Advertisement

ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾದ ಆರ್‌ಟಿಇ ಸೀಟು   

03:29 PM Jun 17, 2022 | Team Udayavani |

ಹಾವೇರಿ: ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಆರ್‌ಟಿಇ ಅಡಿ ಭರ್ತಿ ಆಗುತ್ತಿದ್ದ ಸೀಟುಗಳನ್ನು ಪಡೆಯಲು ಈ ಹಿಂದೆ ವಿದ್ಯಾರ್ಥಿ ಪೋಷಕರ ನಡುವೆ ನಡೆಯುತ್ತಿದ್ದ ನೂಕುನುಗ್ಗಲು ಈಗ ಇಲ್ಲವಾಗಿದ್ದು, ಜಿಲ್ಲೆಯಲ್ಲಿ ಆರ್‌ಟಿಇ ಸೀಟುಗಳು ಮಾತ್ರ ಈಗ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.

Advertisement

ಹೌದು, ಕಳೆದ ಮೇ ತಿಂಗಳ 16ರಿಂದಲೇ 2022-23ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಂಡಿದ್ದು, ಮಕ್ಕಳ ದಾಖಲಾತಿ ಸಹ ಚುರುಕುಗೊಂಡಿದೆ. ಆದರೆ, ಸರ್ಕಾರ ಆರ್‌ಟಿಇ ಕಾರ್ಯಕ್ರಮ ಅನುಷ್ಠಾನದಲ್ಲಿ ತಂದ ಬದಲಾವಣೆ ಹಾಗೂ ಹೊಸ ಬಿಗಿ ನಿಯಮಗಳ ಹಿನ್ನೆಲೆಯಲ್ಲಿ ಆರ್‌ಟಿಇ ಅಡಿ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಮಂಜೂರಾಗಿರುವ 514 ಸೀಟುಗಳ ಪೈಕಿ ಇದುವರೆಗೆ ಭರ್ತಿ ಆಗಿದ್ದು ಬರೀ 11 ಮಾತ್ರ.

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಜಿಲ್ಲೆಗೆ 2022-23ನೇ ಸಾಲಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ 514 ಸೀಟುಗಳನ್ನು ಆರ್‌ಟಿಇ ಅಡಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ದಾಖಲಾತಿಗೆ ಮಂಜೂರು ಮಾಡಿದೆ. ಈಗಾಗಲೇ ಮೊದಲ ಹಂತದಲ್ಲಿ ನಡೆದ ಪ್ರಕ್ರಿಯೆಯಲ್ಲಿ 303 ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದರೂ ಇದುವರೆಗೆ ಶಾಲೆಗೆ ದಾಖಲಾಗಿರುವ ಮಕ್ಕಳ ಸಂಖ್ಯೆ ಬರೀ 11 ಮಾತ್ರ. ಆರ್‌ಟಿಇ ಸೀಟು ಸಿಕ್ಕರೂ ಅನೇಕ ವಿದ್ಯಾರ್ಥಿಗಳ ಪೋಷಕರು ಖಾಸಗಿ ಶಾಲೆಗೆ ಇನ್ನೂ ಮಕ್ಕಳನ್ನು ದಾಖಲಿಸಲು ಆಸಕ್ತಿ ತೋರದಿರುವುದು ಅಂಕಿ ಅಂಶಗಳಿಂದ ದೃಢಪಟ್ಟಿದೆ.

ಕಠಿಣ ನಿಯಮಗಳೇ ತೊಡಕು: ಖಾಸಗಿ ಶಾಲೆಗಳವರು ಆರ್‌ಟಿಇ ಯೋಜನೆಯನ್ನು ದಂಧೆಯಾಗಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸರ್ಕಾರ 2019ರಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಶಾಲೆಯಿರುವ ಅರ್ಧ ಕಿಲೋ ಮೀಟರ್‌ ವ್ಯಾಪ್ತಿ ಅಥವಾ ಒಂದು ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳಿದ್ದರೆ ಅಂತಹ ಖಾಸಗಿ ಶಾಲೆಗೆ ಆರ್‌ಟಿಇ ಕೋಟಾ ರದ್ದುಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಅರ್ಧ ಭಾಗದಷ್ಟು ಖಾಸಗಿ ಶಾಲೆಗಳಿಗೆ ಈ ಕೋಟಾ ಲಭಿಸಲಿಲ್ಲ.

ಈ ಸಮಸ್ಯೆಯ ಜತೆಗೆ ಆರ್‌ಟಿಇ ಪ್ರವೇಶಕ್ಕೆ ಆಧಾರ್‌, ಬಿಪಿಎಲ್‌ ಕಾರ್ಡ್‌ ಕಡ್ಡಾಯಗೊಳಿಸಿ ಲಿಂಕ್‌ ಕೊಡಿಸಿದ ಪರಿಣಾಮ ಅನೇಕ ಪೋಷಕರಿಗೆ ಆರ್‌ ಟಿಇ ಯೋಜನೆ ಲಭ್ಯವಾಗಲಿಲ್ಲ. ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಕೋಟಾದಲ್ಲಿ ಪ್ರವೇಶ ಪಡೆದ ಮಕ್ಕಳನ್ನು ಇನ್ನುಳಿದ ಮಕ್ಕಳು ನೋಡುವ ದೃಷ್ಟಿಯೇ ಬೇರೆಯಾದ ಕಾರಣ ಬೇಸತ್ತ ಪೋಷಕರು ಆರ್‌ ಟಿಇಯಿಂದ ದೂರ ಸರಿಯುತ್ತಿದ್ದಾರೆ ಎನ್ನಲಾಗುತ್ತಿದೆ.

