Advertisement

ಸೂಡಿಯಲ್ಲಿ ಬೀಡುಬಿಟ್ಟ ಗ್ರಾಮೀಣಾಭಿವೃದ್ಧಿ ವಿವಿ ತಂಡ

01:26 PM May 17, 2022 | Team Udayavani |

ಗಜೇಂದ್ರಗಡ: ಐತಿಹಾಸಿಕ ಹಿನ್ನೆಲೆಯ ಜೊತೆಗೆ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟಿದ್ದ ಸೂಡಿ ಗ್ರಾಮದಲ್ಲಿ ಗ್ರಾಮೀಣ ಸಮಗ್ರ ಅಧ್ಯಯನಕ್ಕಾಗಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡ ಬೀಡುಬಿಟ್ಟಿದೆ.

Advertisement

ಸುಸ್ಥಿರ ಗ್ರಾಮೀಣಾಭಿವೃದ್ಧಿ ಹಾಗೂ ಗ್ರಾಮೀಣ ಜನತೆಯ ಜೀವನ ಗುಣಮಟ್ಟ ಸುಧಾರಿಸಿ ಗ್ರಾಮೀಣ ಸಮಾಜವನ್ನು ಉತ್ಕೃಷ್ಟ ಕೇಂದ್ರವಾಗಿಸುವ ನಿಟ್ಟಿನಲ್ಲಿ ಸ್ಥಾಪನೆಯಾಗಿರುವ ವಿವಿಯ ವಿದ್ಯಾರ್ಥಿಗಳ ತಂಡ ಸೂಡಿಯಲ್ಲಿ ವಾಸ್ತವ್ಯ ಮಾಡಿ ಗ್ರಾಮ ಅಧ್ಯಯನ ನಡೆಸುತ್ತಿದೆ. ವಿವಿಯ 10 ವಿಭಾಗಗಳ ವಿದ್ಯಾರ್ಥಿಗಳನ್ನು ಒಳಗೊಂಡ 9 ತಂಡಗಳು ಕುಲಪತಿ ಪ್ರೊ| ವಿಷ್ಣುಕಾಂತ ಚಟಪಲ್ಲಿ ಹಾಗೂ ಕುಲಸಚಿವ ಪ್ರೊ| ಬಸವರಾಜ ಲಕ್ಕಣ್ಣವರ ಅವರ ಮಾರ್ಗದರ್ಶನದಲ್ಲಿ ಸೂಡಿ, ಲಕ್ಕುಂಡಿ, ಅಸುಂಡಿ, ಕಣವಿ, ಹೊಸಳ್ಳಿ, ಗೋಜನೂರ, ಬರದೂರ, ದೇವರ ಹುಬ್ಬಳ್ಳಿ, ಡಂಬಳ ಗ್ರಾಮಗಳಲ್ಲಿ ಮೇ 4ರಿಂದ 31ರ ವರೆಗೆ ಗ್ರಾಮ ವಾಸ್ತವ್ಯ ಮತ್ತು ಅಧ್ಯಯನ ಶಿಬಿರ ಹಮ್ಮಿಕೊಂಡಿವೆ.

ಸಮೀಪದ ಸೂಡಿ ಗ್ರಾಮದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ವಿಶ್ವವಿದ್ಯಾಲಯದ ಮುಖ್ಯ ಸಂಯೋಜಕ ಶಶಿಭೂಷಣ ಹಾಗೂ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮದ ಸಂಯೋಜಕಿ ಡಾ| ನಾಗವೇಣಿ ಎಸ್‌.ಜೆ. ನೇತೃತ್ವದಲ್ಲಿ 21 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿದ್ದು, ಗ್ರಾಮದ ತುಂಬೆಲ್ಲ ಸಂಚರಿಸಿ ದೇವಸ್ಥಾನಗಳು, ಮಠಗಳು, ಅಂಗನವಾಡಿ, ಶಾಲೆ, ಚರಂಡಿ ವ್ಯವಸ್ಥೆ, ನೀರಿನ ಸೌಲಭ್ಯ, ಜನರ ಆರೋಗ್ಯ ಸ್ಥಿತಿ-ಗತಿ, ರಾಜಕೀಯ ಸ್ಥಿತಿ, ಜನರ ಆರ್ಥಿಕತೆ, ಬ್ಯಾಂಕ್‌, ಅಂಚೆ ಕಚೇರಿಗಳಲ್ಲಿ ಜನರಿಗೆ ಸಿಗುತ್ತಿರುವ ಸೌಲಭ್ಯಗಳು, ಸರ್ಕಾರದ ಯೋಜನೆಗಳ ಸದುಪಯೋಗ ಹೀಗೆ ಹಲವು ವಿಷಯಗಳ ಕುರಿತು ಸರ್ವೇ ನಡೆಸಿ, ಜನರೊಂದಿಗೆ ಸೇರಿಕೊಂಡು ಗ್ರಾಮದ ಸಾಮಾಜಿಕ ನಕ್ಷೆ ಸಿದ್ಧಪಡಿಸಿದ್ದಾರೆ.

