ನಟ ರಿಷಿ ನಾಯಕರಾಗಿರುವ “ರುದ್ರ ಗರುಡ ಪುರಾಣ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಚಿತ್ರದ ಹೊಸ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ಲೋಹಿತ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಚಂಬಲ್, ಡಿಯರ್ ವಿಕ್ರಮ್ ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ದೇಶಿಸಿರುವ ಕೆ.ಎಸ್ ನಂದೀಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕಥೆ ಹಾಗೂ ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ.
ಸಿನಿಮಾದ ಕಥೆ ಹುಟ್ಟಿ ಕೊಂಡ ಬಗ್ಗೆ ನಿರ್ದೇಶಕ ನಂದೀಶ್ ಹಲವು ಕುತೂಹಲಕರ ಅಂಶಗಳನ್ನು ಹೇಳುತ್ತಾರೆ. ಅವರದ್ದೇ ಮಾತಲ್ಲಿ ಅದನ್ನು ಕೇಳುವುದು ಚೆಂದ.. “ಗರುಡ ಪುರಾಣ ಅನ್ನೋದು ಕರ್ಮ ಸಿದ್ದಾಂತಕ್ಕೆ ಸಂಬಂಧಪಟ್ಟ ಹಿಂದೂ
ಧರ್ಮದ ಒಂದು ಪುರಾಣ ಆಗಿದೆ. ಸಾವಿನ ನಂತರ ಮನುಷ್ಯನಿಗೆ ಅವನು ಮಾಡಿರುವ ಕರ್ಮಗಳ ಅನುಸಾರ ಸ್ವರ್ಗ ಅಥವಾ ನರಕ. ಮತ್ತು ಮಾಡಿದ ತಪ್ಪಿಗೆ ಎಂತಹ ಶಿಕ್ಷೆಗಳು ಕೊಡಲಾಗುತ್ತದೆ ಎಂದು ಹೇಳಿದೆ. ಆಧುನಿಕ ಜಗತ್ತಿನಲ್ಲಿ ನರಕಕ್ಕೆ ಹೋದ ಮೇಲೆ ಶಿಕ್ಷೆ ಇಲ್ಲ. ಮಾಡಿದ ಕರ್ಮಕ್ಕೆ ಇಲ್ಲೇ ಎಲ್ಲವೂ ಎಂದು ಹೇಳುತ್ತಾರೆ. ಇಂತಹ ವಿಚಾರಗಳನ್ನು ಇಟ್ಟುಕೊಂಡು ಮಾಡಿರುವ ಇನ್ವೆಸ್ಟಿಗೇಷನ್. ಡ್ರಾಮ ಮತ್ತು ಥ್ರಿಲ್ಲರ್ ಒಳಗೊಂಡ ಸಿನಿಮಾ ರುದ್ರ ಗರುಡ ಪುರಾಣ ಎನ್ನುವುದು ನಿರ್ದೇಶಕರ ಮಾತು.
ಒಟ್ಟು 70 ದಿನಗಳು ಚಿತ್ರೀಕರಣ ಮಾಡಲಾಗಿದೆ. ರಿಷಿ ಅವರಿಗೆ ನಾಯಕಿಯಾಗಿ ಪ್ರಿಯಾಂಕಾ ಕುಮಾರ್ ನಟಿಸಿದ್ದಾರೆ. ಉಳಿದಂತೆ ಹಿರಿಯ ನಟರಾದ ಅವಿನಾಶ್. ಕೆ.ಎಸ್.ಶ್ರೀಧರ್, ವಿನೋದ್ ಆಳ್ವ, ನಂದ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಕೆ.ಪಿ.ಸಂಗೀತವಿದ್ದು, ಸಿನಿಮಾದಲ್ಲಿ 5 ಹಾಡುಗಳಿವೆ. ಮಂಜು ಮಾಂಡವ್ಯ, ಪ್ರಮೋದ್ ಮರುವಂತೆ, ಕಿನ್ನಾಲ್ ರಾಜ್, ಚಿನ್ಮಯ್ ಬಾವಿಕೆರೆ ಅವರು ಬರೆದಿದ್ದಾರೆ.