Advertisement

ಜವಾಬ್ದಾರಿಗಳನ್ನ ಕಳ್ಕೊಂಡು ಓಡಿಬರ್ತೀನಿ, ಕಾದಿರ್ತೀಯ?

05:58 PM Apr 17, 2018 | Team Udayavani |

ಅನ್ನ ಕೊಟ್ಟೆ, ಹಣ ಕೊಟ್ಟೆ, ಆಶ್ರಯ ಕೊಡಿಸಿ ದೇವರಿಗಿಂತ ಹೆಚ್ಚಾಗಿ ನನ್ನನ್ನು ಕಾಪಾಡಿದವಳು ನೀನು. ಅಂಥ ನಿನಗೇ ಒಂದು ಮಾತೂ ಹೇಳದೆ ಓಡಿ ಬಂದುಬಿಟ್ಟೆ. ಪರಿಸ್ಥಿತಿಯ ಕೈಗೊಂಬೆಯಾಗಿ ಹಾಗೆ ಮಾಡಲೇಬೇಕಾಯ್ತು ನಾನು…

Advertisement

ನನಗೆ ಗೊತ್ತು, ನನ್ನ ಮೇಲೆ ನಿನಗೆ ತುಂಬಾ ಕೋಪ ಇದೆ ಅಂತ. ನಿನಗೆ ಹೇಳದೆ ಊರು ಬಿಟ್ಟು ಬಂದದ್ದಕ್ಕೆ ನೀನು ಅದೆಷ್ಟು ನೋವು ಪಟ್ಟಿರುವೆ ಅಂತ. ಎಷ್ಟೇ ಕೋಪವಿದ್ದರೂ ನೀನು ಕ್ಷಮಿಸುತ್ತೀಯಾ ಎನ್ನುವ ನಂಬಿಕೆ ನನ್ನದು. ಏಕೆಂದರೆ, ನನ್ನ ಅಂತರಾಳದಲ್ಲಿ ಪ್ರೀತಿಯನ್ನು ಹುಟ್ಟುಹಾಕಿ ಚಿಗುರಿಸಿದವಳು ನೀನಲ್ಲವೇ, ಹುಡುಗಿಯರನ್ನು ನೋಡಿ ಮಾರುದ್ದ ಸರಿಯುತ್ತಿದ್ದ ನನ್ನನ್ನು ಪ್ರೀತಿಯೆಂಬ ಲೋಕಕ್ಕೆ ಕೊಂಡೊಯ್ದವಳು ನೀನಲ್ಲವೇ, ಈ ಹೃದಯದ ಒಡತಿ ನೀನಲ್ಲವೇ, ಈ ಜೀವಕೆ ಉಸಿರು ನೀನಲ್ಲವೇ?

ನಿನಗೆ ಗೊತ್ತಾ? ಅಂದು ಊರು ಬಿಟ್ಟಾಗಿನಿಂದ ಈ ಕಣ್ಣಿಗೆ ನಿದ್ದೆಯಿಲ್ಲ. ಕಣ್ಮುಚ್ಚಿದರೂ ತೆರೆದರೂ ಸದಾ ನಿನ್ನದೇ ಗುಂಗು. ನಿನ್ನ ನೋಡಲು ದಿನವೂ ಹಪಹಪಿಸುತ್ತಿದ್ದ ಈ ಮನಸ್ಸು ಸೊರಗಿದೆ. ನಿನ್ನನ್ನು ನೋಡಲು ಓಡಿ ಬರುತ್ತಿದ್ದ ಕಾಲ್ಗಳು ಇಂದು ಒಂದು ಹೆಜ್ಜೆ ಮುಂದಿಡಲಾಗದೆ ನೆಲಕಚ್ಚಿ ನಿಂತಿವೆ. ನನ್ನ ಬಡತನದ ಹಿನ್ನೆಲೆಯನ್ನು ತಿಳಿದೂ ಪ್ರೀತಿಸಿದವಳು ನೀನು.

ಕಾಲೇಜಿನ ಫೀ, ಬಸ್‌ಚಾರ್ಜಿಗೆ ಹಣ, ಹೊಸಬಟ್ಟೆಗೆ, ಶೂ ಖರೀದಿಗೆ, ನೋಟ್‌ಬುಕ್‌ಗೆ…ಹೀಗೆ ಪ್ರತಿಯೊಂದಕ್ಕೂ ನನ್ನ ಖರ್ಚು ನೋಡಿಕೊಂಡವಳು ನೀನು. ನೋಡು, ಈಗ ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ತಾ ಇದೀನಿ. ಭವಿಷ್ಯದಲ್ಲಿ ನೀನೂ ನನ್ನನ್ನು ಚೆನ್ನಾಗಿ ನೋಡ್ಕೊಬೇಕು. ಅಷ್ಟೇ ನಿನ್ನಲ್ಲಿ ವಿನಂತಿ ಎಂದು ನೀನು ಹೇಳಿದಾಗ, ಎಲ್ಲ ದೇವರ ಮೇಲೂ ಆಣೆ ಮಾಡಿ ನಾನು ಮಾತಿಗೆ ತಪ್ಪೋದಿಲ್ಲ ಅಂದಿದ್ದವನು ನಾನು.

ಆದರೆ…ಆದರೆ… ನಾವಿಬ್ಬರೂ ಮಾತನಾಡಲು ಸೇರುತ್ತಿದ್ದ ಜಾಗಗಳು, ನೀನು ನೀರಿಗೆ ಬರುವ ದಾರಿ ಕಾಯುತ್ತ ಕೆರೆಯ ದಂಡೆ ಮೇಲೆ ಕುಳಿತಿದ್ದು, ನಮ್ಮೂರ ಭೀಮಪ್ಪಜ್ಜನ ಮಾವಿನ ತೋಪು, ಮಾವಿನ ಕಾಯಿ ಕೀಳಲು ಹೋಗಿ ಮರದ ಮೇಲಿಂದ ಜಾರಿ ಬಿದ್ದು ಗಾಯ ಮಾಡಿಕೊಂಡ ನನಗೆ ಬೇವಿನ ಚಕ್ಕೆಯಿಂದ ಔಷಧಿ ಲೇಪಿಸಿ ನಿನ್ನ ಚೂಡಿದಾರದ ಓಡಿನಿಯನ್ನು ಹರಿದು ಕಟ್ಟಿ ಆರೈಕೆ ಮಾಡಿದ ಕ್ಷಣ,

Advertisement

ಊರ ಹೊರಗಿನ ಬಯಲು,ನಮ್ಮೂರಿನ ಬೆಟ್ಟ ಗುಡ್ಡದ ಕಲ್ಲಿನ ಮೇಲೆ ನಮ್ಮಿಬ್ಬರ ಹೆಸರು ಕೆತ್ತಿದ್ದು, ಹಳ್ಳದ ದಂಡೆಯ ಮರಳಿನಲ್ಲಿ ಗುಬ್ಬಿಯ ಗೂಡು ಕಟ್ಟಿದ್ದು, ಸದಾ ನಾವಿಬ್ಬರೂ ಮಾತನಾಡುತ್ತ ಬೇಸರವ ಮರೆತದ್ದು…ಈ ಮಧುರ ನೆನಪುಗಳು ಈಗಲೂ ನನ್ನೊಂದಿಗಿವೆ. ನಿಜ. ಸಮಯ ಎಂಬುದು ಒಂದೇ ತರನಾಗಿ ಇರುವುದಿಲ್ಲ, ಎಂಬುದಕ್ಕೆ ನಮ್ಮಿಬ್ಬರ ಅಗಲಿಕೆಯೇ ಸಾಕ್ಷಿ.

ಮನೆಯ ಹಿರಿಯ ಮಗನಾದ ನಾನು ನನ್ನ ಜವಾಬ್ದಾರಿಯನ್ನು ಅರಿತು ನಡೆಯಬೇಕಿದೆ. ಎದೆಯೆತ್ತರ ಬೆಳೆದು ನಿಂತಿರುವ ಸಾಲ, ಕಳೆಗುಂದಿರುವ ಅಮ್ಮನ ಮುಖ, ಸುಮಾರಾಗಿ ಓದುತ್ತಿರುವ ತಮ್ಮ, ಮದುವೆ ವಯಸ್ಸಿಗೆ ಬಂದಿರುವ ತಂಗಿ…ಇವರೆಲ್ಲರ ಬದುಕನ್ನು ನೆಮ್ಮದಿಯ ಹಳಿಗೆ ತಂದು ನಿಲ್ಲಿಸಬೇಕಾಗಿದೆ. ಇದೆಲ್ಲಾ ಆಗಬೇಕೆಂದರೆ ನಾನು ಒಂದು ಕೆಲಸಕ್ಕೆ ಸೇರಿಕೊಳ್ಳಬೇಕು.

ಮೂರ್‍ನಾಲ್ಕು ವರ್ಷದವರೆಗೆ ಎರಡು ಪಾಳಿಯಲ್ಲಿ ಕೆಲಸ ಮಾಡಿಯಾದ್ರೂ ಈ ಜವಾಬ್ದಾರಿಗಳನ್ನು ಮುಗಿಸಿ ನಿನ್ನೆಡೆಗೆ ಹಾರಿ ಬರ್ತೀನಿ. ಅದೆಷ್ಟೇ ಆಯಾಸವಾಗಿದ್ರೂ ಸರಿ, ನಿನ್ನನ್ನು ಕಂಡಾಕ್ಷಣ ಆಗುವ ಸಂತೋಷಕ್ಕೆ, ತುಟಿ ಮೀರಿ ಬಂದ ಭಾವುಕತೆಗೆ, ನನ್ನ ಎಣೆಯಿರದ ಸೌಭಾಗ್ಯಕ್ಕೆ ಬೆರಗಾಗಿ ನಿನ್ನ ಕೈ ಹಿಡಿದು ಸಮಾಧಾನವಾಗುವಷ್ಟು ಅತ್ತು… ಆಮೇಲೆ ನಿನ್ನ ಜೊತೇನೇ ಬದುಕ್ತೇನೆ. ಪ್ಲೀಸ್‌, ಸ್ವಲ್ಪ ದಿನ ಕಾಯ್ತಿಯಾ?
ಇಂತಿ ನಿನ್ನ ಮನಮೆಚ್ಚಿದ ಹುಡುಗ,
ಪ್ರಶಾಂತ್‌ ಮೇಟಿ

Advertisement

Udayavani is now on Telegram. Click here to join our channel and stay updated with the latest news.

Next