ರಾಯಚೂರು: ಇಲ್ಲಿಯ ಶಾಖೋತ್ಪನ್ನ ಕೇಂದ್ರದಲ್ಲಿ ಒಂದು ವಾರದಿಂದ ಸೋರಿಕೆಯಾಗುತ್ತಿರುವ ವಿಷಾನಿಲವು ಕಾಲುವೆ ಮೂಲಕ ನೇರ ಕೃಷ್ಣಾ ನದಿಗೆ ಸೇರುತ್ತಿದ್ದು, ಕೇಂದ್ರದ ಆಡಳಿತ ಮಂಡಳಿ ಅಮಾಯಕ ಜೀವಗಳ ಜತೆ ಚೆಲ್ಲಾಟವಾಡುತ್ತಿದೆ. ಮೊದಲಿನಿಂದಲೂ ಆರ್‌ಟಿಪಿಎಸ್ ಕೇಂದ್ರದಿಂದ ಮಲಿನ ನೀರು ನದಿಗೆ ಹರಿಸಲಾಗುತ್ತಿದೆ ಎಂಬ ಆರೋಪಗಳಿವೆ. ಆದರೆ ಕಳೆದೊಂದು ವಾರದಿಂದ ವಿಷಯುಕ್ತ ಅನಿಲವನ್ನು ನದಿಗೆ ಹರಿಬಿಡಲಾಗುತ್ತಿದೆ. ಇದರಿಂದ ನದಿಯನ್ನೇ ಅವಲಂಬಿಸಿರುವ ಗ್ರಾಮಗಳ ಜನರು ಹಾಗೂ ಜಲಚರಗಳ ಜೀವಕ್ಕೆ ಆಪತ್ತು ಎದುರಾಗಿದೆ.
ಕೇಂದ್ರದ ಐದನೇ ಘಟಕದಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಅನಿಲ ಸೋರಿಕೆಯಾಗಿದೆ. ಇದನ್ನು ತಡೆಯಬೇಕಿದ್ದ ಆಡಳಿತ ಮಂಡಳಿ ಮಲಿನ ನೀರು ಹರಿಸುವ ಕಾಲುವೆಗೆ ವಿಷಾನಿಲವನ್ನು ಸೇರಿಸಿದ್ದು, ಈ ವಿಷಯುಕ್ತ ಕಾಲುವೆ ನೀರು ನದಿಗೆ ಸೇರುತ್ತಿದೆ. ಈ ಬಗ್ಗೆ ಕೇಂದ್ರದ ಸಿಬ್ಬಂದಿ ತಾಂತ್ರಿಕ ದೋಷದಿಂದ ಅನಿಲ ಸೋರಿಕೆಯಾಗಿತ್ತು. ಈಗ ತಡೆಗಟ್ಟಲಾಗಿದೆ. ನದಿಗೆ ತ್ಯಾಜ್ಯ ಹರಿಸುತ್ತಿಲ್ಲ ಎಂದು ಸಮಜಾಯಿಷಿ ನೀಡುತ್ತಾರೆ. ಆದರೆ ಮಲಿನ ನೀರು ಕಾಲುವೆ ಮೂಲಕ ನದಿಗೆ ಸೇರುತ್ತಲೇ ಇದೆ. ಈ ಬಗ್ಗೆ ಸಾಕಷ್ಟು ಜನರ ವಿರೋಧವನ್ನು ಕೇಳುತ್ತಲೇ ಇಲ್ಲ ಎಂದು ಸ್ಥಳೀಯರು ದೂರುತ್ತಾರೆ.
ಕೃಷ್ಣಾ ನದಿಯಿಂದ ಆರ್‌ಟಿಪಿಎಸ್‌ಗೆ ಪ್ರತ್ಯೇಕ ಪೈಪ್‌ಲೈನ್ ವ್ಯವಸ್ಥೆಯಿದ್ದು, ನಿತ್ಯ 1.5 ಲಕ್ಷ ಕ್ಯೂಬಿಕ್ ಮೀಟರ್ ನೀರು ಬಳಸಿಕೊಳ್ಳಲಾಗುತ್ತಿದೆ. ಬಳಸಿದ ನೀರನ್ನು ಶುದ್ಧೀಕರಿಸಿ ಮರು ಬಳಕೆ ಮಾಡುವುದಾಗಿ ಕೇಂದ್ರ ಹೇಳಿದರೂ ಶುದ್ಧೀಕರಣ ಘಟಕದ ಬಳಿ ಅರ್ಧಕ್ಕಿಂತ ಹೆಚ್ಚು ಮಲಿನ ನೀರು ಮರುಬಳಕೆಯಾಗದೆ ನೇರವಾಗಿ ನದಿಗೆ ಹರಿಯುವುದು ಕಾಣುತ್ತದೆ. ಇದರಿಂದ ನದಿ ಪಾತ್ರದ ಜನ-ಜಾನುವಾರುಗಳಿಗೆ ವಿಷಯುಕ್ತ ನೀರು ಸೇವಿಸುವ ದೌರ್ಭಾಗ್ಯ ಎದುರಾಗಿದೆ.
