Advertisement

8500 ಕೋಟಿ ರೂ. ಅಭಿವೃದ್ಧಿ ಘೋಷಣೆ ಮುಂದೇನು?

04:30 PM May 25, 2019 | Team Udayavani |

ಮಂಡ್ಯ: ಜೆಡಿಎಸ್‌ ಭದ್ರಕೋಟೆಯನ್ನು ಮತ್ತಷ್ಟು ಸುಭದ್ರಗೊಳಿಸಿಕೊಳ್ಳುವ ಜೊತೆಗೆ ಪುತ್ರನ ರಾಜಕೀಯ ಪಟ್ಟಾಭಿಷೇಕದ ಹೊಂಗನಿಸಿನೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯ ಜಿಲ್ಲೆಗೆ 8500 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳ ಘೋಷಣೆ ಮಾಡಿದ್ದರು. ಈಗ ಈ ಕಾಮಗಾರಿಗಳ ಕತೆ ಏನು ಎಂಬ ಪ್ರಶ್ನೆ ಸಹಜವಾಗಿ ಜಿಲ್ಲೆಯ ಜನರನ್ನು ಕಾಡುತ್ತಿದೆ.

Advertisement

ಫ‌ಲಿತಾಂಶದಲ್ಲಿ ಜೆಡಿಎಸ್‌ಗೆ ಸೋಲಾಗಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಗೆಲುವಿನ ಕಹಳೆ ಮೊಳಗಿಸಿದ್ದಾರೆ. ಮಂಡ್ಯ ಕ್ಷೇತ್ರದ ಚುನಾವಣಾ ಫ‌ಲಿತಾಂಶ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಮೇಲೆ ಕರಿನೆರಳು ಬೀಳುವಂತೆ ಮಾಡಿದೆ.

ಈಡೇರದ ಭರವಸೆಗಳು: ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಈಡೇರಿಸಲು ಸಾಧ್ಯವಾಗಿರಲಿಲ್ಲ. ರೈತರ ಸಾಲ ಮನ್ನಾ ಪರಿಪೂರ್ಣವಾಗಿ ಜಾರಿಯಾಗಲಿಲ್ಲ. ಸ್ತ್ರೀಶಕ್ತಿ ಸಾಲ ಮನ್ನಾ ಘೋಷಣೆಗೆ ಸೀಮಿತವಾಯಿತು. ಆದಕಾರಣ ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಜಿಲ್ಲೆಗೆ ಘೋಷಿಸಿದ 8500 ಕೋಟಿ ರೂ. ಕಾಮಗಾರಿಗಳನ್ನು ಜನರೂ ಸುಲಭವಾಗಿ ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಅಭಿವೃದ್ಧಿಯ ಚಿತ್ರಣ ತೋರಿಸಿ ಚುನಾವಣೆ ಗೆಲ್ಲುವ ಜೆಡಿಎಸ್‌ ತಂತ್ರಗಾರಿಕೆಯೂ ಫ‌ಲ ಕೊಡಲಿಲ್ಲ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳಕ್ಕೆ ಏಳು ಸ್ಥಾನಗಳಲ್ಲಿ ದಿಗ್ವಿಜಯ ಸಾಧಿಸಿದ್ದರಿಂದ ಪುತ್ರನಿಗೆ ರಾಜಕೀಯ ಭವಿಷ್ಯ ಕಲ್ಪಿಸಲು ಮಂಡ್ಯ ಕ್ಷೇತ್ರ ಅತ್ಯಂತ ಸುರಕ್ಷಿತ ಸ್ಥಳವೆಂದು ಸಿಎಂ ಕುಮಾರಸ್ವಾಮಿ ಭಾವಿಸಿದ್ದರು. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಪುತ್ರ ನಿಖೀಲ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ನಿರ್ಧರಿಸಿ ಅದಕ್ಕೂ ಮುನ್ನ ಜಿಲ್ಲೆಗೆ 8500 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳನ್ನು ಘೋಷಣೆ ಮಾಡಿದರು. ಜಿಲ್ಲೆಯ ಜನರ ಮನಸ್ಸನ್ನು ಒಲಿಸಿಕೊಳ್ಳುವ ಪ್ರಯತ್ನ ನಡೆಸಿದರು.

ಜನರು ನಂಬಲಿಲ್ಲ: ಜಿಲ್ಲೆಯ ರಾಜಕೀಯ ಇತಿಹಾಸದಲ್ಲೇ ಯಾರೂ ಈ ಪ್ರಮಾಣದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಹಣ ಘೋಷಣೆ ಮಾಡಿಲ್ಲವೆಂಬುದನ್ನು ಬಿಂಬಿಸಲು ಮುಂದಾದರು. ಆದರೆ, ರೈತರ ಸಾಲ ಮನ್ನಾ ಮಾಡುವುದಕ್ಕೇ ಪರದಾಡುತ್ತಿದ್ದ, ಕಬ್ಬಿನ ಬಾಕಿ ಹಣ ಕೊಡಿಸುವುದಕ್ಕೆ ತಿಣುಕಾಡುತ್ತಿದ್ದ, ರೇಷ್ಮೆಗೆ ವೈಜ್ಞಾನಿಕ ಬೆಲೆ ಕೊಡದ, ಭತ್ತವನ್ನು ಸಮರ್ಪಕವಾಗಿ ಖರೀದಿಸಲಾಗದ ಸ್ಥಿತಿಯಲ್ಲಿದ್ದ ಸರ್ಕಾರವನ್ನು ಕಂಡಿದ್ದ ಜನರು ಜಿಲ್ಲೆಗೆ ಘೋಷಣೆ ಮಾಡಿದ ಸಾವಿರಾರು ಕೋಟಿ ರೂ. ಕಾಮಗಾರಿಗಳೆಲ್ಲವೂ ಅನುಷ್ಠಾನಕ್ಕೆ ಬರುತ್ತದೆ ಎಂಬ ಬಗ್ಗೆ ಕಿಂಚಿತ್ತೂ ನಂಬಿಕೆ ಇಟ್ಟಿರಲಿಲ್ಲ.