Advertisement

ಆರ್‌ಟಿಇ ಸೀಟಿಗೆ ಬೇಡಿಕೆ ಕುಸಿತ: ಎಲ್ಲರಿಗೂ ಶಿಕ್ಷಣ ಎಂಬ ಧ್ಯೇಯದಿಂದ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೂ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ 2019ರಲ್ಲಿ ಕೇಂದ್ರ ಸರ್ಕಾರ ಆರ್‌ಟಿಇ ಜಾರಿಗೊಳಿಸಿತ್ತು. ಈ ಕಾಯ್ದೆಯಡಿ ಯಾವುದೇ ಮಗು ಸರ್ಕಾರಿ ಕೋಟಾದಡಿ ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆಯಲು ಅನುಕೂಲ ಕಲ್ಪಿಸಿಕೊಡಲಾಗಿತ್ತು. ಆದರೆ, 2019ರಲ್ಲಿ ತಂದ ತಿದ್ದುಪಡಿ ಬಳಿಕ ಬೇಡಿಕೆ ಕುಸಿದಿದೆ. ಇದಕ್ಕೆ ಪ್ರವೇಶಾತಿಯಲ್ಲಿ ಇರುವ ಹಲವು ತೊಡಕುಗಳೇ ಕಾರಣ ಎಂದು ಪೋಷಕರು ದೂರುತ್ತಾರೆ.

ಮಕ್ಕಳ ನೋಡುವ ದೃಷ್ಟಿಯೇ ಬೇರೆ: ಆರ್‌ಟಿಇ ಅಡಿ ಸೀಟು ಸಿಕ್ಕರೂ ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್‌ಟಿಇ ಮಕ್ಕಳನ್ನು ಶಾಲೆಯಲ್ಲಿ ನೋಡುವ ದೃಷ್ಟಿಕೋನ ಬೇರೆಯೇ ಆಗಿದ್ದು, ಜೊತೆಗೆ ಸರ್ಕಾರ ಆರ್‌ಟಿಇ ಪ್ರವೇಶಕ್ಕೆ ರೂಪಿಸಿರುವ ಹಲವು ಬಿಗಿ ಕ್ರಮಗಳಿಂದ ಆಸಕ್ತರಿಗೆ ಸೀಟುಗಳು ಲಭ್ಯವಾಗುತ್ತಿಲ್ಲ ಎಂಬ ಮಾತುಗಳು ವ್ಯಕ್ತವಾಗುತ್ತಿವೆ. ಅಲ್ಲದೇ, ಶಾಲಾ ಶುಲ್ಕ ಬಿಟ್ಟು ಆರ್‌ಟಿಇ ಮಕ್ಕಳಿಂದಲೂ ಖಾಸಗಿ ಶಿಕ್ಷಣ ಸಂಸ್ಥೆಗಳು ಸಮವಸ್ತ್ರ, ಪಠ್ಯ, ನೋಟ್‌ಬುಕ್‌ ಹೆಸರಲ್ಲಿ ದುಬಾರಿ ಶುಲ್ಕ ವಿ ಧಿಸುತ್ತಿರುವುದರಿಂದಲೇ ಈಗ ಆರ್‌ಟಿಇ ಸೀಟುಗಳ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಆಸಕ್ತಿ ಕಳೆದುಕೊಂಡಿದ್ದಾರೆ.

2022-23ನೇ ಸಾಲಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲೆಗೆ 514 ಸೀಟುಗಳು ಆರ್‌ಟಿಇ ಅಡಿ ಮಂಜೂರಾಗಿವೆ. ಆದರೆ, ಇದುವರೆಗೆ ಜಿಲ್ಲೆಯಲ್ಲಿ 11 ವಿದ್ಯಾರ್ಥಿಗಳು ಮಾತ್ರ ಆರ್‌ಟಿಇ ಕೋಟಾದಡಿ ಖಾಸಗಿ ಶಾಲೆಗಳಿಗೆ ದಾಖಲಾಗಿದ್ದಾರೆ. ಈ ಹಿಂದೆ ಖಾಸಗಿ ಶಾಲೆಯವರು ತಮಗೆ ಇಷ್ಟ ಬಂದಂತೆ ಮಕ್ಕಳನ್ನು ಆರ್‌ಟಿಇ ಅಡಿ ದಾಖಲಿಸಿ ಕೊಳ್ಳುತ್ತಿದ್ದರು. ಕಠಿಣ ನಿಯಮಗಳು ಜಾರಿಯಾದ ನಂತರ ಅವು ಪೋಷಕರಿಗೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳವರಿಗೂ ಕಷ್ಟವಾಗಿ ಪರಿಣಮಿಸಿವೆ. –ಬಿ.ಎಸ್‌.ಜಗದೀಶ್ವರ, ಡಿಡಿಪಿಐ, ಹಾವೇರಿ

-ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next