ಚೆನ್ನೈ: ಕಾನೂನು ಹೋರಾಟದ ನಂತರ ತಮಿಳುನಾಡಿನ 45 ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು(ಆರ್‌ಎಸ್‌ಎಸ್) ಭಾನುವಾರ ಪಥಸಂಚಲನ ನಡೆಸಿತು.
ಆರ್‌ಎಸ್‌ಎಸ್ ಪಥಸಂಚಲನಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಚೆನ್ನೈ, ವೆಲ್ಲೂರ್, ಹೊಸೂರು, ಸೇಲಂ, ಚೆಂಗಲ್‌ಪಟ್ಟು, ಕಾಂಚೀಪುರಂ, ತಿರುವಣ್ಣಮಲೈ, ಅರಣಿ, ಕೊಯಂಮತ್ತೂರು, ಮೆಟ್ಟುಪಾಳ್ಯಂ, ಪಲ್ಲಾಡಂ, ಕರೂರ್, ತಂಕಾಸಿ, ಕನ್ಯಾಕುಮಾರಿ, ಮಧುರೈ ಸೇರಿದಂತೆ ತಮಿಳುನಾಡಿನ 45 ಸ್ಥಳಗಳಲ್ಲಿ ಆರ್‌ಎಸ್‌ಎಸ್ ಭಾನುವಾರ ಪಥಸಂಚಲನ ನಡೆಸಿತು. ಪಥಸಂಚಲನದಲ್ಲಿ ನೂರಾರು ಆರ್‌ಎಸ್‌ಎಸ್ ಕಾರ್ಯಕರ್ತರು ಭಾಗವಹಿಸಿದ್ದರು. ಇದೇ ವೇಳೆ ಬಹಿರಂಗ ಸಾರ್ವಜನಿಕ ಸಭೆಗಳು ನಡೆಯಿತು.
ಚೆನ್ನೈ ಹೊರವಲಯದ ಕರಟ್ಟೂರ್ ಪ್ರದೇಶದಲ್ಲಿ ನಡೆದ 5 ಕಿ.ಮೀ. ಪಥಸಂಚಲನದಲ್ಲಿ ಕೇಂದ್ರ ಮೀನುಗಾರಿಕೆ ಸಚಿವ ಡಿ.ಎಲ್.ಮುರುಗನ್ ಪಾಲ್ಗೊಂಡಿದ್ದರು.
ಕಳೆದ ವರ್ಷದ ಅ.2ರಂದು ಪಥಸಂಚಲನ ನಡೆಸಲು ಆರ್‌ಎಸ್‌ಎಸ್ ತಮಿಳುನಾಡು ಸರ್ಕಾರದ ಅನುಮತಿ ಕೋರಿತ್ತು. ಆದರೆ, ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದ್ದರಿಂದ ಮದ್ರಾಸ್ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಂಗ ಹೋರಾಟ ನಡೆದಿತ್ತು. ಡಿಎಂಕೆ ಸರ್ಕಾರ ಅನುಮತಿ ನೀಡದೇ ಇದ್ದುದನ್ನು ಪ್ರಶ್ನಿಸಿ ಆರ್‌ಎಸ್‌ಎಸ್ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿತ್ತು. ಪಥಸಂಚಲನ ನಡೆಸಲು ಹೈಕೋರ್ಟ್ ಅನುಮತಿ ನೀಡಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಡಿಎಂಕೆ ಸರ್ಕಾರ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಏ.11ರಂದು ತಮಿಳುನಾಡು ಸರ್ಕಾರದ ಮೇಲ್ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್, ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪುನ್ನು ಎತ್ತಿಹಿಡಿಯಿತು.
“ಆರ್‌ಎಸ್‌ಎಸ್ ಪಥಸಂಚಲನವನ್ನು ನಿರ್ವಹಿಸಲು ಕಷ್ಟವಾಗಬಹುದು ಮತ್ತು ಅಸ್ಥಿರತೆಗೆ ಕಾರಣವಾಗಬಹುದು” ಎಂದು ತಮಿಳುನಾಡು ಸರ್ಕಾರ ತನ್ನ ಅರ್ಜಿಯಲ್ಲಿ ಹೇಳಿತ್ತು. ಮುಚ್ಚಿದ ಆವರಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಮದ್ರಾಸ್ ಹೈಕೋರ್ಟ್ ಸೂಚಿಸಿದ ನಂತರವೂ ಸರ್ಕಾರ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿತ್ತು.