Advertisement

ಗ್ರಾಮೀಣ ಕಲಾವಿದರಿಗೆ ನೆರವು ಅಗತ್ಯ

04:19 PM Dec 16, 2017 | Team Udayavani |

ಬೆಂಗಳೂರು: ಗ್ರಾಮೀಣ ಕಲಾ ಪ್ರತಿಭೆಗಳನ್ನು ಪೋಷಿಸಿ ಮುಖ್ಯವಾಹಿನಿಗೆ ಕರೆತರುವ ಅವಶ್ಯಕತೆಯಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಅಭಿಪ್ರಾಯಪಟ್ಟರು. ಕರ್ನಾಟಕ ಲಲಿತಕಲಾ ಅಕಾಡೆಮಿ ಶುಕ್ರವಾರ ಕನ್ನಡ ಭವನದ ವರ್ಣ ಆರ್ಟ್‌ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದ ತಿಂಗಳ ಚಿತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

Advertisement

ಚಿತ್ರಕಲೆ ಕಲಾವಿದನ ಜೀವನದ ಪ್ರಮುಖ ತಳಹದಿ. ಆತನಲ್ಲಿರುವ ಸೃಜನಶೀಲ ಕಲಾ ನೈಪುಣ್ಯಕ್ಕೆ ಕೈಗನ್ನಡಿಯಾಗಿದೆ. ಶಾಲಾ-ಕಾಲೇಜುಗಳಲ್ಲಿ ಈ ಕಲೆಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಬೇಕು. ಜತೆಗೆ ಅವರ ಕಲೆಗೆ ಸಮಾಜದಲ್ಲಿ ಗೌರವ ಸಿಗಬೇಕು. ಅದಕ್ಕಾಗಿ ವೇದಿಕೆಯನ್ನು ಒದಗಿಸುವ ಜವಾಬ್ದಾರಿ ಅಕಾಡೆಮಿ ಮಾತ್ರವಲ್ಲ ನಮ್ಮೆಲ್ಲರ ಮೇಲಿದೆ ಎಂದರು.

ಯುವ ಕಲಾವಿದರು ರಚಿಸಿರುವ ಕಲಾಕೃತಿಗಳ ಪ್ರದರ್ಶನಕ್ಕೆ ಮುಕ್ತ ಅವಕಾಶ ಸಿಗಬೇಕು. ಜತೆಗೆ ಕಲಾಪ್ರೇಮಿಗಳು ಅವರ ಕಲಾಚಾತುರ್ಯವನ್ನು ಗುರುತಿಸಿ, ಖರೀದಿಸುವ ಮೂಲಕ ಪ್ರೋತ್ಸಾಹ ನೀಡಿ, ಪ್ರತಿಭೆಗಳು ಬೆಳೆಯಲು ಸಹಕಾರ ನೀಡಬೇಕು. ಅಕಾಡೆಮಿಯು ಯುವ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸುವುದರ ಜತೆಗೆ ಅವರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಸಲಹೆ ನೀಡಿದರು. 

ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷೆ ಪೊ›.ಎಂ.ಜೆ ಕಮಲಾಕ್ಷಿ ಮಾತನಾಡಿ, ಚಿತ್ರಕಲೆಯೇ ಎಲ್ಲದಕ್ಕೂ ಮೂಲ. ಅಕ್ಷರಗಳೇ ಇಲ್ಲದ ಸಮಯದಲ್ಲಿನ ಜನಜೀವನ, ಪ್ರಾಚೀನ ಇತಿಹಾಸ ತಿಳಿಯಲು ಚಿತ್ರಕಲೆಗಳೇ ಆಧಾರ. ಇಂದಿನ ತಂತ್ರಜಾನ ಬೆಳೆಯುವಲ್ಲಿಯೂ ಚಿತ್ರಕಲೆಯೇ ಮುಖ್ಯವೆನ್ನಬಹುದು.  ಇಂದಿನ ಆಧುನಿಕ ಜೀವನ ಪದ್ಧತಿಯಲ್ಲಿ ಮೊಬೈಲ್‌ಗ‌ಳ ಅನ್ವೇಷಣೆ ಮಾನವ ಸಂಬಂಧಗಳನ್ನು ಕಡಿತಗೊಳಿಸುತ್ತಿದೆ.

ಜನಸಂಪರ್ಕದ ಅಂತರ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಚಿತ್ರಕಲಾ ಪ್ರದರ್ಶನಗಳು ಕಲಾವಿದನ ಸೃಜನಶೀಲತೆ ಜತೆಗೆ ಕಲಾಸಕ್ತರನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದೆ ಎಂದರು. ಕಲಾವಿದರಾದ ಕೆ. ನಜರೀನ್‌, ಶಿವಪ್ರಸಾದ್‌, ಬಾಲರಾಜ್‌ ಎನ್‌.ಸಿಂಧೆ ಮತ್ತು ಬಿ.ವಿ.ಗುರುಸ್ವಾಮಿ ಅವರ ವಿವಿಧ ಕಲಾ ಪ್ರಕಾರಗಳು ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಲಲಿತಕಲಾ ಅಕಾಡೆಮಿ ರಿಜಿಸ್ಟ್ರಾರ್‌ ಎಚ್‌.ವಿ.ಇಂದ್ರಮ್ಮ ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next