ಹುಬ್ಬಳ್ಳಿ: ಕರ್ನಾಟಕ ಪ್ರಾಂತ ರೈತ ಸಂಘದ 16ನೇ ರಾಜ್ಯ ಸಮ್ಮೇಳನದ ಅಂಗವಾಗಿ ರೈತರ ಬೃಹತ್ ಮೆರವಣಿಗೆ ಹಾಗೂ ಬಹಿರಂಗ ಸಭೆಯ ಪ್ರಚಾರಾರ್ಥ ರೈತ ಪ್ರಚಾರ ವಾಹಿನಿಗೆ ಶುಕ್ರವಾರ ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಹಿಳಾ ವಿವಿಯ ವಿಶ್ರಾಂತ ಕುಲಪತಿ ಪ್ರೊ| ವಿ.ಬಿ. ಮಾಗನೂರ ಹಾಗೂ ರೈತ ಮುಖಂಡ ಶಿವಣ್ಣ ಹುಬ್ಬಳ್ಳಿ ಜಂಟಿಯಾಗಿ ಚಾಲನೆ ನೀಡಿದರು.
ನಂತರ ಮಾತನಾಡಿದ ಪ್ರೊ| ಮಾಗನೂರ, ದೇಶದ ರೈತ ಸಮುದಾಯ ತೀವ್ರ ಸಂಕಷ್ಟದಲ್ಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನುಸರಿಸಿಕೊಂಡು ಬಂದಿರುವ ನೀತಿಗಳಿಂದಾಗಿ ಕೃಷಿ ಬಿಕ್ಕಟ್ಟು ತೀವ್ರವಾಗಿದೆ. ರೈತರು ಆತ್ಮಹತ್ಯೆಗೆ ಶರಣಾಗುವಂತಹ ಸ್ಥಿತಿ ನಿರ್ಮಾಣವಾಗಿದೆ.
ಸರಕಾರಗಳು ರೈತರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುವ ಬದಲು ಮೊಸಳೆ ಕಣ್ಣೀರು ಹಾಕುತ್ತ ನಿಷ್ಕಾಳಜಿ ತೋರುತ್ತಿವೆ. ಆದ್ದರಿಂದ ಸರಕಾರಗಳ ಕಣ್ಣು ತೆರೆಸಲಿರುವ ಈ ರೈತ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ ಮಾತನಾಡಿ, ರೈತ ಪ್ರಚಾರ ವಾಹಿನಿ ಜಿಲ್ಲಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿ ರೈತರ ನಡುವೆ ಪ್ರಚಾರ ಮಾಡಲಿದೆ. ರೈತರ ಪ್ರಮುಖ ಪ್ರಶ್ನೆಗಳಿಗಾಗಿ, ರೈತ ಸಂಘಟನೆ, ಚಳವಳಿ ಮುನ್ನಡೆಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ರಾಜ್ಯ ಸಮ್ಮೇಳನವು ಏ.25ರಿಂದ 27ರ ವರೆಗೆ ನಗರದ ನೆಹರು ಮೈದಾನದಲ್ಲಿ ನಡೆಯಲಿದೆ ಎಂದರು. ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಬಿ.ಎಸ್. ಸೊಪ್ಪಿನ, ಪ್ರಧಾನ ಕಾರ್ಯದರ್ಶಿ ಕೆ.ಎಚ್. ಪಾಟೀಲ, ಮಹೇಶ ಪತ್ತಾರ, ಅಮೃತ ಇಜಾರಿ, ಮಹೇಶ ಹಿರೇಮಠ, ಸಂಜು ಧುಮ್ಮಕ್ಕನಾಳ, ಸುರೇಶಗೌಡ ಪಾಟೀಲ, ವಿನಯಕುಮಾರ ಪಾಟೀಲ, ಬಸವರಾಜ ಕೋರಿಮಠ ಇದ್ದರು.