Advertisement

ಹಣದ ಹಿಂದೆ ಬೆನ್ನತ್ತಿದವನ ಬಾಳು ಹಾಳು; ಡಾ|ಸೋಮನಾಥ

04:05 PM Jan 12, 2021 | Team Udayavani |

ಭಾಲ್ಕಿ: ಆಧುನಿಕ ಯಾಂತ್ರಿಕ ಯುಗದಲ್ಲಿ ವ್ಯಕ್ತಿ ಹಣಗಳಿಸುವ ಹಪಾಪಿತನದಿಂದ ಅಮೂಲ್ಯವಾದ ಬದುಕು ಹಾಳು ಮಾಡಿಕೊಳ್ಳುತ್ತಿರುವುದು ಅತ್ಯಂತ ಖೇದದ ಸಂಗತಿಯಾಗಿದೆ ಎಂದು ಹಿರಿಯ ಸಾಹಿತಿ ಡಾ| ಸೋಮನಾಥ ಯಾಳವಾರ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಉಪನ್ಯಾಸಕರ ಬಡಾವಣೆಯ ಗುರು ಕಾಲೋನಿಯ ದತ್ತ ಮಂದಿರ ಆವರಣದಲ್ಲಿ ಶಿವಾಜಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕ ಪ್ರೋ. ಶಂಭುಲಿಂಗ ಕಾಮಣ್ಣ ಅವರ ಅಭಿನಂದನಾ ಕಾರ್ಯಕ್ರಮ ಮತ್ತು ಸಾತ್ವಿಕ ಗ್ರಂಥ ಸಮರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಾತ್ವಿಕ ಎಂದರೆ ಜೀವನ ವಿಧಾನ. ಅಂತರಂಗ, ಬಹಿರಂಗ ಶುದ್ಧಿಗೊಳಿಸಿ ಸಾತ್ವಿಕ ಬದುಕು ಸಾಗಿಸಿದ 12ನೇ ಶತಮಾನದ ಶರಣರ ಜೀವನ ವಿಶ್ವಕ್ಕೆ ಮಾದರಿಯಾಗಿದೆ. ಅರವತ್ತರ ನಂತರ ಬದುಕು ಮರುಳಾಗದೆ, ಅರಳುತ್ತದೆ ಎನ್ನುವುದನ್ನು ನಿವೃತ್ತಿಯಾದವರು ಅರಿತುಕೊಳ್ಳಬೇಕು. ಬರೆದಿಟ್ಟಂತೆ ಜೀವನ ನಡೆಸಲು ಸಾಧ್ಯವಾಗದಿದ್ದರೆ, ಬರೆದಿಡುವಂತೆ ಆದರ್ಶ ಜೀವನ ನಡೆಸಬೇಕು. ವಿಶ್ರಾಂತ ಶಂಭುಲಿಂಗ ಕಾಮಣ್ಣವರ ಹಾಸ್ಯಭರಿತ ಸಾಹಿತ್ಯಿಕ ಚಟುವಟಿಕೆಗಳು ಇತರರಿಗೆ ಪ್ರೇರಣೆ ನೀಡುತ್ತವೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಡಾ| ಬಸವಲಿಂಗ ಪಟ್ಟದ್ದೇವರು, ನಾವು ಆಡುವ ಪ್ರತಿಯೊಂದು ಒಳ್ಳೆಯ ಮಾತಿನಿಂದ ವ್ಯಕ್ತಿಯ ಜೀವನದಲ್ಲಿ ಪರಿವರ್ತನೆ ತರಲು ಸಾಧ್ಯ. ಕಾರಣ ಪ್ರತಿಯೊಬ್ಬರು ಇನ್ನೊಬರ ಮನಸ್ಸು ಅರಳಿಸುವ ಮಾತುಗಳನ್ನೇ ಆಡಬೇಕು. ಪ್ರಯತ್ನ, ಪರಿಶ್ರಮದಿಂದ ಬೇಕಾದನ್ನು ಸಾಧಿ ಸಲು ಸಾಧ್ಯ. ಶರಣರ ತತ್ವ-ಸಿದ್ಧಾಂತಗಳು ಮೈಗೂಡಿಸಿಕೊಂಡರೆ ಸಾತ್ವಿಕ ಬದುಕು ಸಾಗಿಸಬಹುದು.

