Advertisement

ಗ್ರಾಮೀಣ ವಸತಿ ಯೋಜನೆಯ ಆದಾಯ ಮಿತಿ ಏರಿಕೆ: ಸಚಿವ ಖಾದರ್‌

06:00 AM Jun 10, 2018 | Team Udayavani |

ಮಂಗಳೂರು: ಗ್ರಾಮೀಣ ವಸತಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಪ್ರಸ್ತುತ ಇರುವ 32,000 ರೂ. ಆದಾಯ ಮಿತಿಯನ್ನು ಏರಿಕೆ ಮಾಡಲು ಚಿಂತನೆ ನಡೆಸಿದ್ದು ಸೋಮವಾರ ನಡೆಯುವ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ನಗರಾಭಿವೃದ್ಧಿ ಹಾಗೂ ವಸತಿ ಖಾತೆ ಸಚಿವ ಯು.ಟಿ. ಖಾದರ್‌ ತಿಳಿಸಿದರು.

Advertisement

ಸಚಿವರಾದ ಬಳಿಕ ಪ್ರಥಮ ಬಾರಿಗೆ ಜಿಲ್ಲೆಗೆ ಶನಿವಾರ ಆಗಮಿಸಿದ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸರಕಾರದ ಕೆಲವು ಯೋಜನೆಗಳ ಸವಲತ್ತುಗಳನ್ನು ಪಡೆಯಲು ಆದಾಯ ಮಿತಿ ಜಾಸ್ತಿ ಇದೆ. ಆದರೆ ವಸತಿ ಯೋಜನೆಯ ಸವಲತ್ತು ಪಡೆಯಲು ನಿಗದಿಪಡಿಸಿರುವ ಆದಾಯ ಮಿತಿ ಕಡಿಮೆ. ಇದರಿಂದಾಗಿ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗುವ ಪ್ರಮೇಯಗಳು ಎದುರಾಗುತ್ತಿವೆ. ಪ್ರಸ್ತುತ ನಗರ ವಸತಿ ಯೋಜನೆಯಲ್ಲಿ ವಸತಿ ಸೌಲಭ್ಯ ಪಡೆಯಲು ಫಲಾನುಭವಿಗಳಿಗೆ 1 ಲಕ್ಷ ರೂ. ಆದಾಯ ಮಿತಿ ಇದೆ. ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ಗ್ರಾಮೀಣ ವಸತಿಯ ಯೋಜನೆಯ ಆದಾಯ ಮಿತಿಯನ್ನು ಕೂಡ ಏರಿಸಲು   ಕ್ರಮ ವಹಿಸಲಾಗುವುದು ಎಂದರು.

ನಿಯಮಾವಳಿ ಸರಳೀಕರಣಕ್ಕೆ ಕ್ರಮ 
ಸರಕಾರದ ವಸತಿ ಯೋಜನೆ  ಸೌಲಭ್ಯ ಹೆಚ್ಚಿನ ಪ್ರಮಾಣದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಎಪಿಎಲ್‌/ಬಿಪಿಎಲ್‌ ಸೇರಿದಂತೆ ಪ್ರಸ್ತುತ ಇರುವ ಕೆಲವು ಮಾನದಂಡಗಳನ್ನು ಸರಳೀಕರಣಗೊಳಿಸಲು ಚಿಂತನೆ ನಡೆಸಲಾಗುವುದು. ಇದೇ ಸಂದರ್ಭದಲ್ಲೂ ಯೋಜನೆ ದುರುಪಯೋಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲೂ ಗಮನ ಹರಿಸಲಾಗುವುದು ಎಂದು ಸಚಿವರು ತಿಳಿಸಿದರು.

