Advertisement

ಕಾಗದ ಹಾಳೆಯ ಆರ್‌ಸಿಗೆ ಮರಳಿದ ಆರ್‌ಟಿಒ!

01:16 AM Jan 29, 2022 | Team Udayavani |

ಉಡುಪಿ/ಬೆಳ್ತಂಗಡಿ: ಸರಕಾರ ಮತ್ತು ಗುತ್ತಿಗೆ ಕಂಪೆನಿಯೊಂದರ ನಡುವಣ ಸಮರದಿಂದಾಗಿ ರಾಜ್ಯದಲ್ಲಿ ಹೊಸ ವಾಹನ ಕೊಳ್ಳುವವರು ಸ್ಮಾರ್ಟ್‌ ಕಾರ್ಡ್‌ ಆರ್‌ಸಿ(ವಾಹನ ನೋಂದಣಿ)ಯ ಬದಲಿಗೆ ಹಿಂದಿನಂತೆ ಕಾಗದದಲ್ಲಿ ಪಡೆಯುವ ಸ್ಥಿತಿ ಬಂದಿದೆ.

Advertisement

ಆರ್‌ಟಿಒ ಕಚೇರಿಯ ಸ್ಮಾರ್ಟ್‌ಕಾರ್ಡ್‌ಗಳ ಮುದ್ರಣವನ್ನು ರೋಸ್‌ ಮಾರ್ಟ್‌ ಕಂಪೆನಿಗೆ ಗುತ್ತಿಗೆ ನೀಡಲಾಗಿತ್ತು. ಇದರ ದುರ್ಲಾಭ ಪಡೆದ ಕಂಪೆನಿಯ ಮಾಜಿ ಮತ್ತು ಹಾಲಿ ಸಿಬಂದಿ ವೋಟರ್‌ ಐಡಿ, ಪಾನ್‌ಕಾರ್ಡ್‌, ಆರ್‌ಸಿ ಪುಸ್ತಕ ಮತ್ತಿತರ ಪ್ರಮುಖ ದಾಖಲೆಗಳನ್ನು ನಕಲಿಯಾಗಿ ಮುದ್ರಿಸಿ ಅವ್ಯವಹಾರ ನಡೆಸಿದ್ದರು.

ಸದ್ಯ ಈ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿದೆ. ಈ ಕಂಪೆನಿಯ ಗುತ್ತಿಗೆ ಅವಧಿ ಇನ್ನೂ ಒಂದು ವರ್ಷ ಇದೆ. ಒಪ್ಪಂದದ ಪ್ರಕಾರ ಸದ್ಯ ಬೇರೆಯವರಿಗೆ ಗುತ್ತಿಗೆ ನೀಡುವಂತಿಲ್ಲ. ಹೀಗಾಗಿ ಈಗ ಸರಕಾರವೇ ಪೇಪರ್‌ ಹಾಳೆಯ ಆರ್‌ಸಿ ನೀಡುತ್ತಿದೆ. ಈ ಬಗ್ಗೆ ಕಂಪೆನಿಯನ್ನು ಸಂಪರ್ಕಿಸಿದರೆ ಪ್ರಕರಣ ಇತ್ಯರ್ಥವಾದ ಬಳಿಕ ಕಾರ್ಡ್‌ ಪೂರೈಕೆ ಮಾಡಲಾಗುವುದು ಎಂದಿದ್ದಾರೆ.

ವಾಹನ ಮಾಲಕರ ಅಸಮಾಧಾನ
ಡಿಜಿಟಲ್‌ ಇಂಡಿಯಾ ಕಲ್ಪನೆಯಂತೆ ಎಲ್ಲವೂ ಪೇಪರ್‌ಲೆಸ್‌ ಮತ್ತು ಸ್ಮಾರ್ಟ್‌ ಆಗಿರುವ ಈ ಕಾಲ ಘಟ್ಟದಲ್ಲಿ ಲಕ್ಷಾಂತರ ರೂ. ವ್ಯಯಿಸಿ ವಾಹನ ಕೊಳ್ಳುವವರು ಹಳೆಯ ದಿನಗಳಂತೆ ಕಾಗದ ಹಾಳೆಯ ಆರ್‌ಸಿ ಸಿಗುತ್ತಿರುವುದರಿಂದ ಅಸಮಾಧಾನಗೊಂಡಿದ್ದಾರೆ. ಉಭಯ ಜಿಲ್ಲೆಯಲ್ಲಿ ಪ್ರತಿದಿನ ಸುಮಾರು 300 ಆರ್‌ಸಿ ಪ್ರತಿ ವಿತರಣೆಯಾಗುತ್ತಿದೆ.

