ಉಪ್ಪಿನಂಗಡಿ: ತಣ್ಣೀರುಪಂಥ ಗ್ರಾಮದ ರುದ್ರಗಿರಿಯಲ್ಲಿ ಬುಧವಾರ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಮಗುಚಿ ಬಿದ್ದ ಪರಿಣಾಮ ಓರ್ವ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ.
ತಣ್ಣೀರುಪಂಥ ಗ್ರಾಮದ ಎಕ್ಕಳದ ಜಯರಾಮ ಶೆಟ್ಟಿ (40) ಮೃತ ಪಟ್ಟವರು. ಗಾಯಗೊಂಡು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ತಣ್ಣೀರುಪಂಥ ಗ್ರಾಮದ ಅಂತರದ ನವೀನಚಂದ್ರ (35) ಹಾಗೂ ಬಟ್ಟಂಡದ ಶ್ರೀಧರ (38) ಗಾಯಗೊಂಡಿದ್ದು, ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಣ್ಣೀರುಪಂಥ ಗ್ರಾಮದ ರುದ್ರಗಿರಿ ಮೃತ್ಯುಂಜಯ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದ್ದು, ಅದರ ನಿರ್ಮಾಣ ಕಾಮಗಾರಿಗೆಂದು ಊರಿನ ಕೆಲವು ಭಕ್ತರು ಲಾರಿಯೊಂದರಲ್ಲಿ ಸಾಮಗ್ರಿಗಳನ್ನು ತರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಲಾರಿಯು ರುದ್ರಗಿರಿ ದೇವಾಲಯದ ಪ್ರವೇಶ ದ್ವಾರ ಪ್ರವೇಶಿಸಿ ಮುಂದಕ್ಕೆ ಸಾಗುತ್ತಿದ್ದಂತೆಯೇ ನಿಯಂತ್ರಣ ತಪ್ಪಿ ರಸ್ತೆ ಬದಿಯ ಆಳಕ್ಕೆ ಮಗುಚಿ ಬಿತ್ತು.
ಈ ಮೂವರು ಲಾರಿಯ ಹಿಂಬದಿ ಹೇರಲಾದ ಸಾಮಗ್ರಿಗಳೊಂದಿಗೆ ಕುಳಿತಿದ್ದರು. ತೋಟದ ಮಧ್ಯೆ ಸುಮಾರು ಐದಾರು ಅಡಿ ಮಣ್ಣು ಹಾಕಿ ಎತ್ತರಿಸಿ ಈ ರಸ್ತೆಯನ್ನು ನಿರ್ಮಿಸಲಾಗಿದ್ದು, ರಸ್ತೆಯು ತೀರಾ ಇಕ್ಕಟ್ಟಾಗಿದೆಯಲ್ಲದೆ, ಇಲ್ಲಿ ಒಮ್ಮೆಗೆ ಒಂದು ಲಾರಿ ಸಂಚರಿಸುವಷ್ಟು ಮಾತ್ರ ಜಾಗವಿದೆ. ಈ ಜಾಗದಲ್ಲಿ ಲಾರಿ ಸಂಚರಿಸುವಾಗ ಹಾಕಿದ ಮಣ್ಣು ಕುಸಿದು ಲಾರಿಯು ರಸ್ತೆ ಬದಿಯ ಆಳಕ್ಕೆ ಮಗುಚಿ ಬಿದ್ದಿದೆ. ಲಾರಿಯ ಚಾಲಕ ಸೇರಿದಂತೆ ಆತನ ಬಳಿ ಇನ್ನು ಮೂವರು ಕುಳಿತಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.