ಹೊಸಬರೇ ನಿರ್ಮಿಸಿ ನಿರ್ದೇಶಿಸಿರುವ ಹಾರರ್ ಥ್ರಿಲ್ಲರ್ ಚಿತ್ರ “ರುಧಿರ ಕಣಿವೆ. “ಜನುಮ ಜನುಮಾಂತರದ ಪ್ರೇಮ ಕಾವ್ಯ’ ಎಂಬ ಅಡಿಬರಹ ಈ ಚಿತ್ರ ಕ್ಕಿದೆ. ಸದ್ದಿಲ್ಲದೇ ತನ್ನ ಚಿತ್ರೀಕರಣ ಮುಗಿಸಿ, ಸೆನ್ಸಾರ್ ಮುಗಿಸಿರುವ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರತಂಡ ಇತ್ತೀಚೆಗೆ ತನ್ನ ಆಡಿಯೋ ಹಾಗೂ ಟೀಸರ್ ಬಿಡುಗಡೆಗೊಳಿಸಿದೆ.
“ಶ್ರೀಲಕ್ಷ್ಮೀ ನರಸಿಂಹ ಮೂವೀಸ್ ಬ್ಯಾನರ್’ ಅಡಿಯಲ್ಲಿ ವಿಜಯ್ ಕುಮಾರ್ ಡಿ ನಿರ್ಮಾಣದ ಚಿತ್ರಕ್ಕೆ ನಿರ್ದೇಶಕ ಸಮರ್ಥ್ಎಂ ಆಕ್ಷನ್ ಕಟ್ ಹೇಳಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್ ಚಿತ್ರದ ಆಡಿಯೋ, ಟೀಸರ್ ಬಿಡುಗಡೆಗೊಳಿಸಿ, ಚಿತ್ರ ತಂಡಕ್ಕೆ ಶುಭ ಹಾರೈಸಿದರು.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಸಮರ್ಥ್, “ರುಧಿರ ಕಣಿವೆ’ ಒಂದು ಹಾರರ್ ಸಸ್ಪೆನ್ಸ್ ಚಿತ್ರ. ಇಲ್ಲಿ ಪುನರ್‌ಜನ್ಮದ ಇದೆ. ಚಿತ್ರದಲ್ಲಿ ನಾಲ್ಕು ಸಾಹಸ ದೃಶ್ಯಗಳು, 4 ಹಾಡುಗಳು ಇವೆ. ಚಿತ್ರ ಮುಡಿಗೇರೆ, ಮಂಗಳೂರು, ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣಗೊಂಡಿದೆ. ಡಿಸೆಂಬರ್ 30 ಚಿತ್ರ ಬಿಡುಗಡೆಯಾಗಲಿದೆ” ಎಂದರು.
ನಿರ್ಮಾಪಕ ವಿಜಯ ಕುಮಾರ್ ಮಾತನಾಡಿ, “ಸಮರ್ಥ್ ನನ್ನ ಬಳಿ ಚಿತ್ರದ ಕಥೆ ತಂದಾಗ ಸಿನಿಮಾ ಮಾಡಲೇಬೇಕು ಎಂದು ಪ್ರಾರಂಭಿಸಿದೆವು. ಕೊರೊನ ಕಾರಣದಿಂದ ಚಿತ್ರ ಅರ್ಧಕ್ಕೆ ನಿಂತಿತ್ತು. ಜೊತೆಯಲ್ಲಿ ಸ್ವಲ್ಪ ಹಣಕಾಸಿನ ಸಮಸ್ಯೆಯಾಯಿತು. ಆದರೆ ಚಿತ್ರವನ್ನು ಸಂಪೂರ್ಣಗೊಳಿಸಿ ಬಿಡುಗಡೆ ಹಂತಕ್ಕೆ ಬಂದಿದ್ದೇವೆ. ಚಿತ್ರ ಐದು ಭಾಷೆಗಳಲ್ಲೂ ಪೂರ್ತಿಯಾಗಿ ರೆಡಿಯಾಗಿದೆ. ಚಿತ್ರವನ್ನು ಮೊದಲು ಕನ್ನಡದಲ್ಲಿ ಬಿಡುಗಡೆ ಮಾಡಲಾಗುತ್ತದೆ. ನಂತರ ದಿನಗಳಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂ ಅಲ್ಲಿ ತೆರೆ ಕಾಣಲಿದೆ’ ಎಂದರು.
ಚಿತ್ರದಲ್ಲಿ ಕಾರ್ತಿಕ್ ನಾಯಕನಾಗಿ ಅಭಿನಯಿಸಿದ್ದು, ದಿಶಾ ಪೂವಯ್ಯ, ಅಮೃತಾ, ಭವ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಎ.ಟಿ ರವೀಶ್ ಸಂಗೀತ ಸಂಯೋಜನೆ, ಲಕ್ಕಿ ಗೌಡ ಛಾಯಾಗ್ರಹಣ, ಅರವಿಂದ ರಾಜ್ ಸಂಕಲನ , ಚಂದ್ರು ಬಂಡೆ ಸಾಹಸ ಚಿತ್ರಕ್ಕಿದೆ