ಕಾರ್ಕಳ, ಅ. 4 : ಕೋವಿಡ್ ದಿಂದಾಗಿ ಸಾಕಷ್ಟು ಸಂಖ್ಯೆಯಲ್ಲಿ ಬಸ್‌ಗಳು ಓಡಾಟ ನಡೆಸದೇ ಇರುವುದರಿಂದ ಇದರ ನೇರ ಪರಿಣಾಮ ಗ್ರಾಮೀಣ ಪ್ರಯಾಣಿಕರಿಗೆ ತಟ್ಟಿದೆ. ಇಲ್ಲಿ ಗ್ರಾಮಗಳಿಗೆ ಸರಕಾರಿ ಸಾರಿಗೆ ಬಸ್‌ಗಳಿಲ್ಲ. ಖಾಸಗಿ ಬಸ್‌ಗಳೇ ಜೀವಾಳ. ಲಾಕ್‌ಡೌನ್ ವೇಳೆ ಖಾಸಗಿ ಬಸ್ ಉದ್ಯಮ ನಷ್ಟಕ್ಕೆ ಸಿಲುಕಿದ್ದರೆ, ಈಗ ಬಸ್ ಇಲ್ಲ, ಬಸ್ ಓಡಿಸಿದರೆ ನಿರ್ವಹಣೆಗೂ ಸಾಲುತ್ತಿಲ್ಲ. ಇದರಿಂದ ಹಲವಾರು ಬಸ್‌ಗಳು ಇನ್ನೂ ಸಂಚಾರ ಆರಂಭಿಸಿಲ್ಲ.
ಬಸ್‌ಗಳು ಕಡಿಮೆ : ಲಾಕ್‌ಡೌನ್‌ಗಿಂತ ಮೊದಲು 250 ಖಾಸಗಿ ಬಸ್‌ಗಳು ತಾ|ನ ವಿವಿಧ ರೂಟ್‌ಗಳಲ್ಲಿ ಓಡಾಟ ನಡೆಸುತ್ತಿದ್ದವು. ಮೂಡಬಿದಿರೆ ಮತ್ತು ಮೂಲ್ಕಿ ಮಾರ್ಗವಾಗಿ ಮಂಗಳೂರಿಗೆ ಕಾರ್ಕಳದಿಂದ ಪ್ರತಿದಿನ 100 ಬಸ್ ಓಡಾಡುತ್ತಿತ್ತು. ಈಗ ಕೇವಲ 35 ಬಸ್ ಮಾತ್ರವಿದೆ. ಕಾರ್ಕಳ-ಉಡುಪಿ ಮಾರ್ಗವಾಗಿ 50 ಬಸ್ ಸಂಚರಿಸುತ್ತಿತ್ತು. ಈಗ 20 ಬಸ್‌ಗಳು ಮಾತ್ರ ಇವೆ. ಬೆಳ್ತಂಗಡಿ- ಕಾರ್ಕಳದ ನಡುವೆ 30 ಬಸ್‌ಗಳ ಸಂಚಾರವಿತ್ತು. ಈಗ 10 ಬಸ್ ಮಾತ್ರ ಚಲಿಸುತ್ತಿವೆ.
ಪರ್ಯಾಯ ವ್ಯವಸ್ಥೆಗಳೂ ಇಲ್ಲ : ಗ್ರಾಮೀಣ ಭಾಗಕ್ಕೆ ತೆಳಲು ಖಾಸಗಿ ಬಸ್ ಹಾಗೂ ಸ್ವಂತ ವಾಹನಗಳು ಬಿಟ್ಟರೆ ಬೇರೆ ವ್ಯವಸ್ಥೆಗಳಿಲ್ಲ. ಈಗ ಗ್ರಾಮೀಣ ಭಾಗಕ್ಕೆ ಓಡಾಡುವ ಲೋಕಲ್ ಬಸ್‌ಗಳ ಸಂಖ್ಯೆ 70ರಿಂದ 30ಕ್ಕೆ ಇಳಿದಿದೆ. ಒಟ್ಟಾರೆ ಕಾರ್ಕಳದಲ್ಲಿ ಓಡಾಡುವ ಖಾಸಗಿ ಬಸ್‌ಗಳ ಸಂಖ್ಯೆ ನೂರರ ಆಸುಪಾಸಿನಲ್ಲಿದೆ.
