Advertisement

ಆರೆಸ್ಸೆಸ್‌ ಎಂದರೆ ಇಡೀ ಹಿಂದೂ ಸಮಾಜ: ಮೋಹನ್‌ ಭಾಗವತ್‌

11:08 AM Jan 14, 2022 | Team Udayavani |

ಕಲಬುರಗಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದರೆ ಇಡೀ ಹಿಂದೂ ಸಮಾಜ ಎಂದು ಆರ್‌ ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಹೇಳಿದರು.

Advertisement

ಇದನ್ನೂ ಓದಿ:ಫೆಬ್ರವರಿ ಮೊದಲ ವಾರದಲ್ಲಿ ಸೋಂಕು ಹೆಚ್ಚಾಗುತ್ತದೆ, ಆದರೆ ಲಾಕ್ ಡೌನ್ ಮಾಡಲ್ಲ: ಸಚಿವ ಸುಧಾಕರ್

ನಗರದ ಅಮಿತಕರ್‌ ಕಲ್ಯಾಣ ಮಂಟಪದಲ್ಲಿ ಗುರುವಾರ ಸಂಕ್ರಾಂತಿ ಉತ್ಸವ ನಿಮಿತ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರನ್ನು ಉದ್ದೇಶಿಸಿ ಆನ್‌ಲೈನ್‌ ಮೂಲಕ ಭಾಷಣ ಮಾಡಿದ ಅವರು, ಸಮಸ್ತ ಹಿಂದೂ ಸಮಾಜ ಒಗ್ಗಟ್ಟಾದರೆ ಯಾವುದೇ ಸಮಸ್ಯೆ ಉದ್ಭವಿಸುವುದೇ ಇಲ್ಲ. ದೇಶದಲ್ಲಿ 130 ಕೋಟಿ ಜನಸಂಖ್ಯೆ ಇದೆ. ಇದರಲ್ಲಿ ಹಿಂದೂಗಳ ಸಂಖ್ಯೆಯೇ 100 ಕೋಟಿ ಎಂದು ಹೇಳುತ್ತೇವೆ. ಕೇವಲ ಶೇ.1ರಷ್ಟು ಕೂಡ ಸಂಘದಲ್ಲಿ ಇಲ್ಲ. ಹೀಗಾಗಿ ಸಂಘದ ಶಾಖೆಗಳಲ್ಲಿ ಎಷ್ಟು ಜನರಿದ್ದೇವೆ? ಎಷ್ಟು ಸ್ವಯಂ ಸೇವಕರಿದ್ದೇವೆ ಎಂಬ ಬಗ್ಗೆ ಮನನ ಮಾಡಿಕೊಳ್ಳಬೇಕಿದೆ.

ನಾವು ಮಾಡಬೇಕಾದ ಕಾರ್ಯ ಇನ್ನೂ ಸಾಕಷ್ಟಿದೆ. ಇಡೀ ಹಿಂದೂಗಳು ಒಂದೇ ಕುಟುಂಬದಂತೆ ಇರಬೇಕು. ಯಾವುದೇ ಜಾತಿ ಭೇದ ಮಾಡದೇ ಸಮಗ್ರ ಹಿಂದೂ ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು. ಎಲ್ಲ ಹಿಂದೂಗಳಲ್ಲಿ ಒಂದೇ ಎಂಬ ಭಾವನೆ ಬೆಳೆಯಬೇಕು. ದೇಶ ಭಕ್ತಿ ಎಂಬುದು ಸ್ವಯಂ ಸೇವಕನ ಟ್ರೇಡ್‌ ಮಾರ್ಕ್‌ ಆಗಬೇಕು ಎಂದರು.

ಸೂರ್ಯನಂತೆ ಪ್ರಕಾಶಿಸಬೇಕು: ಪ್ರತಿ ತಿಂಗಳು ಸಂಕ್ರಾಂತಿ ಆಚರಿಸಬಹುದು. ಆದರೆ, ಈ ಮಾಸದ ದಿನಗಳಲ್ಲಿ ಮಾತ್ರ ಸೂರ್ಯನು ಉತ್ತರಾಯಣ ಪ್ರವೇಶಿಸುತ್ತಾನೆ. ಈ ಸಂಕ್ರಾಂತಿಯಿಂದ ಕತ್ತಲೆಯ ಕಾಲಮಾನ ಕಡಿಮೆ ಆಗಿ, ಪ್ರಕಾಶದ ಕಾಲಮಾನ ಅಧಿಕವಾಗುತ್ತದೆ. ಆದ್ದರಿಂದ ಸಂಕ್ರಾಂತಿಗೆ ವಿಶೇಷ ವಾದ ಮಹತ್ವ ಕೊಡುತ್ತೇವೆ. ಸೂರ್ಯ ಒಮ್ಮೆ ಭೂಮಿಗೆ ಹತ್ತಿರ ಬರುತ್ತಾನೆ, ಮತ್ತೊಮ್ಮೆ ದೂರ ಹೋಗುತ್ತಾನೆ.

