ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಖಾಸಗಿ ಶಾಲೆಯಲ್ಲಿ ಮೀಸಲಿಟ್ಟಿರುವ ಸೀಟು ರದ್ದಾಗಲಿದೆ ಎಂದು ವಿದ್ಯಾರ್ಥಿಗಳು, ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರದಿಂದ ಈ ಕುರಿತು ಯಾವುದೇ ಆದೇಶ ಬಂದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆರ್‌ಟಿಇ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ತಾರತಮ್ಯ ಅಥವಾ ಆಡಳಿತ ಮಂಡಳಿಯಿಂದ ದೌರ್ಜನ್ಯವಾದರೆ ನೇರವಾಗಿ ದೂರನ್ನು ನೀಡಬಹುದು ಎಂದು ಇಲಾಖೆಯ ನಿರ್ದೇಶಕ ಕೆ.ಬಸವರಾಜು ತಿಳಿಸಿದ್ದಾರೆ.
ಆರ್‌ಟಿಇ ಅಡಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ರಾಜ್ಯದ ಖಾಸಗಿ ಶಾಲೆಗಳಲ್ಲಿ ದಾಖಲಾಗಿದ್ದಾರೆ. ಆರ್‌ಟಿಇ ಅಡಿ ದಾಖಲಾಗಿರುವ ಮಕ್ಕಳಿಗೆ ಸರ್ಕಾರದಿಂದ ಕೋಟ್ಯಂತರ ರೂ. ಶುಲ್ಕ ಮರುಪಾವತಿ ಮಾಡುವ ಬದಲು, ಶಾಲಾಡಳಿತ ಮಂಡಳಿ ಸಾಮಾಜಿಕ ಬದ್ಧತೆಯ ಆಧಾರದಲ್ಲಿ ಆ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು.
ಆರ್‌ಟಿಇ ಸೀಟುಗಳನ್ನು ರದ್ದುಪಡಿಸಿ, ಆ ಅನುದಾನವನ್ನು ಸರ್ಕಾರಿ ಶಾಲೆಯ ಉನ್ನತೀಕರಣಕ್ಕೆ ಬಳಸಿಕೊಳ್ಳಬೇಕು ಎಂದು ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ ನೀಡಿರುವ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸೇರಿದಂತೆ ಶಿಕ್ಷಣ ತಜ್ಞರು ಇದಕ್ಕೆ ಬೆಂಬಲ ಸೂಚಿಸಿದ್ದರು. ಹೀಗಾಗಿ, ಕಳೆದ ಮೂರ್‍ನಾಲ್ಕು ತಿಂಗಳಿಂದ ಆರ್‌ಟಿಇ ರದ್ದಾಗಲಿದೆ ಎಂಬ ಚರ್ಚೆ ರಾಜ್ಯಾದ್ಯಂತ ಹುಟ್ಟಿಕೊಂಡಿದೆ.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಕೂಡ ಆರ್‌ಟಿಇ ರದ್ದತಿಗೆ ಚಿಂತನೆ ನಡೆಸುತ್ತಿದ್ದೇವೆ ಎಂಬ ಹೇಳಿಕೆಯನ್ನು ಸಾರ್ವಜನಿಕವಾಗಿ ನೀಡಿದ್ದರು. ಹೀಗಾಗಿ ವಿದ್ಯಾರ್ಥಿಗಳು, ಪೋಷಕರಲ್ಲಿ ಆರ್‌ಟಿಇ ಸೀಟು ರದ್ದು ಮಾಡಿದರೆ, ಖಾಸಗಿ ಶಾಲೆಗೆ ಸರ್ಕಾರದ ಶುಲ್ಕ ಮರುಪಾವತಿ ಆಗುವುದಿಲ್ಲ ಎಂಬ ಆತಂಕ ಸೃಷ್ಟಿಯಾಗಿದೆ.
ಏಕಮುಖವಲ್ಲ: ಆರ್‌ಟಿಇ ಸೀಟುಗಳನ್ನು ಅಷ್ಟು ಸುಲಭವಾಗಿ ರದ್ದು ಮಾಡಲು ಸಾಧ್ಯವಿಲ್ಲ ಎಂಬ ಒಂದು ವಾದವೂ ಇದೆ. ಕಾರಣ, ಶಿಕ್ಷಣ ಹಕ್ಕು ಕಾಯ್ದೆಯಡಿ ಕೇಂದ್ರ ಸರ್ಕಾರದ ಅನುದಾನ ಬರುತ್ತದೆ. ಆರ್‌ಟಿಇ ಮಕ್ಕಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಒಟ್ಟಾಗಿ ಅನುದಾನ ನೀಡುವುದರಿಂದ ರಾಜ್ಯ ಸರ್ಕಾರ ಏಕಮುಖ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.
ಶುಲ್ಕ ಮರುಪಾವತಿಯಾಗಿಲ್ಲ: ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ಲಕ್ಷಾಂತರ ಆರ್‌ಟಿಇ ಮಕ್ಕಳಿಗೆ ಪ್ರತಿ ವರ್ಷ ಸರ್ಕಾರದಿಂದ ಶುಲ್ಕ ಮರುಪಾವತಿ ಮಾಡಬೇಕು. ಶೈಕ್ಷಣಿಕ ವರ್ಷದ ಆರಂಭದಲ್ಲೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆರ್‌ಇಟಿ ಶುಲ್ಕ ನೀಡಬೇಕೆಂಬ ನಿಯಮ ಇದೆ. ಆದರೆ, ಪ್ರಸಕ್ತ ಸಾಲಿನ ಮತ್ತು ಕಳೆದ ಸಾಲಿನ ಶುಲ್ಕ ಮರುಪಾವತಿ ಇನ್ನೂ ಆಗಿಲ್ಲ. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಚಟುವಟಿಕೆ ನಡೆಸುವುದೇ ಕಷ್ಟವಾಗಿದೆ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಮಾಹಿತಿ ನೀಡಿದರು.