ಇಲಾಖೆ ಸಕ್ರಿಯಗೊಳಿಸಲು  ಕ್ರಮ ಇಲಾಖೆಯನ್ನು ಹೆಚ್ಚು  ಸಕ್ರಿಯಗೊಳಿಸಿ ಜನಪರವಾಗಿ ರೂಪಿಸುವುದು ನನ್ನ ಪ್ರಥಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಸೋಮವಾರ ನಗರಾಭಿವೃದ್ಧಿ ಹಾಗೂ ವಸತಿ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಮಾಹಿತಿಗಳನ್ನು ಪಡೆದುಕೊಳ್ಳುತ್ತೇನೆ. 
ಇಲಾಖೆಯಲ್ಲಿರುವ ಸಮಸ್ಯೆಗಳ ವಿವರ ಪಡೆದುಕೊಂಡು ಪರಿಹಾರ ಕಂಡುಕೊಳ್ಳಲಾಗುವುದು ಮತ್ತು ಪೂರಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು ಎಂದವರು ವಿವರಿಸಿದರು.

ಅಭಿವೃದ್ಧಿ ಯೋಜನೆಗಳ ಅನುಷ್ಠಾನ
ಮಂಗಳೂರು ನಗರದಲ್ಲಿ ಸ್ಮಾರ್ಟ್‌ಸಿಟಿ, ಎಡಿಬಿ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳು ಸಮರ್ಪಕವಾಗಿ ಮತ್ತು ತ್ವರಿತಗತಿಯಲ್ಲಿ ಅನುಷ್ಠಾನಗೊಳ್ಳುವ ನಿಟ್ಟಿನಲ್ಲಿ  ಕ್ರಮ ವಹಿಸಲಾಗುವುದು. ಮಂಗಳೂರು ನಗರದ ಅರ್ಥಿಕ ಅಭಿವೃದ್ಧಿಯ ನಿಟ್ಟಿನಲ್ಲಿ ಹೂಡಿಕೆ ಸ್ನೇಹಿ ವಾತಾವರಣ ನಿರ್ಮಿಸಲು ಒತ್ತು ನೀಡಲಾಗುವುದು. ಕಾನೂನು ಚೌಕಟ್ಟಿನೊಳಗೆ ಬರುವ ಎಲ್ಲ ಹೂಡಿಕೆ ಯೋಜನೆಗಳು ತ್ವರಿತಗತಿಯಲ್ಲಿ ಕಾರ್ಯಗತ ಗೊಳ್ಳುವಂತಾಗಲು ಕಾಲಮಿತಿಯೊಳಗೆ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಇಲ್ಲ. ಜಿಲ್ಲೆಯ ಎಲ್ಲಾ ನಗರ ಮತ್ತು ಕ್ಷೇತ್ರಗಳು ಅಭಿವೃದ್ಧಿ ಪಥದಲ್ಲಿ ಮುನ್ನೆಡಯಬೇಕು. ಎಲ್ಲಾ ಶಾಸಕರ ಅಭಿಪ್ರಾಯಗಳನ್ನು ಪಡೆದುಕೊಂಡು ಜತೆಗೂಡಿ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.

Advertisement

ಗ್ರೇಟರ್‌ ಮಂಗಳೂರು ಚಿಂತನೆ ಸದ್ಯಕ್ಕಿಲ್ಲ
ಮಂಗಳೂರು ನಗರ ವ್ಯಾಪ್ತಿಯನ್ನು ವಿಸ್ತರಿಸುವ ಗ್ರೇಟರ್‌ ಮಂಗಳೂರು ಪ್ರಸ್ತಾವದ ಅನುಷ್ಠಾನ ಸದ್ಯಕ್ಕಿಲ್ಲ. ಮಂಗಳೂರಿನಲ್ಲಿ ಈಗ ಇರುವ ಮೂಲಸೌಕರ್ಯಗಳ ನ್ನೇ ಇನ್ನಷ್ಟು ಉನ್ನತೀಕರಣಗೊಳಿಸಿ ಅಭಿವೃದ್ಧಿ ಸಾಧಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಸಚಿವ ಖಾದರ್‌ ತಿಳಿಸಿದರು.  