ಪ್ರೋ. ಶಂಭುಲಿಂಗ ಕಾಮಣ್ಣ ಅವರು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಎತ್ತರೆತ್ತರಕ್ಕೆ ಬೆಳೆಯಲು ಧರ್ಮಪತ್ನಿ ಪುಣ್ಯವತಿಯವರ ಸಹಕಾರ, ಪ್ರೋತ್ಸಾಹ ಕಾರಣ ಎಂದು ಹೇಳಿದರು. ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಶಿಖರೇಶ್ವರ ಶೆಟಕಾರ್‌ ಅಧ್ಯಕ್ಷತೆ ವಹಿಸಿದ್ದರು. ಬೀದರ ಕರ್ನಾಟಕ ಪದವಿ ಕಾಲೇಜಿನ ಪ್ರಾಚಾರ್ಯ ಡಾ| ಜಗನ್ನಾಥ ಹೆಬ್ಟಾಳೆ, ಕಲಬುರಗಿಯ ಡಾ| ಟಿ.ಆರ್‌.ಗುರುಬಸಪ್ಪ ಮತ್ತು ಸಿ.ಎಸ್‌.ಆನಂದ ಮಾತನಾಡಿದರು. ಇದೇ ವೇಳೆ ಅಪಾರ ಅಭಿಮಾನಿ ಬಳಗದವರು ಪ್ರೊ| ಶಂಭುಲಿಂಗ ಕಾಮಣ್ಣ ಮತ್ತು ಪತ್ನಿ ಪುಣ್ಯವತಿ ಅವರನ್ನು ಗೌರವಿಸಿದರು.

ಸನ್ಮಾನ: ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಡಾ| ಗುರುಲಿಂಗಪ್ಪ ಧಬಾಲೆ ಅಕ್ಕಲಕೋಟ (ಸಂಶೋಧನೆ), ಡಾ| ಕಲ್ಯಾಣರಾವ ಪಾಟೀಲ್‌ ಕಲಬುರಗಿ (ಸಾಹಿತ್ಯ), ಡಾ| ಚಂದ್ರಶೇಖರ ಬಿರಾದಾರ್‌ ಭಾಲ್ಕಿ (ಶೈಕ್ಷಣಿಕ), ಪಂಚಾಕ್ಷರಿ ಪುಣ್ಯಶೆಟ್ಟಿ ಬೀದರ್‌ (ನಾಡು-ನುಡಿ), ವಿಶ್ವನಾಥಪ್ಪ ಬಿರಾದಾರ್‌ ಭಾಲ್ಕಿ (ಧಾರ್ಮಿಕ), ಬಸವರಾಜ ಮರೆ ಭಾಲ್ಕಿ (ಸಂಘಟನೆ), ಶಿವಾಜಿ ಸಗರ ಭಾತಂಬ್ರಾ (ಸಂಗೀತ), ಪ್ರಭು ಕಾಂಬಳೆ ಕುಂಟೆಸಿರ್ಸಿ (ಕಲೆ) ಮತ್ತು ಹೀರಾಚಂದ ವಾಘಮಾರೆ ಭಾಲ್ಕಿ (ಸಾಮಾಜಿಕ) ಅವರನ್ನು ಗೌರವಿಸಲಾಯಿತು. ಪ್ರೊ| ಶಂಭುಲಿಂಗ ಕಾಮಣ್ಣ ಸ್ವಾಗತಿಸಿದರು. ಸಾಹಿತಿ
ವೀರಣ್ಣ ಕುಂಬಾರ ನಿರೂಪಿಸಿದರು. ಕಲ್ಲಪ್ಪ ಹೂಗಾರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next