ಚೆನ್ನೈ: ಅಯ್ಯಪ್ಪ ಭಕ್ತರ ಹಾಗೂ ದೇವಸ್ಥಾನದ ಭದ್ರತಾ ಸಿಬ್ಬಂದಿಗಳ ನಡುವೆ ಘರ್ಷಣೆ ಉಂಟಾದ ಘಟನೆ ತಿರುಚ್ಚಿಯ ಶ್ರೀರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ಅಯ್ಯಪ್ಪ ಭಕ್ತರು ಶಬರಿಮಲೆ ತಲುಪುವ ಮುನ್ನ ತಮಿಳುನಾಡಿನಾದ್ಯಂತ ಸಂಚರಿಸುವ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಭಕ್ತರು ತಿರುಚ್ಚಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ತಿರುಚ್ಚಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಸಮೀಪಕ್ಕೆ ಹೋಗುವ ವೇಳೆ ಭಕ್ತರು ‘ಗೋವಿಂದಾ’, ‘ಗೋವಿಂದಾ’ ಎಂದು ಜಪಿಸಲು ಶುರು ಮಾಡಿದ್ದಾರೆ. ಇದೇ ಸಮಯಕ್ಕೆ ದೇವಾಲಯದ ಭದ್ರತಾ ಸಿಬ್ಬಂದಿಗಳು ಭಕ್ತರನ್ನು ಪಠಣವನ್ನು ನಿಲ್ಲಿಸಲು ಹೇಳಿದ್ದಾರೆ. ಭಜನೆ ನಿಲ್ಲಿಸುವಂತೆ ಭದ್ರತಾ ಸಿಬ್ಬಂದಿ ಸೂಚಿಸಿದ ಬಳಿಕ ಭಕ್ತರು ನಡುವಿನ ವಾಗ್ವಾದ ನಡೆದಿದೆ. ಇದೇ ಕಾರಣದಿಂದ ಘರ್ಷಣೆ ಉಂಟಾಗಿದೆ ಎಂದು ವರದಿ ತಿಳಿಸಿದೆ.
ಗಲಾಟೆಯ ವೇಳೆ ಇಬ್ಬರು ಅಯ್ಯಪ್ಪ ಭಕ್ತರು ಗಾಯಗೊಂಡಿದ್ದು, ಓರ್ವ ಯಾತ್ರಿಕ ದೇವಸ್ಥಾನದ ನೆಲದ ಮೇಲೆ ರಕ್ತಸ್ರಾವವಾಗಿ ಕುಳಿತಿರುವ ದೃಶ್ಯಗಳು ಸೆರೆಯಾಗಿದೆ.
ಪರಿಸ್ಥಿತಿಯನ್ನು ಗಮನಿಸಿದ ಇತರ ಅಯ್ಯಪ್ಪ ಭಕ್ತರು ಜಮಾಯಿಸಿ, ಪೊಲೀಸರನ್ನು ಕರೆಸಿದ್ದಾರೆ. ಸದ್ಯ ಎರಡೂ ಕಡೆಯಿಂದ ದೂರು ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಬಿಜೆಪಿ ತಮಿಳುನಾಡು ತಿರುಚ್ಚಿ ಜಿಲ್ಲಾ ಘಟಕವು ಇಂದು ಶ್ರೀರಂಗಂ ರಂಗನಾಥ ಸ್ವಾಮಿ ದೇವಸ್ಥಾನದ ಹೊರಗೆ ತಮಿಳುನಾಡು ಮಾನವ ಸಂಪನ್ಮೂಲ ಮತ್ತು ಸಿಇ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಲಿದ್ದು, ದೇವಾಲಯದ ಪಾವಿತ್ರ್ಯತೆ ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಲಿದೆ ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಹೇಳಿದ್ದಾರೆ.