Advertisement

ಮೈಸೂರು-ಚಾಮರಾಜನಗರದಲ್ಲಿ ಲೀಟರ್‌ ಹಾಲಿಗೆ 23.50 ರೂ.

12:31 PM Oct 20, 2017 | |

ಮೈಸೂರು: ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಹೈನೋದ್ಯಮ ನಲುಗಿದೆ. ಮೈಸೂರು -ಚಾಮರಾಜನಗರ ಹಾಲು ಒಕ್ಕೂಟಕ್ಕೆ ಹೆಚ್ಚು ಹಾಲು ಸರಬರಾಜಾಗುತ್ತಿದ್ದು, ಹೊರ ರಾಜ್ಯಗಳಲ್ಲಿ ಬೇಡಿಕೆ ಕಡಿಮೆಯಾಗಿರುವುದರಿಂದ ರೈತರಿಂದ ಖರೀದಿಸುವ ಹಾಲಿನ ದರವನ್ನು ಹಂತ ಹಂತವಾಗಿ ಕಡಿತ ಮಾಡುತ್ತಿದೆ.

Advertisement

ಎಡೆಬಿಡದೆ ಸುರಿದ ಮಳೆಯಿಂದಾಗಿ ಹಸುಗಳಿಗೆ ಉತ್ತಮ ಹಸಿರು ಮೇವು ಸಿಗುತ್ತಿರುವುದರಿಂದ ಹಾಲಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಇದು ಹೈನುಗಾರರ ಮೊಗದಲ್ಲಿ ಸಂತಸ ಮೂಡಿಸಿದ್ದರೆ, ಜಿಲ್ಲಾ ಹಾಲು ಒಕ್ಕೂಟಕ್ಕೆ ನಿತ್ಯ ಸಾವಿರಾರು ಲೀಟರ್‌ ಹಾಲು ಹೆಚ್ಚುವರಿ ಬರುತ್ತಿದೆ. ಆದರೆ, ಹಾಲಿನ ಬೇಡಿಕೆ ತೀರಾ ಕಡಿಮೆಯಾಗಿರುವುದರ ಪರಿಣಾಮ ಕಳೆದೊಂದು ತಿಂಗಳಲ್ಲಿ ಹಾಲು ಒಕ್ಕೂಟಕ್ಕೆ ಬರೋಬ್ಬರಿ 45 ಕೋಟಿ ರೂ. ನಷ್ಟ ಉಂಟಾಗಿದೆ.

ಪ್ರತಿ ಲೀಟರ್‌ಗೆ 23.50 ರೂ.: ಹಾಲಿಗೆ ಬೇಡಿಕೆ ಕಡಿಮೆಯಾಗಿರುವ ಪರಿಣಾಮ ಒಕ್ಕೂಟ ರೈತರಿಂದ ಖರೀದಿಸುತ್ತಿದ್ದ ಹಾಲಿಗೆ ನೀಡುತ್ತಿದ್ದ ದರವನ್ನು ಹಂತ ಹಂತವಾಗಿ ಕಡಿಮೆ ಮಾಡುತ್ತಿದ್ದು, ಕಳೆದ ಒಂದು ತಿಂಗಳಲ್ಲಿ ಪ್ರತಿ ಲೀಟರ್‌ ಖರೀದಿ ದರ 6.50 ರೂ. ಕಡಿಮೆ ಮಾಡಿದೆ.

ಇದರೊಂದಿಗೆ ಪ್ರಮುಖವಾಗಿ ಹೊರ ರಾಜ್ಯಗಳಾದ ಕೇರಳ, ತಮಿಳುನಾಡು, ಮಹಾರಾಷ್ಟ್ರಗಳಿಂದಲೂ ಹಾಲಿನ ಬೇಡಿಕೆ ಕಡಿಮೆ ಆಗಿದೆ. ಇದೂ ಸಹ ಹಾಲು ಒಕ್ಕೂಟದ ನಷ್ಟಕ್ಕೆ ಕಾರಣವಾಗಿದೆ. ಇದರ ಪರಿಣಾಮ ರೈತರಿಗೆ ಪ್ರತಿ ಲೀಟರ್‌ಗೆ 30 ರೂ. ನೀಡುತ್ತಿದ್ದ ಹಣವನ್ನು ಇದೀಗ 23.50 ರೂ.ಗಳಿಗೆ ಇಳಿಸಲಾಗಿದೆ.

ಮಳೆ ನಿಂತು, ಹಾಲಿನ ಮಾರಾಟ ಹೆಚ್ಚಾದಲ್ಲಿ ಒಕ್ಕೂಟಕ್ಕೆ ಉಂಟಾಗಿರುವ ನಷ್ಟ ಸರಿಯಾಗಲಿದ್ದು, ವರ್ಷಾಂತ್ಯದಲ್ಲಿ ಈ ನಷ್ಟ ಸರಿಯಾಗಲಿದೆ ಎಂದು ಮೈಸೂರು- ಚಾಮರಾಜ ನಗರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಕೆ.ಶಿವಲಿಂಗೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಒಕ್ಕೂಟಕ್ಕೆ ಆದಾಯ ಬರುತ್ತಿಲ್ಲ…: ಹಾಲು ಒಕ್ಕೂಟಕ್ಕೆ ಪ್ರತಿ ನಿತ್ಯ 80 ಸಾವಿರ ಲೀಟರ್‌ ಹಾಲು ಹೆಚ್ಚುವರಿಯಾಗಿ ಬರುತ್ತಿದೆ. ಒಕ್ಕೂಟಕ್ಕೆ ಹಾಲು ಸರಬರಾಜು ಮಾಡಿದ ರೈತರಿಗೆ ವಾರಕ್ಕೊಮ್ಮೆ 17.40 ಕೋಟಿ ರೂ. ಹಣ ಪಾವತಿ ಮಾಡಬೇಕಿದೆ. ಬೇಡಿಕೆ ಕಡಿಮೆ ಆಗಿರುವುದರಿಂದ ಖರೀದಿಸಿದ ಹಾಲಿನಲ್ಲಿ 3.80 ಲಕ್ಷ ಲೀಟರ್‌ ಹಾಲನ್ನು ಹಾಲಿನ ಪುಡಿ ಮಾಡಲು ಕೆಎಂಎಫ್ಗೆ ಕಳುಹಿಸಲಾಗುತ್ತಿದೆ. ಇದರಿಂದಲೂ ಒಕ್ಕೂಟಕ್ಕೆ ಯಾವುದೇ ಆದಾಯ ಬರುತ್ತಿಲ್ಲ ಎಂದು ಮೈಸೂರು- ಚಾಮರಾಜ ನಗರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಕೆ.ಶಿವಲಿಂಗೇಗೌಡ ತಿಳಿಸಿದ್ದಾರೆ.

* ಸಿ.ದಿನೇಶ್‌

Advertisement

Udayavani is now on Telegram. Click here to join our channel and stay updated with the latest news.

Next