Advertisement

ನಿಯಮ ಉಲ್ಲಂಘನೆ: 350 ಪ್ರಕರಣ ದಾಖಲು

11:48 AM Sep 14, 2019 | Suhan S |

ಹಾವೇರಿ: ಪರಿಷ್ಕೃತ ಮೋಟಾರು ವಾಹನ ಕಾಯಿದೆಯಂತೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಭಾರಿ ದಂಡ ವಿಧಿಸುವ ಪ್ರಕ್ರಿಯೆ ಜಿಲ್ಲೆಯ ಎಲ್ಲೆಡೆ ಇನ್ನೂ ಕಟ್ಟುನಿಟ್ಟಾಗಿ ಜಾರಿಗೊಳಿಸದೆ ಇದ್ದರೂ ಕಳೆದ ನಾಲ್ಕು ದಿನಗಳಲ್ಲಿ 350 ಪ್ರಕರಣಗಳು ದಾಖಲಾಗಿ, ಎರಡು ಲಕ್ಷ ರೂ.ಗಳಷ್ಟು ದಂಡ ಸ್ವೀಕರಿಸಲಾಗಿದೆ.

Advertisement

ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಭಾರಿ ದಂಡ ವಿಧಿಸುತ್ತಿರುವ ಬಗ್ಗೆ ವಾಹನ ಸವಾರರು ಸಾಕಷ್ಟು ಅಸಮಾಧಾನ ವ್ಯಕ್ತಪಡಿಸುತ್ತಲೇ ಜಾಗರೂಕ ಚಾಲನೆಯತ್ತ ಲಕ್ಷ ್ಯವಹಿಸಿದ್ದಾರೆ. ಯಾವ ಕಡೆ ಪೊಲೀಸರು, ಆರ್‌ಟಿಒ ಅಧಿಕಾರಿಗಳು ನಿಂತು ವಾಹನ ತಪಾಸಣೆ ಮಾಡುತ್ತಿದ್ದಾರೆ ಎಂದು ಒಬ್ಬರಿಗೊಬ್ಬರು ಕೇಳಿ ತಿಳಿದುಕೊಂಡೇ ವಾಹನಗಳನ್ನು ಮುಂದಕ್ಕೆ ಚಲಾಯಿಸುತ್ತಿದ್ದಾರೆ.

ಪೊಲೀಸರು ಒಮ್ಮೇಲೆ ಎಲ್ಲ ಸಂಚಾರಿ ನಿಯಮ ಉಲ್ಲಂಘನೆಗಳನ್ನು ಪರಿಗಣಿಸದೆ ದಂಡದೊಂದಿಗೆ ಜಾಗೃತಿಯೂ ಮೂಡಿಸಲು ಹೆಲ್ಮೇಟ್ ಧರಿಸದೆ ವಾಹನ ಚಲಾಯಿಸುವವರ ಮೇಲೆ ಕಣ್ಣಿದ್ದಾರೆ. ಹೀಗಾಗಿ ನಾಲ್ಕು ದಿನಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡಿದ ಪ್ರಕರಣಗಳೇ ಶೇ. 90ರಷ್ಟು ಇವೆ.

3.43ಲಕ್ಷ ವಾಹನಗಳು: ಜಿಲ್ಲೆಯಲ್ಲಿ ಸಾರಿಗೆ ಹಾಗೂ ಸಾರಿಗೇತರ ಸೇರಿ ಒಟ್ಟು 3,43,947 ವಾಹನಗಳು ಇವೆ. ಸಾರಿಗೇತರ ವಾಹನಗಳ ಸಂಖ್ಯೆ 3,12,255 ಇದ್ದು, ಅದರಲ್ಲಿ 2,65,879 ದ್ವಿಚಕ್ರ ವಾಹನಗಳೇ ಇವೆ. 13175 ಕಾರುಗಳು, 500 ಜೀಪುಗಳು, 1761 ಒಮ್ನಿ, 16940 ಟ್ರ್ಯಾಕ್ಟರ್‌ಗಳು, 11145 ಟ್ರೇಲರ್‌ಗಳು, 85 ನಿರ್ಮಾಣ ಸಾಮಗ್ರಿ ವಾಹನಗಳು ಹಾಗೂ 2770 ಇತರೆ ವಾಹನಗಳು ಇವೆ.

