next