ಡೀಸೆಲ್ ಖರ್ಚಿಗೂ ಸಾಲುತ್ತಿಲ್ಲ : ಬಸ್‌ಗಳಲ್ಲಿ ಶೇ.50 ರಷ್ಟು ಮಂದಿ ಮಾತ್ರ ಪ್ರಯಾಣಿಸಬೇಕೆಂಬ ನಿಯಮವಿದೆ. ಕೆಲ ರೂಟ್‌ಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಬಿಟ್ಟರೆ ಪ್ರಯಾಣಿಕರೇ ಇರುವುದಿಲ್ಲ. ಇಂತಹ ಸ್ಥಿತಿಯಲ್ಲಿ ಬಸ್ ಓಡಿಸುವುದರಿಂದ ಡೀಸೆಲ…, ಚಾಲಕ, ನಿರ್ವಾಹಕರ ಸಂಬಳ ಭರಿಸುವುದಕ್ಕೂ ಸಾಲುತ್ತಿಲ್ಲ. ಡೀಸೆಲ್ ದರವೂ ಹೆಚ್ಚಿದೆ. ತೆರಿಗೂ ಪೂರ್ಣ ಪಾವತಿಸಬೇಕು. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುತ್ತಾರೆ ಬಸ್ ಮಾಲಕರು.
ಅವಲಂಬಿತರು ಅತಂತ್ರ : ಖಾಸಗಿ ಬಸ್‌ಗಳಲ್ಲಿ ಸುಮಾರು 500ಕ್ಕೂ ಅಧಿಕ ಮಂದಿ ಚಾಲಕರು, ನಿರ್ವಾಹಕರು, ಏಜೆಂಟರು ದುಡಿಯುತ್ತಿದ್ದರು. ಈಗ ಬಸ್ ಸಂಖ್ಯೆ ಕಡಿಮೆ ಗೊಂಡ ಬಳಿಕ ಅವರೆಲ್ಲರ ಬದುಕು ಅತಂತ್ರವಾಗಿದೆ. ಒಂದು ವಾರಕ್ಕಾಗುವಷ್ಟು ಮಾತ್ರ ಕೆಲಸ ಎಂಬಂತಾಗಿದೆ. ಆದ್ದರಿಂದ ಇವರೆಲ್ಲರೂ ಕೃಷಿ, ಕೂಲಿ, ಖಾಸಗಿ ವಾಹನ ಚಾಲನೆ ಇತ್ಯಾದಿ ಕೆಲಸಗಳತ್ತ ಮುಖ ಮಾಡಿದ್ದಾರೆ.
ಖಾಸಗಿ ಬಸ್‌ಗಳ ತೆರಿಗೆ, ವಿಮೆ ಮೊತ್ತ ಕಡಿಮೆಗೊಳಿಸಿ, ಸಬ್ಸಿಡಿ ಬೆಲೆಯಲ್ಲಿ ಡೀಸೆಲ್ ಪೂರೈಸಿದಲ್ಲಿ ಜನತೆಗೆ ಸೇವೆ ಒದಗಿಸಲು ಸಾಧ್ಯ.ಜನರಿಗೂ ಅನುಕೂಲವಾಗುತ್ತದೆ.
-ಬಾಬು ಮೂಲ್ಯ, ಅಧ್ಯಕ್ಷರು, ಏಜೆಂಟ್ ಬಳಗ , ಕಾರ್ಕಳ