ಸಿಎಸ್‌ಆರ್ ಬಳಕೆ ಇಲ್ಲ: ಕಾರ್ಖಾನೆ, ಕೈಗಾರಿಕೆಗಳು ಲಾಭದಲ್ಲಿ ನಿಗದಿತ ಹಣವನ್ನು ಸಾಮಾಜಿಕ ಹೊಣೆಗಾರಿಕೆಯಡಿ ಖರ್ಚು ಮಾಡಬೇಕಿದೆ. ಆರ್ ಟಿಪಿಎಸ್ ಕೂಡ ಸಿಎಸ್‌ಆರ್ ಚಟುವಟಿಕೆಗಾಗಿ ಕೋಟ್ಯಂತರ ರೂ. ಹಣ ಮೀಸಲಿಟ್ಟಿದೆ. ಈ
ಹಣದಿಂದ ಈ ಭಾಗದಲ್ಲಿ ಅರಣ್ಯೀಕರಣ, ಸುತ್ತಲಿನ ಗ್ರಾಮಗಳ ಅಭ್ಯುದಯ ಮಾಡಬೇಕಿತ್ತು. ಆದರೆ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಒಟ್ಟಿನಲ್ಲಿ ಈ ಭಾಗದ ಜನರಿಗೆ ವರವಾಗಬೇಕಿದ್ದ ಶಾಖೋತ್ಪನ್ನ ಕೇಂದ್ರ ಮಾರಕವಾಗಿ ಪರಿಣಮಿಸಿದೆ.
ಸೆ.14ರಂದು ಆರ್‌ಟಿಪಿಎಸ್‌ನ ಐದನೇ ಘಟಕದ ಸೇಫ್ಟಿ ಡಿವಿಜನ್ ನಲ್ಲಿ ತಾಂತ್ರಿಕ ಸಮಸ್ಯೆಯಾಗಿ ಅನಿಲ ಸೋರಿಕೆಯಾಗಿತ್ತು. ಒಂದು ದಿನದ ಮಟ್ಟಿಗೆ ಶುದ್ಧೀಕರಣ ಘಟಕಕ್ಕೆ ಸಂಪರ್ಕ ಕಲ್ಪಿಸಿದ ಕಾಲುವೆ ಮೂಲಕ ಅನಿಲ ಹರಿದಿದೆ. ಕೂಡಲೇ ದುರಸ್ತಿ ಕೈಗೊಂಡಿದ್ದು, ಯಾವುದೇ ನೀರು ನದಿಗೆ ಹರಿಯದಂತೆ ತಡೆಗಟ್ಟಿದ್ದೇವೆ. ಮಲಿನ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡಲಾಗುತ್ತಿದೆ.
ವೇಣುಗೋಪಾಲ್, ಕಾರ್ಯ ನಿರ್ವಾಹಕ ನಿರ್ದೇಶಕ, ಆರ್‌ಟಿಪಿಎಸ್
ಆರ್‌ಟಿಪಿಎಸ್‌ನಿಂದ ವಿಷಯುಕ್ತ ಅನಿಲ ನದಿಗೆ ಹರಿಸಿದ ಬಗ್ಗೆ ಗಮನಕ್ಕೆ ಬಂದಿದ್ದು, ಈ ಬಗ್ಗೆ ಸಮಗ್ರ ವರದಿ ಕೇಳಲಾಗಿದೆ. ಕೆಲ ತಾಂತ್ರಿಕ ದೋಷದಿಂದ ಹೀಗಾಗಿದ್ದು ಸರಿಪಡಿಸಲಾಗಿದೆ. ಪರಿಸರಕ್ಕೆ ಹಾನಿ ಮಾಡದಂತೆ ಎಚ್ಚೆತ್ತುಕೊಳ್ಳಲು ಸೂಚಿಸಲಾಗಿದೆ.
ಜಿ.ಕುಮಾರ ನಾಯಕ್, ವ್ಯವಸ್ಥಾಪಕ ನಿರ್ದೇಶಕ, ಕೆಪಿಸಿ