Advertisement

ಆದರೆ, ತನ್ನ ಕಕ್ಷೆಯಲ್ಲೇ ಸುತ್ತುತ್ತಿರುತ್ತಾನೆ. ಹಾಗೆ ಸೂರ್ಯನು ಸದಾ ಪ್ರಖರವಾಗಿ ಪ್ರಕಾಶಿಸುತ್ತಾನೆ. ತನ್ನ ನಿತ್ಯದ ಕಾರ್ಯವನ್ನು ಎಂದೂ ನಿಲ್ಲಿಸುವುದಿಲ್ಲ. ಅದೇ ರೀತಿಯಾಗಿ ಸಂಘದ ಸ್ವಯಂ ಸೇವಕರು ತಮ್ಮ ಸಾಧನೆಯನ್ನು ನಿಯಮಿತವಾಗಿ ಮಾಡುತ್ತಲೇ ಇರಬೇಕು. ಹಿಂದೂ ಧರ್ಮ ಸದಾ ಪ್ರಕಾಶಿಸುವಂತೆ ಇರಬೇಕು. ಯಾವುದೇ ಕಾರ್ಯವನ್ನು ಆರಂಭಿಸಿದರೂ ಅದನ್ನು ಪೂರ್ಣಗೊಳಿಸುವವರೆಗೂ ನಿಲ್ಲಿಸಬಾರದು ಎಂದರು.

ಈ ಹಿಂದೆ ಸಂಘದ ಕುರಿತು ಉತ್ಪ್ರೇಕ್ಷೆ ಮಾತುಗಳು ಮತ್ತು ಅಪಪ್ರಚಾರ ಕೇಳಿ ಬರುತ್ತಿತ್ತು. ಆದರೆ, ತನ್ನ ಗುರಿಯತ್ತ ಸಂಘ ಸಾಗುತ್ತಲೇ ಇದೆ. ಹಿಂದೂ ಧರ್ಮ, ಸಂಸ್ಕೃತಿ ರಕ್ಷಣೆಗೆ ಯೋಗ್ಯರಾಗಿ ಸ್ವಯಂ ಸೇವಕರು ತಮ್ಮ ಕರ್ತವ್ಯದಲ್ಲಿ ತೊಡಗಿದ್ದಾರೆ. ಅದರಲ್ಲೂ, 2018ರಿಂದ ಈಚೆಗೆ ಸಂಘಕ್ಕೆ
ಸೇರುವವರ ಸಂಖ್ಯೆ ಅಧಿಕವಾಗಿದೆ ಎಂದರು.

ನಿರ್ದಿಷ್ಟ ಸಮಯ ಕೊಡಿ: ಯುವಕರು ತಮಗೆ ಎಷ್ಟು ಸಾಧ್ಯವೋ, ಎಲ್ಲಿಯವರೆಗೆ ಸಾಧ್ಯವೋ ಅಷ್ಟು ವಿದ್ಯಾಭ್ಯಾಸ ಮಾಡಿ. ನಂತರ ದಿನದ 24 ಗಂಟೆಯಲ್ಲಿ ಕನಿಷ್ಟ ಎಂಟು ಗಂಟೆಗಳನ್ನು ದೇಶ ಸೇವೆಗೆ ಸಮಯ ಮೀಸಲಿಡಬೇಕು. ಯುವಕರು ಶಾಖೆಯನ್ನು ಸೇರಿ ಕೆಲಸ ಮಾಡಬೇಕು. ಪ್ರತಿಯೊಬ್ಬರು ಸ್ವಯಂ ಕಾರ್ಯಶೀಲರಾಗಬೇಕು ಎಂದರು.ಆರ್‌ಎಸ್‌ಎಸ್‌ನ ಉತ್ತರ ಪ್ರಾಂತ ಪ್ರಮುಖ ಪಿ.ಖಗೇಶನ್‌, ಅರವಿಂದರಾವ್‌ ದೇಶಪಾಂಡೆ ಇದ್ದರು. ಮುಖ್ಯ ಕಾರ್ಯಕ್ರಮ ನಡೆದ ಖಮಿತಕರ್‌ ಕಲ್ಯಾಣ ಮಂಟಪ ಸೇರಿದಂತೆ 11 ಕಡೆಗಳಲ್ಲಿ ಸ್ವಯಂ ಸೇವಕರು ಆನ್‌ಲೈನ್‌ ಮೂಲಕ ಮೋಹನ ಭಾಗವತ್‌ ಅವರ ಮಾತುಗಳನ್ನು ಆಲಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next