ಕನ್ನಡ ಚಿತ್ರರಂಗಕ್ಕೆ ಬರುವ ಹೊಸಬರು ವಿಭಿನ್ನವಾದ ಚಿಂತನೆಯೊಂದಿಗೆ ಬರುತ್ತಿದ್ದಾರೆ. ಪ್ರೇಕ್ಷಕರಿಗೆ ಏನಾದರೂ ಹೊಸತನ ನೀಡಬೇಕೆಂಬ ಪ್ರಯತ್ನದೊಂದಿಗೆ ಬರುತ್ತಾರೆ. ಈ ವಾರ ತೆರೆಕಂಡಿರುವ “ರೂಪಾಯಿ’ ಕೂಡಾ ಆ ತರಹದ ಒಂದು ಹೊಸ ಪ್ರಯತ್ನದ ಸಿನಿಮಾ. ಒಂದು ಒಳ್ಳೆಯ ಸಿನಿಮಾಕ್ಕೆ ಬೇಕಾಗಿರುವುದು ಒಳ್ಳೆಯ ಕಥೆ. ಕಥೆಯೇ ಸಿನಿಮಾದ ಅಂತರಾತ್ಮ. ಈ ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ “ರೂಪಾಯಿ’ ಚಿತ್ರತಂಡ, ಆ ತರಹದ ಕಥೆಯೊಂದಿಗೆ ಸಿನಿಮಾ ಮಾಡಿದೆ.
ಇನ್ನು, ಸಿನಿಮಾದ ಹೆಸರು “ರೂಪಾಯಿ’ ಅಂತಿದ್ದರೂ, ಇದು ಕೇವಲ ಹಣದ ಕುರಿತು ಮಾತ್ರ ಮಾಡಿರುವ ಸಿನಿಮಾವಲ್ಲ. ಹಣದ ಜೊತೆ ಬದುಕು, ಸಂಬಂಧ, ಭಾವನೆಗಳ ಮೌಲ್ಯಗಳನ್ನು ತೋರಿಸುವ ಸಿನಿಮಾ. ಮಧ್ಯಮ ವರ್ಗದ ಐದು ಪಾತ್ರಗಳ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ. ಚಿತ್ರದಲ್ಲಿ ಹೊಸ ಬಗೆಯ ಕಥೆಯೊಂದಿಗೆ, ಕಾಮಿಡಿ ಕಿಕ್, ನವಿರಾದ ಪ್ರೀತಿ, ಇಂಪಾದ ಹಾಡು, ಭರ್ಜರಿ ಆ್ಯಕ್ಷನ್ ಎಲ್ಲವೂ “ರೂಪಾಯಿ’ಯಲ್ಲಿದೆ.
ಒಂದು ಕಂಪ್ಲೀಟ್ ಕಮರ್ಷಿಯಲ್ ಪ್ಯಾಕೇಜ್ ಸಿನಿಮಾವಾಗಿ “ರೂಪಾಯಿ’ ಮೂಡಿಬಂದಿದೆ. “ರೂಪಾಯಿ’ಗೆ ತನ್ನದೇ ಆದ ಮೌಲ್ಯವಿದೆ ಎಂಬುದನ್ನು ನಿರ್ದೇಶಕರು ನಗಿಸುತ್ತಲೇ ಹೇಳಿದ್ದಾರೆ.
ಚಿತ್ರದಲ್ಲಿ ನಟಿಸಿರುವ ಸಿನಿಮಾದಲ್ಲಿ ವಿಜಯ್ ಜಗದಾಲ್ ಜತೆಗೆ ಯಶ್ವಿಕ್, ರಾಮ್ ಚಂದನ್ ನಾಯಕರಾಗಿ ಅಭಿನಯಿಸಿದ್ದು, ಕೃಷಿ ತಾಪಂಡ, ಚಂದನ ರಾಘವೇಂದ್ರ ನಾಯಕಿಯರಾಗಿದ್ದಾರೆ.
ಪ್ರಮೋದ್ ಶೆಟ್ಟಿ, ಶಂಕರಮೂರ್ತಿ, ರಾಕ್‌ಲೈನ್ ಸುಧಾಕರ್, ಮೋಹನ್ ಜುನೇಜಾ, ಪಲ್ಲವಿ, ಕೃತಿ ಗೌಡ ಮತ್ತಿತರರು “ರೂಪಾಯಿ’ ಸಿನಿಮಾದ ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರತಿಯೊಬ್ಬರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಶಿವು