Advertisement

ಆರ್‌ಟಿಇ: ಅರ್ಜಿ ಸಲ್ಲಿಕೆಗೆ ಮುಗಿಬಿದ್ದ ಪೋಷಕರು

03:50 AM Mar 02, 2017 | Team Udayavani |

ಬೆಂಗಳೂರು: ಆರ್‌ಟಿಇ ಸೀಟುಗಳ ಪ್ರವೇಶಕ್ಕೆ ಬುಧವಾರ (ಮಾ.1)ರಿಂದ ಆನ್‌ಲೈನ್‌ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ದಿನವೇ 15 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Advertisement

ಆದರೆ, ಪೋಷಕರು ಮತ್ತು ಆರ್‌ಟಿಇ ಕಾರ್ಯಕರ್ತರು ಮಾತ್ರ ಬುಧವಾರ ಸಂಜೆ ವರೆಗೂ ಅರ್ಜಿ ಸಲ್ಲಿಸಲು ಶಿಕ್ಷಣ ಇಲಾಖೆಯ ವೆಬ್‌ಸೈಟ್‌ ನಲ್ಲಿ ಸೂಕ್ತ ಲಿಂಕ್‌ ವ್ಯವಸ್ಥೆ ಕಲ್ಪಿಸಿರಲಿಲ್ಲ. ಹೀಗಾಗಿ ದಿನವಿಡೀ ಅರ್ಜಿ ಸಲ್ಲಿಸಲು ಕಂಪ್ಯೂಟರ್‌ ಕೇಂದ್ರಗಳು, ಬಿಇಒ, ಡಿಡಿಪಿಐ ಕಚೇರಿ, ಕರ್ನಾಟಕ ಒನ್‌ ಕೇಂದ್ರಗಳ ಬಳಿ ಕಾದು ಕುಳಿತಿದ್ದಾಯಿತು ಎಂದು ಆರೋಪಿಸಿದ್ದಾರೆ. ಮಾ.1 ರಿಂದ ಅರ್ಜಿ ಸಲ್ಲಿಸಬಹುದು ಎಂದು ಇಲಾಖೆ ಅಧಿಕಾರಿಗಳು ಮಾಧ್ಯಮಗಳಲ್ಲಿ ನೀಡಿದ ಮಾಹಿತಿ ನೋಡಿ ಬುಧವಾರ ಬೆಳಗ್ಗೆಯಿಂದಲೇ ಪೋಷಕರು ಅರ್ಜಿ ಸಲ್ಲಿಸಲು ಮುಂದಾದರು. ಆದರೆ, ಇಲಾಖೆ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಕೆಗೆ ಸೂಕ್ತ ಲಿಂಕ್‌ ವ್ಯವಸ್ಥೆಯನ್ನೇ ಅಪ್‌ಲೋಡ್‌
ಮಾಡಿರಲಿಲ್ಲ. 

ಪ್ರಕಾಶ್‌ ನಗರ ವಾರ್ಡ್‌ನಲ್ಲಿ ಆಯೋಜಿಸಿದ್ದ ಆರ್‌ಟಿಇ ಆನ್‌ಲೈನ್‌ ಅರ್ಜಿ ಸಲ್ಲಿಕೆ ಕೇಂದ್ರದ ಉದ್ಘಾಟನೆಯನ್ನು ಮೇಯರ್‌ ನೆರವೇರಿಸಿದರು. ಮೇಯರ್‌ ಕೂಡ ಅರ್ಜಿ ಸಲ್ಲಿಸಲಾಗದ ಕಾರಣ  ಪೋಷಕರಿಂದ ಅರ್ಜಿ ಸಲ್ಲಿಕೆಗೆ ಬೇಕಾದ ಆಧಾರ್‌,
ಜಾತಿ, ಆದಾಯ ಪ್ರಮಾಣ ಪತ್ರಗಳ ಮಾಹಿತಿ ಖುದ್ದು ಲಿಖೀತ ರೂಪದಲ್ಲಿ ಸ್ವೀಕರಿಸಿದರು. ಆರ್‌ ಟಿಇ ಕಾರ್ಯಪಡೆ ಸಂಚಾಲಕ ನಾಗಸಿಂಹ ರಾವ್‌ ಅವರ ಪ್ರಶ್ನೆ ಕೂಡ ಇದೇ ಆಗಿದ್ದು, “ಸಂಜೆವರೆಗೂ ಅರ್ಜಿ ಸಲ್ಲಿಕೆಗೆ ವೆಬ್‌ಸೈಟ್‌ನಲ್ಲಿ ಲಿಂಕ್‌ ಇರಲಿಲ್ಲ. ರಾಜ್ಯಾದ್ಯಂತ ಅರ್ಜಿ ಸಲ್ಲಿಕೆ ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಬಂದಿವೆ. 15 ಸಾವಿರ ಅರ್ಜಿಗಳು ಹೇಗೆ ಬಂದವು ಎಂಬುದನ್ನು ಅಧಿಕಾರಿಗಳೇ ಹೇಳಬೇಕು’ ಎಂದು ಹೇಳಿದ್ದಾರೆ.

15 ಸಾವಿರ ಅರ್ಜಿ ಬಂದಿವೆ: ಪೋಷಕರು ಮತ್ತು ಆರ್‌ಟಿಇ ಕಾರ್ಯಕರ್ತರ ದೂರಿನ ಹಿನ್ನೆಲೆ ಇಲಾಖೆ ಆಯುಕ್ತರಾದ ಸೌಜನ್ಯರನ್ನು
ದೂರವಾಣಿ ಮೂಲಕ ಸಂಪರ್ಕಿಸಿದಾಗ “ಬುಧವಾರ ಬೆಳಗ್ಗೆಯಿಂದಲೇ ಅರ್ಜಿ ಸಲ್ಲಿಕೆಗೆ ವೆಬ್‌ಸೈಟ್‌ನಲ್ಲಿ ಅವಕಾಶ ನೀಡಲಾಗಿತ್ತು.
ಮಧ್ಯಾಹ್ನ 3 ಗಂಟೆಗೆ ಕೆಲ ಅಪ್‌ಡೇಟ್‌ಗಾಗಿ ಸಾಫ್ಟ್ವೇರನ್ನು ರಿಫ್ರೆಷ್‌ ಮಾಡಲಾಯಿತು. ಮತ್ತೆ ಸಂಜೆ 6 ಗಂಟೆಯಿಂದ ಅವಕಾಶ
ನೀಡಲಾಗಿದೆ. ಬುಧವಾರ ರಾಜ್ಯಾದ್ಯಂತ ಒಟ್ಟಾರೆ 15 ಸಾವಿರ ಅರ್ಜಿ ಸಲ್ಲಿಕೆಯಾಗಿವೆ ‘ ಎಂದು “ಉದಯವಾಣಿ’ಗೆ ತಿಳಿಸಿದ್ದಾರೆ. ಈ
ಮಧ್ಯೆ ಇಲಾಖೆಯ ಮತ್ತೂಬ್ಬ ಅಧಿಕಾರಿಯನ್ನು ಸಂಪರ್ಕಿಸಿದಾಗ ಸಂಜೆ 4.30ರವೇಳೆಗೆ ವೆಬ್‌ ಸೈಟ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಸಾವಿರಾರು ಮಂದಿ ಅರ್ಜಿ ಸಲ್ಲಿಕೆಗೆ ಪ್ರಯತ್ನ ಮಾಡಿದ್ದಾರೆ. ಆದರೆ, ಎಷ್ಟು ಅರ್ಜಿ ಬಂದಿವೆ ಎಂಬ ಮಾಹಿತಿ ಇಲ್ಲವೆಂದು ಹೇಳಿದರು. 

ವೇಳಾಪಟ್ಟಿಯೇ ಪ್ರಕಟವಾಗಿಲ್ಲ
ವಿಶೇಷವೆಂದರೆ ಮಾ.1ರಿಂದ ಆರ್‌ಟಿಇ ಅರ್ಜಿ ಸಲ್ಲಿಸಬಹುದು ಎಂಬ ಅಧಿಕೃತ ಪ್ರಕಟಣೆಯನ್ನು ಕನಿಷ್ಠ ಮಂಗಳವಾರ ಸಂಜೆಯಾದರೂ ನೀಡಬೇಕಿದ್ದ ಇಲಾಖೆ ಬುಧವಾರ ಸಂಜೆ 7 ಗಂಟೆಗೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ಈ ಹಿಂದಿನ ವರ್ಷಗಳಲ್ಲಿ ಮೊದಲು ನೆರೆಹೊರೆಯ ಶಾಲೆಗಳ ಪಟ್ಟಿ ಪ್ರಕಟಣೆ, ಅವುಗಳಿಗೆ ಪೋಷಕರಿಂದ ಆಕ್ಷೇಪಗಳ ಸ್ವೀಕಾರ,
ಅಂತಿಮ ಪಟ್ಟಿ ಪ್ರಕಟ, ನಂತರ ಅರ್ಜಿ ಸಲ್ಲಿಕೆಗೆ ಇರುವ ಕಾಲಾವಕಾಶ ಸೇರಿದಂತೆ ಆರ್‌ಟಿಇ ಪ್ರವೇಶಕ್ಕೆ ಸಂಬಂಧಿಸಿದ ಪರಿಪೂರ್ಣ ಮಾಹಿತಿಯನ್ನೊಳಗೊಂಡ ಸಾರ್ವಜನಿಕ ಪ್ರಕಟಣೆ ಹಾಗೂ ಅಧಿಸೂಚನೆ ಪ್ರಕಟಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next