ಮಹದೇವಪುರ/ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ, ಹೆಚ್ಚುತ್ತಿರುವ ಭ್ರಷ್ಟಾಚಾರ, ದೌರ್ಜನ್ಯ ಖಂಡಿಸಿ ಬಿಜೆಪಿ ಹಮ್ಮಿಕೊಂಡಿರುವ ಬೆಂಗಳೂರು ರಕ್ಷಿಸಿ ಪಾದಯಾತ್ರೆ ದಿನಕಳೆದಂತೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಒಂಬತ್ತನೇ ದಿನವಾದ ಭಾನುವಾರ ಮಹದೇವಪುರ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆದಿದ್ದು, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ ಪಾದಯಾತ್ರೆ ನೇತೃತ್ವ ವಹಿಸಿರುವ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಶಾಸಕರಾದ ಅರವಿಂದ ಲಿಂಬಾವಳಿ, ಎಸ್.ಮುನಿರಾಜು, ಸಂಸದರಾದ ಪ್ರಹ್ಲಾದ್ ಜೋಶಿ, ಪಿ.ಸಿ.ಮೋಹನ್, ಪ್ರತಾಪ್ ಸಿಂಹ ಮತ್ತಿತರರು ಪಾಲ್ಗೊಂಡು ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ತೀವ್ರಗೊಳಿಸಿದ್ದಾರೆ.
ಬೆಂಗಳೂರಿನಲ್ಲಿ ಕೈಗೊಂಡಿರುವ ಕಾಮಗಾರಿಗಳು ಪೂರ್ಣಗೊಳ್ಳದಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸರ್ಕಾರದ ಸಚಿವರು ಅಪೂರ್ಣ ಕಾಮಗಾರಿಗಳನ್ನೇ ಉದ್ಘಾಟಿಸುತ್ತಾ ದುಡ್ಡು ಹೊಡೆಯುತ್ತಿದ್ದಾರೆ. ಈ ಸರ್ಕಾರದ ಅವಧಿಯಲ್ಲಿ ಪಾಲಿಕೆ ದಿವಾಳಿಯಾಗಿದ್ದರೂ ನೆಪಮಾತ್ರಕ್ಕೆ ಯೋಜನೆಗಳನ್ನು ಘೋಷಿಸಿ ಜನರನ್ನು ಮರುಳು ಮಾಡಲು ಪ್ರಯತ್ನಿಸಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ಕಾಂಗ್ರೆಸ್‌ನವರು ಪಾಲಿಕೆಯನ್ನೇ ಅಡವಿಟ್ಟು ಹಣ ವಸೂಲಿ ಮಾಡಲಿದ್ದಾರೆ ಎಂದು ಕಿಡಿ ಕಾರಿದರು.
ಇನ್ನೊಂದೆಡೆ ಕಾನೂನು ಸುವ್ಯವಸ್ಥೆಯನ್ನೂ ಕಾಂಗ್ರೆಸ್ ಸರ್ಕಾರ ಹದಗೆಡಿಸಿದೆ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗಳಾಗುತ್ತಿದ್ದರೆ, ರಾಜಧಾನಿ ಬೆಂಗಳೂರಿನಲ್ಲಿ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಹಲ್ಲೆ ಪ್ರಕರಣ, ನಾರಾಯಣಸ್ವಾಮಿಯಿಂದ ಬಿಬಿಎಂಪಿ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಪ್ರಯತ್ನ, ಬಿಜೆಪಿ ಕಾರ್ಯಕರ್ತರ ಕೊಲೆ, ಅವರ ಮೇಲೆ ಕಾಂಗ್ರೆಸ್‌ನವರ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳ್ಳರು, ದರೋಡೆಕೋರರ ಹಾವಳಿಯಿಂದ ಜನ ನೆಮ್ಮದಿಯಿಂದ ಓಡಾಡಲು ಸಾಧ್ಯವಾಗದಂತಾಗಿದೆ ಎಂದು ಆರೋಪಿಸಿದರು.
ಬೆಳಗ್ಗೆ ಮಹದೇವಪುರದಲ್ಲಿ ಕಾಡುಗೋಡಿಯ ಹೋಪ್ ಫಾರಂನಿಂದ ವರ್ತೂರು ಕೋಡಿಯವರೆಗೆ ಪಾದಯಾತ್ರೆ ನಡೆಯಿತು. ವೈಟ್‌ಫೀಲ್ಡ್‌ನಲ್ಲಿ ಅಶೋಕ್, ಅರವಿಂದ ಲಿಂಬಾವಳಿ, ಪಿ.ಸಿ.ಮೋಹನ್ ಅವರು ದೊಳ್ಳು ಬಾರಿಸುತ್ತಾ ಪಾದಯಾತ್ರೆಯಲ್ಲಿ ತೊಡಗಿದ್ದು ವಿಶೇಷವಾಗಿತ್ತು. ಸಂಜೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಲಕ್ಷ್ಮೀ ದೇವಸ್ಥಾನದ ಬಳಿಯಿಂದ ಆರಂಭವಾದ ಪಾದಯಾತ್ರೆ ವಸಂತಪುರ ಮುಖ್ಯರಸ್ತೆ ಮೂಲಕ ಕ್ಷೇತ್ರದ ವಿವಿಧೆಡೆ ಸಂಚರಿಸಿತು. ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ಘಟಕಗಳ ಪದಾಧಿಕಾರಿಗಳು, ನೂರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ವಾಹನ ಸಂಚಾರಕ್ಕೆ ತೊಂದರೆ: ಬಿಜೆಪಿ ಪಾದಯಾತ್ರೆಗೆ ಪೊಲೀಸರು ವರ್ತೂರು ಕೋಡಿ ಕಡೆ ಸಾಗುವ ರಸ್ತೆಯಲ್ಲಿ ಅವಕಾಶ ಕಲ್ಪಿಸಿದ ಪೊಲೀಸರು ಆ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಮಾಡಿದ್ದರು. ಹೀಗಾಗಿ ಎರಡೂ ಕಡೆ ಹೋಗುವ ವಾಹನಗಳು ಒಂದೇ ರಸ್ತೆಯಲ್ಲಿ ಓಡಾಡಬೇಕಾಯಿತು. ಇದರಿಂದ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಬೇಕಾಯಿತು. ಪಾದಯಾತ್ರೆ ಆರಂಭಕ್ಕೂ ಮುನ್ನ ಹೂಡಿ ಸರ್ಕಲ…ನಲ್ಲಿ ಟ್ರಾಫಿಕ್ ಬಂದ್ ಮಾಡಿದ್ದರಿಂದಲೂ ಸಂಚಾರ ಸಮಸ್ಯೆ ಉಂಟಾಗಿತ್ತು.