ವಿದ್ಯಾರ್ಥಿಗಳ ತಂಡ ಶ್ರಮದಾನದ ಮೂಲಕ ಸೂಡಿ ಗ್ರಾಮದಲ್ಲಿರುವ ಅತ್ಯಂತ ಪುರಾತನ ಹಾಗೂ ಸುಂದರ ಕೆತ್ತನೆ ಹೊಂದಿರುವ ನಾಗಕುಂಡ ಪುಷ್ಕರಣಿ ಸ್ವತ್ಛಗೊಳಿಸುವ ಕಾರ್ಯ ನಡೆಸಿದೆ. ಬಾವಿಯಲ್ಲಿರುವ ಗಿಡ-ಗಂಟಿ, ಕಸ ತೆರವುಗೊಳಿಸಿ ಸ್ಮಾರಕಗಳ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂಬ ಸಂದೇಶ ಸಾರಿದೆ.

ಮೂಲ ಸೌಲಭ್ಯಗಳು, ಸರ್ಕಾರದ ಯೋಜನೆಗಳು ಜನರಿಗೆ ತಲುಪಿವೆಯೇ ಎಂದು ಸರ್ವೇ ನಡೆಸಲು ಗ್ರಾಮದಲ್ಲಿ ಸಂಚರಿಸಿ ಜನರೊಂದಿಗೆ ಚರ್ಚಿಸಿದಾಗ ಜನರ ಪ್ರತಿಕ್ರಿಯೆ ವಿಭಿನ್ನವಾಗಿತ್ತು. ಈ ಸರ್ವೇಯಿಂದ ನಮಗೇನು ಲಾಭ, ನಿಮಗೇನೋ ಲಾಭ ಇದೆ ಹೀಗಾಗಿ ಇಷ್ಟೆಲ್ಲ ಕೇಳುತ್ತಿದ್ದೀರಿ ಎಂಬಿತ್ಯಾದಿ ಪ್ರಶ್ನೆಗಳು ಕೇಳಿ ಬಂದವು. ಕಾಲೇಜಿನಲ್ಲಿ ಕಲಿಕೆ, ಗ್ರಾಮೀಣ ಪ್ರದೇಶದ ಸ್ಥಿತಿಗತಿ ವಿಭಿನ್ನವಾಗಿದೆ. ವಿಜಯ ಕಮಾಟ್ರ, ಆರ್‌ಡಿಪಿಆರ್‌ ವಿದ್ಯಾರ್ಥಿ, ಗ್ರಾಮೀಣಾಭಿವೃದ್ಧಿ ವಿವಿ

Advertisement

ಗ್ರಾಮೀಣಾಭಿವೃದ್ಧಿ ವಿವಿ ಗುರಿ ಗ್ರಾಮಗಳ ಸುಸ್ಥಿರ ಅಭಿವೃದ್ಧಿಯಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಗ್ರಾಮ ಅಂದರೇನು ಎಂಬುದರ ಕುರಿತು ಅರಿವು ಮೂಡಿಸುವುದರ ಜೊತೆಗೆ ಅಲ್ಲಿನ ವಾಸ್ತವಿಕತೆ, ಸಮಸ್ಯೆಗಳ ಕುರಿತು ಆಳವಾದ ಅಧ್ಯಯನ ನಡೆಸಿ ಅವುಗಳಿಗೆ ತಮ್ಮ ಮಟ್ಟದಲ್ಲಿ ಸಮಸ್ಯೆಗಳನ್ನು ಪರಿಹರಿಸಿ ಮೂರು ಪ್ರತಿಗಳಲ್ಲಿ ವರದಿ ತಯಾರಿಸಿ ಗ್ರಾಪಂ, ಜಿಪಂ ಮತ್ತು ವಿವಿಗೆ ಸಲ್ಲಿಸುವ ಉದ್ದೇಶವಾಗಿದೆ.  –ಡಾ| ನಾಗವೇಣಿ ಎಸ್‌.ಜೆ., ಗ್ರಾಮೀಣ ವಿವಿ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮದ ಸಂಯೋಜಕಿ

ಗ್ರಾಮದಲ್ಲಿ ಚಾಲುಕ್ಯರ ಕಾಲದ ಅತ್ಯಂತ ಸುಂದರ ಕೆತ್ತನೆ ಹೊಂದಿರುವ ಹಲವು ದೇವಸ್ಥಾನ, ಪುಷ್ಕರಣಿ, ಸ್ಮಾರಕಗಳಿವೆ. ಆದರೆ ಅವುಗಳಿಗೆ ರಕ್ಷಣೆ, ಕಾಯಕಲ್ಪ ಸಿಗದ ಕಾರಣ ನಶಿಸಿ ಹೋಗುತ್ತಿರುವುದು ದುರದೃಷ್ಟಕರ. ಸ್ಮಾರಕಗಳ ರಕ್ಷಣೆಗೆ ಯುವ ಜನತೆ ಮುಂದಾಗಬೇಕು.  –ತನ್ವೀರ ದೊಡ್ಡಮನಿ, ಎಂಎ ಆರ್‌ಡಿಪಿಆರ್‌ ವಿದ್ಯಾರ್ಥಿ, ಗ್ರಾಮೀಣಾಭಿವೃದ್ಧಿ ವಿವಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next