Advertisement
ಚುನಾವಣಾ ಆಯೋಗದ ನಿರ್ದೇಶನದಂತೆ ಕಳೆದ ವಾರ ರಾಜ್ಯದ ವಿವಿಧ ತಾ.ಪಂ.ಗಳ ಸುಮಾರು 75ಕ್ಕೂ ಹೆಚ್ಚು ಕಾರ್ಯನಿರ್ವಾಹಕ ಅಧಿಕಾರಿಗಳನ್ನು (ಇಒ) ವರ್ಗಾವಣೆಗೊಳಿಸಿದ್ದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಈಗ 68 ಮಂದಿ ತಾ.ಪಂ. ಸಹಾಯಕ ಕಾರ್ಯಪಾಲಕ ಇಂಜಿನಿಯರುಗಳನ್ನು ವರ್ಗಾವಣೆಗೊಳಿಸಿ ಏ.1ರಂದು ಆದೇಶ ಹೊರಡಿಸಿದೆ.
Related Articles
Advertisement
ಸಾಮಾನ್ಯವಾಗಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ತಕ್ಷಣ ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸಹಾಯಕ ಆಯುಕ್ತ, ತಹಶೀಲ್ದಾರ್, ಡಿವೈಎಸ್ಪಿ, ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಅದಕ್ಕಿಂತ ಮೇಲ್ಪಟ್ಟ ಹುದ್ದೆಗಳ ಅಧಿಕಾರಿಗಳು ಸ್ವಂತ ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದರೆ, ಕಳೆದ ಮೂರು ವರ್ಷಗಳಿಂದ ಒಂದೇ ಕಡೆ ಇದ್ದರೆ, ಅಥವಾ ಹಿಂದಿನ ಚುನಾವಣೆ ವೇಳೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದ ಅಧಿಕಾರಿಗಳನ್ನು ತಕ್ಷಣ ಬೇರೆ ಕಡೆ ವರ್ಗಾವಣೆ ಮಾಡಲಾಗುತ್ತದೆ. ಈ ಬಾರಿ ತಾ.ಪಂ ಇಒ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೂ ಈ ಮಾರ್ಗಸೂಚಿಗಳನ್ನು ಅನ್ವಯಿಸಲಾಗಿದೆ.
ಪಕ್ಷಪಾತಿ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗುತ್ತದೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ನಂತರ ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ಸಾಮಾನ್ಯವಾಗಿ ಎಲ್ಲ ಇಲಾಖೆಗಳಲ್ಲೂ ವರ್ಗಾವಣೆ ನಡೆಯುತ್ತದೆ. ಆದರೆ, ಚುನಾವಣಾ ಕರ್ತವ್ಯಕ್ಕೆ ನಿಯೋಜಿತಗೊಂಡಿರುವ ಅಧಿಕಾರಿಗಳನ್ನು ಚುನಾವಣಾ ಪ್ರಕ್ರಿಯೆ ಚಾಲನೆಯಲ್ಲಿರುವಾಗ ಸಾಮಾನ್ಯವಾಗಿ ವರ್ಗಾವಣೆ ಮಾಡುವುದಿಲ್ಲ. ಆದರೆ, ವಿಶೇಷ ಸಂದರ್ಭ ಹಾಗೂ ಪ್ರಕರಣಗಳಲ್ಲಿ ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳನ್ನು ಬದಲಾಯಿಸುವ ಮತ್ತು ವರ್ಗಾವಣೆಗೊಳಿಸುವ ವಿಶೇಷ ಅಧಿಕಾರ ಚುನಾವಣಾ ಆಯೋಗಕ್ಕೆ ಇರುತ್ತದೆ. ಅದರಂತೆ ಆಕ್ಷೇಪ, ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹಾಸನ, ಬೆಳಗಾವಿ ಜಿಲ್ಲಾಧಿಕಾರಿಗಳು, ಮಂಡ್ಯ ಜಿ.ಪಂ. ಸಿಇಒ ಅವರನ್ನು ಆಯೋಗ ವರ್ಗಾಯಿಸಿದೆ. ಮಂಡ್ಯ ಜಿಲ್ಲಾಧಿಕಾರಿ ಅವರನ್ನು ಬದಲಿಸುವಂತೆ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.
“ತಾ.ಪಂ ಇಒ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರುಗಳನ್ನು ನೀತಿ ಸಂಹಿತೆ ಜಾರಿ ನೋಡಲ್ ಅಧಿಕಾರಿಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಆದ್ದರಿಂದ ಅವರನ್ನು ತಕ್ಷಣ ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗದ ಒತ್ತಾಯವಿತ್ತು. ಚುನಾವಣಾ ಕರ್ತವ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂಬ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವವರೆಗೆ ಇಒ, ಸಹಾಯಕ ಕಾರ್ಯಪಾಲಕ ಇಂಜಿನಿಯರುಗಳನ್ನು ವರ್ಗಾವಣೆ ಮಾಡಲಾಗಿದೆ’– ಎಲ್.ಕೆ. ಅತೀಕ್, ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಇಲಾಖೆ. – ರಫೀಕ್ ಅಹ್ಮದ್