ಹುಳಿಯಾರು: ಹೊಸ ಶೈಕ್ಷಣಿಕ ವರ್ಷ ಆರಂಭವಾದರೂ ಕಳೆದ ಸಾಲಿನ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅನುದಾನ ಇನ್ನೂ ಖಾಸಗಿ ಶಾಲೆಗಳಿಗೆ ಬಾರದೆ ಆಡಳಿತ ಮಂಡಳಿ ಸಂಕಷ್ಟದಲ್ಲಿ ಶಾಲೆ ನಡೆಸುವಂತ್ತಾಗಿದೆ.
ಹೌದು, ಬಡ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಸರ್ಕಾರ ಜಾರಿಗೆ ತಂದ ಈ ಕಾಯ್ದೆಯಂತೆ ಪ್ರವೇಶ ಪಡೆದ ಮಕ್ಕಳ ವೆಚ್ಚವನ್ನು ಆಯಾ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಸರ್ಕಾರ ನೀಡಬೇಕಿದೆ. ಆದರೆ, ಶೈಕ್ಷಣಿಕ ವರ್ಷ ಆರಂಭವಾದರೂ ಇದುವರೆಗೆ ಸರ್ಕಾರ ಶಾಲೆಗಳಿಗೆ 2ನೇ ಹಂತದ ಅನುದಾನ ಬಿಡುಗಡೆ ಮಾಡದೆ ವಿಳಂಬ ಮಾಡಿದೆ.
2ನೇ ಕಂತಿನ ಹಣ ನೀಡಿಲ್ಲ: ಆರ್‌ಟಿಇ ಅಡಿ ಪ್ರವೇಶ ಪಡೆದ ರಾಜ್ಯದ ಎಲ್ಲ ಮಕ್ಕಳಿಗೂ ಪ್ರತಿ ವರ್ಷ ಸರ್ಕಾರ ಒಂದು ಮಗುವಿಗೆ ಆಯಾ ಶಾಲೆಗೆ ಶುಲ್ಕಕ್ಕೆ ಅನುಗುಣವಾಗಿ 8ರಿಂದ 16 ಸಾವಿರ ರೂ. ಬಿಡುಗಡೆ ಮಾಡಬೇಕು. ಆದರೆ, 2018- 19ನೇ ಸಾಲಿನಲ್ಲಿ ಮೊದಲ ಕಂತಿನ ಹಣವನ್ನು ಮಾತ್ರ ಬಿಡುಗಡೆ ಮಾಡಿದೆ. ಶೈಕ್ಷಣಿಕ ವರ್ಷ ಮುಗಿದು ಹೊಸ ವರ್ಷ ಆರಂಭವಾದರೂ ಎರಡನೇ ಕಂತಿನ ಹಣ ಮಾತ್ರ ನೀಡಿಲ್ಲ.
ಹಣ ಬಿಡುಗಡೆಗೆ ವಿಳಂಬ: ಆರ್‌ಟಿಇ ಹಣ ಬಿಡುಗಡೆಗೆ ವಿಳಂಬವಾಗಲು ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಕಡ್ಡಾಯ ಹಾಜರಾತಿ, ಆಡಿಟ್ ರಿಪೋರ್ಟ್ ಸೇರಿದಂತೆ ಇತರೆ ಮಾಹಿತಿಯನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡದೆ ಇರುವುದು ಕಾರಣವೆಂದು ಶಿಕ್ಷಣ ಇಲಾಖೆ ಹೇಳುತ್ತಿದೆ. ಆದರೆ, ಇದೆಲ್ಲವನ್ನೂ ಅಪ್‌ಲೋಡ್ ಮಾಡಿರುವ ಶಾಲೆಗಾದರೂ ಹಣ ಕೊಡಬಹುದಲ್ಲ ಎಂದು ಖಾಸಗಿ ಶಾಲೆಯವರು ಪ್ರತಿಪಾದಿಸುತ್ತಿದ್ದಾರೆ.
ಹಣ ಹೊಂದಿಸಲು ಪರದಾಟ: ಖಾಸಗಿ ಶಾಲೆಯ ದಾಖಲಾತಿಯ ಶೇ.25ರಷ್ಟು ಆರ್‌ಟಿಇ ಅಡಿ ಪ್ರವೇಶ ಕೊಡಬೇಕಿದೆ. ಅದರಂತೆ ಪ್ರವೇಶ ಕೊಟ್ಟ ಶಾಲೆಗಳಿಗೆ 2ನೇ ಕಂತಿನಲ್ಲಿ ಒಂದು ಲಕ್ಷದಿಂದ ಹತ್ತದಿನೈದು ಲಕ್ಷ ರೂ. ಬಾಕಿ ಬರಬೇಕಿದೆ. ಪರಿಣಾಮ ಶಿಕ್ಷಕರ ಸಂಬಳ, ವ್ಯಾನ್ ಮೈಟೆನಿಂಗ್ಸ್, ಕರೆಂಟ್, ಇಂಟರ್‌ನೆಟ್ ಬಿಲ್ ಹೀಗೆ ಅಗತ್ಯ ಶಾಲಾ ವೆಚ್ಚಕ್ಕೆ ಹಣ ಹೊಂದಿಸಲು ಆಡಳಿತ ಮಂಡಳಿ ಪರದಾಡುತ್ತಿದ್ದಾರೆ.
ಇನ್ನಾದರೂ ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ ನಿರ್ವಹಣೆಯ ಕಷ್ಟ ಅರಿತು ತಕ್ಷಣ ಆರ್‌ಟಿಇಯ ಎರಡನೇ ಕಂತಿನ ಹಣ ಬಿಡುಗಡೆ ಮಾಡಬೇಕಿದೆ. ಈ ಮೂಲಕ ಶಾಲೆಯಲ್ಲಿ ಆರ್‌ಟಿಇ ಮಕ್ಕಳ ಶೋಷಣೆ ತಪ್ಪಿಸಬೇಕಿದೆ. ಜೊತೆಗೆ 2019-20ನೇ ಸಾಲಿನ ಆರ್‌ಟಿಇ ಮೊದಲ ಕಂತಿನ ಹಣ ಬಿಡುಗಡೆಗೆ ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ.
● ಎಚ್.ಬಿ.ಕಿರಣ್ ಕುಮಾರ್