ಜಿಲ್ಲೆಯಲ್ಲಿ ಒಟ್ಟು 4883 ಸರಕು ವಾಹನಗಳಿದ್ದು, ಇವುಗಳಲ್ಲಿ 811 ಮಲ್ಟಿ ಎಕ್ಸಲ್ಡ್ ವಾಹನಗಳು, 4072 ಟ್ರಕ್‌ ಮತ್ತು ಲಾರಿಗಳು ಇವೆ. ಜಿಲ್ಲೆಯಲ್ಲಿ ಒಟ್ಟು 9278 ಲಘು ಸರಕು ವಾಹನಗಳಿದ್ದು ಇವುಗಳಲ್ಲಿ 4846 ನಾಲ್ಕು ಚಕ್ರದ ವಾಹನಗಳು, 4432 ಮೂರು ಚಕ್ರದ ವಾಹನಗಳು ಇವೆ.

Advertisement

ಜಿಲ್ಲೆಯಲ್ಲಿ ಒಟ್ಟು 1290 ಬಸ್‌ಗಳಿವೆ. 898 ಸ್ಟೇಜ್‌ ಕ್ಯಾರೇಜ್‌ಗಳು, 16 ಒಪ್ಪಂದ ವಾಹನಗಳು, 55 ಖಾಸಗಿ ಸೇವಾ ವಾಹನಗಳು, 191 ವಿದ್ಯಾ ಸಂಸ್ಥೆ ವಾಹನಗಳು, 130 ಇತರೆ ಬಸ್‌ಗಳು ಇವೆ. ಜಿಲೆಯಲ್ಲಿ ಒಟ್ಟು 5743 ಟ್ಯಾಕ್ಸಿಗಳಿವೆ. ಇವುಗಳಲ್ಲಿ 3676 ಮೋಟಾರು ಕ್ಯಾಬ್‌, 2067 ಮ್ಯಾಕ್ಸಿಕ್ಯಾಬ್‌ಗಳು ಇವೆ. ಜಿಲ್ಲೆಯಲ್ಲಿ ಲಘು ಪ್ರಯಾಣಿಕರ ವಾಹನಗಳ ಸಂಖ್ಯೆ 7939 ಇದ್ದು ಇದರಲ್ಲಿ 6290 ಆಟೋರಿಕ್ಷಾಗಳು, 1649 4ರಿಂದ 6 ಆಸನಗಳ ವಾಹನಗಳು ಇವೆ.

13 ತಪಾಸಣಾ ಕೇಂದ್ರಗಳು: ಜಿಲ್ಲೆಯಲ್ಲಿ ಒಟ್ಟು 13 ವಾಹನ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳಿವೆ. ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಆರು, ರಾಣಿಬೆನ್ನೂರಿನಲ್ಲಿ ಮೂರು, ಸವಣೂರು, ಬೊಮ್ಮನಳ್ಳಿ, ಹಿರೇಕೆರೂರು, ಕುಮಾರಪಟ್ಟಣದಲ್ಲಿ ತಲಾ ಒಂದು ವಾಹನಗಳ ವಾಯುಮಾಲಿನ್ಯ ತಪಾಸಣಾ ಕೇಂದ್ರಗಳಿವೆ.