ಎನ್‌ಐಸಿಯಿಂದ ಆರ್‌ಸಿ ಪೇಪರ್‌
ಸದ್ಯ ಸರಕಾರಿ ಸ್ವಾಮ್ಯದ ಎನ್‌ಐಸಿ (ನ್ಯಾಶನಲ್‌ ಇನ್‌ಫಾರ್ಮೆಟಿಕ್‌ ಸೆಂಟರ್‌) ಸಂಸ್ಥೆಯು ಆರ್‌ಸಿ ಮುದ್ರಣಕ್ಕೆ ಅಗತ್ಯವಾದ ಪೇಪರ್‌ ಪೂರೈಕೆ ಮಾಡುತ್ತಿದೆ. ಈ ಕಾರ್ಡ್‌ನಲ್ಲಿಯೂ ಬಾರ್‌ಕೋಡ್‌ ಇದ್ದು, ಎಲ್ಲ ವಿವರಗಳನ್ನು ನಮೂದಿಸಲಾಗುತ್ತದೆ. ಇದನ್ನು ನಕಲು ಮಾಡಲು ಸಾಧ್ಯವಿಲ್ಲ.

Advertisement

ಕೆಲವು ತಿಂಗಳುಗಳಿಂದ ಸ್ಮಾರ್ಟ್‌ ಕಾರ್ಡ್‌ ಪೂರೈಕೆ ಸ್ಥಗಿತಗೊಂಡಿದೆ. ಖಾಸಗಿ ಕಂಪೆನಿ ಕಾರ್ಡ್‌ ಪೂರೈಕೆ ಸ್ಥಗಿತಗೊಳಿಸಿರುವುದರಿಂದ ಪೇಪರ್‌ ಮೂಲಕವೇ ಆರ್‌ಸಿ ಪಡೆಯುವಂತಾಗಿದೆ ಎಂದು ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ. ಗಂಗಾಧರ್‌ ತಿಳಿಸಿದ್ದಾರೆ.

ಲೈಸನ್ಸ್‌ ಕಾರ್ಡ್‌ ಸ್ಥಗಿತ ಭೀತಿ!
ರೋಸ್‌ ಮಾರ್ಟ್‌ ಕಂಪೆನಿಯವರೇ ಸ್ಮಾರ್ಟ್‌ ಲೈಸನ್ಸ್‌ ಕಾರ್ಡ್‌ಗಳನ್ನೂ ಪೂರೈಕೆ ಮಾಡುತ್ತಿದ್ದಾರೆ. ಈಗಾಗಲೇ ಉತ್ಪಾದನೆಯಾಗಿರುವ ಕಾರ್ಡ್‌ಗಳು ಪೂರೈಕೆಯಾಗುತ್ತಿವೆ. ಈ ನಡುವೆ ಹೈಕೋರ್ಟ್‌ ತೀರ್ಪು ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಪ್ರಕರಣ ಮತ್ತಷ್ಟು ಮುಂದುವರಿದರೆ ಲೈಸನ್ಸ್‌ ಕೂಡ ಕಾರ್ಡ್‌ಲೆಸ್‌ ಆಗಿ ಕಾಗದ ಹಾಳೆಯ ಸ್ವರೂಪಕ್ಕೆ ಮರಳುವ ಕಳವಳ ಇದೆ.

Advertisement

Udayavani is now on Telegram. Click here to join our channel and stay updated with the latest news.

Next