Advertisement

ಆರ್‌ಟಿಐ ಸೇವೆ ಆನ್‌ಲೈನ್‌ನಲ್ಲಿ ಲಭ್ಯ

11:01 AM Dec 26, 2019 | Team Udayavani |

ಬೆಂಗಳೂರು: ನಾಗರಿಕರಿಗೆ ನಿಗದಿತ ಅವಧಿಯಲ್ಲಿ ಸೇವೆ ದೊರೆಯುವಂತೆ ಮಾಡಲು ಸಕಾಲ ಸೇವೆಗಳನ್ನು ಆನ್‌ಲೈನ್‌ಗೊಳಿಸಿದ ಮಾದರಿಯಲ್ಲೇ ಮಾಹಿತಿ ಹಕ್ಕು ಅಧಿನಿಯಮದಡಿ (ಆರ್‌ಟಿಐ) ಬರುವ ಸೇವೆಗಳನ್ನು ಆನ್‌ಲೈನ್‌ ವ್ಯವಸ್ಥೆಗೆ ತರಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ, ಕಾರ್ಮಿಕ ಮತ್ತು ಸಕಾಲ ಸಚಿವ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದರು.

Advertisement

ಬಿಬಿಎಂಪಿ ವ್ಯಾಪ್ತಿಯ ಅಧಿಕಾರಿ ಮತ್ತು ನೌಕರರಿಗೆ ಸಕಾಲ ಸೇವೆಗಳ ಕುರಿತ ಮಂಗಳವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಅನಗತ್ಯ ವಿಳಂಬ ಮಾಡುವುದನ್ನು ತಪ್ಪಿಸುವ ಸಲುವಾಗಿ ಸಕಾಲ ಸೇವೆಯನ್ನು ಆನ್‌ಲೈನ್‌ ಮಾಡಿರುವಂತೆಯೇ ಆರ್‌ಟಿಐ ಸೇವೆಯನ್ನು ಆನ್‌ಲೈನ್‌ ಮಾಡುವ ಹೊಸ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದರು.

ಬಿಬಿಎಂಪಿಯಲ್ಲಿ ಸಕಾಲ ವ್ಯಾಪ್ತಿಗೆ ಒಳಗಾದ ಸೇವೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡದಿರುವ ಪ್ರಕರಣಗಳು ಹೆಚ್ಚುತ್ತಿರುವುದು ಕಂಡು ಬರುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಕಾಲ ಸೇವೆಗೆ ಬೆಂಗಳೂರು ನಗರದ ಒಟ್ಟು ಜನಸಂಖ್ಯೆಯ ಶೇ.0.01ರಷ್ಟು ಜನರಿಂದಲೂ ಅರ್ಜಿಗಳು ಬರುವುದಿಲ್ಲ. ಬಂದಿರುವ ಅರ್ಜಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೇ ಹೋದರೆ ಇನ್ನು 1.40 ಕೋಟಿ ಜನರಿಗೆ ಮಾಡುವ ಎಲ್ಲ ಸೇವೆಗಳನ್ನು ಹೇಗೆ ನಿರ್ವಹಿಸಬಹುದಾಗಿದೆ ಎಂಬುದನ್ನು ಬಿಬಿಎಂಪಿ ಅಧಿಕಾರಿಗಳು ಅರ್ಥೈಸಿಕೊಳ್ಳಬೇಕಾಗಿದೆ ಎಂದು ಸಚಿವರು ನಿರ್ದೇಶಿಸಿದರು.

ಸಕಾಲ ಸೇವೆ ಕುರಿತು ದೇಶದ ಎಲ್ಲ ರಾಜ್ಯಗಳು ಕರ್ನಾಟಕದತ್ತ ನೋಡುತ್ತಿವೆ. ನಮ್ಮ ಸಕಾಲ ಮಿಷನ್‌ ಯೋಜನೆ ಸೇವಾ ಪ್ರಕ್ರಿಯೆ ಕುರಿತು ಇಡೀ ದೇಶದಲ್ಲಿ ಉತ್ತಮ ಹೆಸರಿದೆ. ಆದರೆ ಅದನ್ನು ನಾವು ಇನ್ನೂ ಸಮರ್ಪಕವಾಗಿ ಕೆಲಸ ಮಾಡುವುದರಿಂದ ಜನರಿಗೆ ಹೆಚ್ಚಿನ ಸೇವೆ ಒದಗಲಿದೆ ಎಂದರು.

ಬಿಬಿಎಂಪಿಗೆ ಪ್ರತ್ಯೇಕ ಪ್ರಶಸ್ತಿ: ಸಕಾಲದಡಿ ಅರ್ಜಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಿದ ಜಿಲ್ಲೆ ಮತ್ತು ತಾಲೂಕುಗಳಿಗೆ ರಾಜ್ಯಮಟ್ಟದಲ್ಲಿ ಪ್ರತಿ ತಿಂಗಳು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಹಾಗೆಯೇ ಇನ್ನು ಮುಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಪ್ರಶಸ್ತಿ ನೀಡಲಾಗುವುದು. ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವ ಅಧಿಕಾರಿ ನಿಗದಿತ ಸಮಯದಲ್ಲಿ ಅರ್ಜಿ ವಿಲೇವಾರಿಯಲ್ಲಿ ಉತ್ತಮ ಸೇವೆ ತೋರುತ್ತಾರೋ ಅವರಿಗೆ ಈ ಪ್ರಶಸ್ತಿ ದೊರೆಯಲಿದೆ ಎಂದು ಸಚಿವರು ತಿಳಿಸಿದರು. ಬಿಬಿಎಂಪಿ ಅಪರ ಆಯುಕ್ತ ಅನುಕುಮಾರ್‌, ಸಕಾಲ ಅಪರ ಮಿಷನ್‌ ನಿರ್ದೇಶಕ ಸುನಿಲ್‌ ಪವಾರ್‌, ಸಕಾಲ ಅಪರ ಮಿಷನ್‌ ನಿರ್ದೇಶಕ ಬಿ.ಎನ್‌. ವರಪ್ರಸಾದ ರೆಡ್ಡಿ ಉಪಸ್ಥಿತರಿದ್ದರು.

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಕಾಲ ಸೇವೆಗಳು ಶೇ.100ರಷ್ಟು ಪರಿಣಾಮ ಕಾರಿಯಾಗಿ ದೊರೆಯ ಬೇಕು. ಸಕಾಲ ವ್ಯಾಪ್ತಿಯ ಇನ್ನೊಂದು ಸೇವೆಯಾದ ಜನಸೇವಕ ಯೋಜನೆ ಪ್ರಸ್ತುತ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದು, ಬಿಬಿಎಂಪಿ ವ್ಯಾಪ್ತಿಯ ಇನ್ನೂ 3 ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಿಗೊಳಿ ಸಲಾಗುವುದು.
-ಎಸ್‌.ಸುರೇಶ್‌ ಕುಮಾರ್‌, ಸಕಾಲ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next