ಕಾರ್ಯವೈಖರಿ: ವಾಯುಮಾಲಿನ್ಯ ತಪಾಸಣಾ ಕೇಂದ್ರಗಳಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯೇ ತನ್ನ ಕೇಂದ್ರ ಕಚೇರಿಯಿಂದ ಪರವಾನಗಿ ನೀಡುತ್ತದೆ. ವಾಹನ ತಪಾಸಣೆಗೆ ಅಗತ್ಯವಿರುವ ಉಪಕರಣ, ಸ್ಥಳ ಸೇರಿದಂತೆ ಇನ್ನಿತರ ನಿಯಮಬದ್ಧ ಅರ್ಹತೆ ಹೊಂದಿದವರಿಗೆ ಮಂಡಳಿ ಪರವಾನಗಿ ನೀಡುತ್ತದೆ. ಪರವಾನಗಿ ಪಡೆದ ಅಧಿಕೃತ ಕೇಂದ್ರಗಳಿಗೆ ಪರವಾನಗಿ ನಂಬರ್‌ ಇದ್ದು, ಮಾಲಿನ್ಯ ತಪಾಸಣಾ ಪ್ರಮಾಣ ಪತ್ರದಲ್ಲಿ ಈ ನಂಬರ್‌ ನಮೂದಾಗಿರುತ್ತದೆ. ಈ ನಂಬರ್‌ ಆಧಾರದ ಮೇಲೆ ಆರ್‌ಟಿಒ, ಪೊಲೀಸರು ಹಾಗೂ ಸ್ಥಳೀಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಪಾಸಣಾ ಕೇಂದ್ರ ಅಧಿಕೃತವೊ ಅನಧಿಕೃತವೋ ಎಂದು ದೃಢಪಡಿಸಿಕೊಳ್ಳುತ್ತಾರೆ. ಹೊಸ ವಾಹನಗಳಿಗೆ ಒಮ್ಮೆ ಮಾಲಿನ್ಯ ತಪಾಸಣೆ ಮಾಡಿಸಿದರೆ ಅದು ಎರಡು ವರ್ಷದವರೆಗೆ ಚಾಲ್ತಿಯಲ್ಲಿರುತ್ತದೆ. ಹಳೆ ವಾಹನಗಳನ್ನು ಆರು ತಿಂಗಳಿಗೊಮ್ಮೆ ತಪಾಸಣೆ ಮಾಡಬೇಕಾಗುತ್ತದೆ.

ಶಂಕೆ ಬಂದರೆ ತಪಾಸಣೆ: ಮಾಲಿನ್ಯ ತಪಾಸಣೆ ಕೇಂದ್ರದಿಂದ ತಪಾಸಣೆ ಪ್ರಮಾಣ ಪತ್ರ ಹೊಂದಿದ್ದರೂ ಮೇಲ್ನೊಟಕ್ಕೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಹೊಗೆ ಉಗುಳುವ, ಶಬ್ಧ ಮಾಡುವ ವಾಹನಗಳು ಕಂಡು ಬಂದರೆ, ತಪಾಸಣೆ ಪ್ರಮಾಣಪತ್ರ ಇದ್ದರೂ ಯಾವುದೇ ವಾಹನದಿಂದ ಪರಿಸರ ಮಾಲಿನ್ಯ ಆಗುತ್ತಿದೆ ಎಂಬ ಸಂಶಯ ಬಂದರೆ ಆರ್‌ಟಿಒ ಅಧಿಕಾರಿಗಳು ಅಂಥ ವಾಹನಗಳನ್ನು ಸ್ವತಃ ತಪಾಸಣೆ ಮಾಡಿ ಖಾತ್ರಿ ಪಡಿಸಿಕೊಳ್ಳುತ್ತಾರೆ. ಮಾಲಿನ್ಯ ತಪಾಸಣೆಗೆ ಪ್ರತ್ಯೇಕ ವಿಶೇಷ ವಾಹನವಿದ್ದು, ಅದನ್ನು ಲಭ್ಯವಿರುವ ಬೇರೆ ಇಲಾಖೆಯಿಂದ ಎರವಲು ಪಡೆದು ಆರ್‌ಟಿಒ ಅಧಿಕಾರಿಗಳು ತಪಾಸಣೆ ಮಾಡುತ್ತಾರೆ. ಆಗ ವಾಹನದಿಂದ ವಾಯು ಮಾಲಿನ್ಯ ಆಗುವುದು ಖಚಿತವಾದರೆ ನಿಯಮಾನುಸಾರ ದಂಡ ವಿಸಲಾಗುತ್ತದೆ.

ಒಟ್ಟಾರೆ ಪರಿಷ್ಕೃತ ಮೋಟಾರು ವಾಹನ ಕಾಯಿದೆ ಜಿಲ್ಲೆಯ ವಾಹನ ಸವಾರರ ನಿದ್ದೆಗೆಡಿಸಿದರೆ, ಇತ್ತ ಅಧಿಕಾರಿಗಳಿಗೆ ಕಾಯಿದೆಯ ಕಟ್ಟುನಿಟ್ಟಿನ ದಿಢೀರ್‌ ಅನುಷ್ಠಾನ ದೊಡ್ಡ ತಲೆನೋವಾಗಿದೆ.

 

•ಎಚ್.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next