Advertisement

ಅಭಿವೃದ್ಧಿ ಆಕರ್ಷಿಸಲಿಲ್ಲ: ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಜಿಲ್ಲೆಯೊಳಗೆ ಅಭಿವೃದ್ಧಿಯ ಚಿತ್ರಣ ಬದಲಾಗಿಲ್ಲ. ರೈತರ ಆತ್ಮಹತ್ಯೆ ಮುಂದುವರೆದಿದೆ. ಕಬ್ಬಿನ ಬಾಕಿ ಹಣದ ಬವಣೆ ತಪ್ಪಿಲ್ಲ., ಅಭಿವೃದ್ಧಿ ಕಾರ್ಯಗಳೆಲ್ಲಾ ನೆನೆಗುದಿಗೆ ಬಿದ್ದಿವೆ. ಏಳಕ್ಕೆ ಏಳು ಸ್ಥಾನಗಳನ್ನು ಜೆಡಿಎಸ್‌ಗೆ ಕೊಟ್ಟ ಜಿಲ್ಲೆಯ ಜನರ ಋಣ ತೀರಿಸುವುದಕ್ಕೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒಲವು ತೋರಿಸಿರಲಿಲ್ಲ.

ಜಿಲ್ಲೆಯ ಅಭಿವೃದ್ಧಿಯನ್ನು ಕೇವಲ ಭರವಸೆಗಳಲ್ಲೇ ಇಟ್ಟು ಅಭಿವೃದ್ಧಿಯ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದನ್ನು ಜಿಲ್ಲೆಯ ಜನರು ಬಹಳ ಹತ್ತಿರದಿಂದ ಕಂಡಿದ್ದರು. ಮಗನನ್ನು ಲೋಕಸಭೆಗೆ ಸ್ಪರ್ಧಿಸುವ ಉದ್ದೇಶ ದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ 8500 ಕೋಟಿ ರೂ. ಅಭಿವೃದ್ಧಿ ಕಾಮಗಾರಿ ಘೋಷಣೆ ಮಾಡಿದರೂ ಅದು ಜನರನ್ನು ಆಕರ್ಷಿಸದೇ ಹೋಯಿತು. ಇದು ಚುನಾವಣಾ ಗಿಮಿಕ್‌ ಎನ್ನುವುದು ಜನರಿಗೆ ಸಂಪೂರ್ಣವಾಗಿ ಮನದಟ್ಟಾಯಿತು.

ಅಧಿಕಾರದ ದಾಹದ ಅಸಹನೆ: ಚುನಾವಣಾ ಪ್ರಚಾರದುದ್ದಕ್ಕೂ 8500 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳ ಮಂತ್ರ ಜಪಿಸಿದರೂ ಅದ್ಯಾವುದನ್ನೂ ಜನರು ಕೇಳಿಸಿಕೊಳ್ಳುವುದಕ್ಕೆ ಸಿದ್ಧರಿರಲಿಲ್ಲ. ಮೊದಲು ಏಳಕ್ಕೆ ಏಳರಲ್ಲಿ ಜೆಡಿಎಸ್‌ ಗೆಲ್ಲಿಸಿದ್ದರ ಋಣ ತೀರಿಸಿ ಎಂಬ ಮಾತಿಗೆ ಬದ್ಧರಾಗಿದ್ದರು. ಅಭಿವೃದ್ಧಿಗಾಗಿ ನಿಖೀಲ್ ಗೆಲ್ಲಿಸಿ ಎಂಬ ಮಾತುಗಳು ಜೆಡಿಎಸ್‌ ಮೇಲೆ ದುಷ್ಪರಿಣಾಮ ಬೀರಿದ್ದಲ್ಲದೆ ಗೌಡರ ಕುಟುಂಬದವರ ಅಧಿಕಾರ ದಾಹದ ಬಗ್ಗೆ ಜನರಲ್ಲಿ ಅಸಹನೆ ಮೂಡಿಸಿತ್ತು. ಅದಕ್ಕಾಗಿ ಅಭಿವೃದ್ಧಿ ಮಂತ್ರಕ್ಕೆ ಜನರು ಸುಲಭವಾಗಿ ಮಣಿಯಲಿಲ್ಲ.

ಇವೆಲ್ಲಾ ಬೆಳವಣಿಗೆಗಳ ನಡುವೆ ಜಿಲ್ಲೆಯ ಅಭಿವೃದ್ಧಿ ಮತ್ತಷ್ಟು ಮಸುಕಾಗಬಹುದು ಎಂಬ ಭಾವನೆ ಮೂಡುತ್ತಿದೆ. ಎಲ್ಲಾ ಕ್ಷೇತ್ರಗಳೂ ಜೆಡಿಎಸ್‌ ಹಿಡಿತದಲ್ಲಿರುವುದರಿಂದ ಅಭಿವೃದ್ಧಿ ಮೂಲೆಗುಂ ಪಾಗುವ ಸಾಧ್ಯತೆಗಳೇ ದಟ್ಟವಾಗಿ ಕಂಡುಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next