ಸಮಲ್ಕಾ: ಆರ್‌ಎಸ್‌ಎಸ್‌ನ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸುವ ಕುರಿತು ಸಂಘದ ವಾರ್ಷಿಕ ಅಖೀಲ ಭಾರತ ಪ್ರತಿನಿಧಿ ಸಭಾದಲ್ಲಿ ಚರ್ಚಿಸಲಾಗಿದೆ ಎಂದು ಆರ್‌ಎಸ್‌ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ್ ವೈದ್ಯ ಹೇಳಿದರು.
ಹರ್ಯಾಣದ ಸಮಲ್ಕಾದಲ್ಲಿ ಮೂರು ದಿನಗಳ ಆರ್‌ಎಸ್‌ಎಸ್ ಅಖೀಲ ಭಾರತ ಪ್ರತಿನಿಧಿ ಸಭಾ ಭಾನವಾರ ಆರಂಭವಾ ಯಿತು. ಈ ವೇಳೆ ಮಾತನಾಡಿದ ಅವರು, “ಆರ್‌ಎಸ್‌ಎಸ್‌ನಲ್ಲಿ ಮಹಿಳೆಯರಿ ಗೆಂದೇ ರಾಷ್ಟ್ರೀಯ ಸೇವಿಕ ಸಮಿತಿ ಇದೆ. ಇದು ಮಹಿಳೆಯರ ಸಮಗ್ರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತದೆ. ಸಾಮಾಜಿಕ ಜಾಗೃತಿ ಸೇರಿದಂತೆ ಸಂಘದ ಸಾಮಾಜಿಕ ಬದಲಾ ವಣೆ ಕಾರ್ಯಗಳಲ್ಲಿ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚಿಸಲಾಯಿತು,’ ಎಂದರು.
ಸಭೆ ಆರಂಭಕ್ಕೂ ಮುನ್ನ ಇತ್ತೀಚೆಗೆ ಮಡಿದ ಪ್ರಮುಖ ನಾಯಕರಾದ ಮುಲಾಯಂ ಸಿಂಗ್ ಯಾದವ್, ಶರದ್ ಯಾದವ್, ಶಾಂತಿ ಭೂಷಣ್, ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ, ನಿರ್ದೇಶಕ ಸತೀಶ್ ಕೌಶಿಕ್ ಸೇರಿದಂತೆ ಅನೇಕ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಪ್ರಮುಖರು, 1,400ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.