ಉಸ್ತುವಾರಿ ಸಚಿವಸ್ಥಾನ: ಜಿಲ್ಲೆಗೆ ನನ್ನ ಆದ್ಯತೆ
ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಸರಕಾರ ಎಲ್ಲಿಗೆ ಹೇಳುತ್ತೆ ಅಲ್ಲಿಗೆ ಹೋಗುತ್ತೇನೆ. ಆದರೆ ನನ್ನ ಆದ್ಯತೆ ನನ್ನ ಜಿಲ್ಲೆಗೆ, ನನ್ನ ಕ್ಷೇತ್ರಕ್ಕೆ ಎಂದು ಸಚಿವ ಯು.ಟಿ.ಖಾದರ್‌ ಅವರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಸಚಿವ ಸ್ಥಾನದ ಬಗ್ಗೆ ಕಾಂಗ್ರೆಸ್‌ನಲ್ಲಿ ತಲೆದೋರಿರುವ ಅಸಮಾಧಾನಗಳ ಕುರಿತಂತೆ ಉತ್ತರಿಸಿದ ಅವರು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿ ಪಕ್ಷದ ಹೈಕಮಾಂಡಿಗೆ ಇದೆ ಎಂದರು.

ಮಳೆ : ಸಮಗ್ರ ಚರ್ಚೆ 
ಮಂಗಳೂರಿನಲ್ಲಿ ಮೇ 29ರಂದು ಸುರಿದಿರುವ ಭಾರೀ ಮಳೆಯಿಂದಾಗಿ ಸಮಸ್ಯೆಗಳು ಉಂಟಾಗಿದ್ದವು. ತಾಂತ್ರಿಕ ಸಲಹಾ ಸಂಸ್ಥೆ ಐಡಿಎಫ್‌ ಮಹಾನಗರ ಪಾಲಿಕೆಯ ಯೋಜನೆಗಳಿಗೆ ತಾಂತ್ರಿಕ ಸಲಹೆಗಳನ್ನು ನೀಡುತ್ತದೆ. ಅದರ ಆಧಾರದಲ್ಲಿ ಪಾಲಿಕೆ ಎಂಜಿನಿಯರ್‌ಗಳು ಯೋಜನೆ ರೂಪಿಸಿ ಅನುಷ್ಠಾನಗೊಳಿಸುತ್ತಾರೆ. ಪ್ರಸ್ತುತ ಉವಿಸಿರುವ ಸಮಸ್ಯೆಗಳ ಕುರಿತಂತೆ ಅವರನ್ನು ಕೂಡ ಕರೆದು ವಿವರ ಕೋರಲಾಗುವುದು. ಶಾಸಕರು,ಮಾಜಿ ಶಾಸಕರು. ಮೇಯರ್‌, ಉಪಮೇಯರ್‌, ಕಾರ್ಪೊರೇಟರ್‌ಗಳು, ಬಿಲ್ಡರ್‌ಗಳ ಸಭೆ ಕರೆದು ನಗರದ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿ ಪರಿಹಾರಗಳನ್ನು ರೂಪಿಸಲಾಗುವುದು. ಮಹಾನಗರ ಪಾಲಿಕೆ ಎದುರಿಸುತ್ತಿರುವ ಸಮಸ್ಯೆಗಳ ವಿವರಗಳನ್ನು ಪಡೆದುಕೊಂಡು ಸರಕಾರದ ಮಟ್ಟದಲ್ಲಿ ಪರಿಹರಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು. ರಾಜಕಾಲುವೆಗಳ ಒತ್ತುವರಿ ತೆರವು ಬಗ್ಗೆ ಪಾಲಿಕೆ ಈಗಾಗಲೇ ಕ್ರಮಕೈಗೊಂಡಿದೆ ಎಂದು ಮೇಯರ್‌ ಭಾಸ್ಕರ್‌ ಕೆ. ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next