Advertisement

800 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

12:01 PM Aug 14, 2017 | Team Udayavani |

ಬೀದರ: ಬೀದರ ನಗರದಲ್ಲಿ ದೊಡ್ಡ ಸಭೆ ನಡೆಯುತ್ತಿರುವುದು ಇದೇ ಮೊದಲು. ಇದೊಂದು ಅವಿಸ್ಮರಣೀಯ ದಿನವಾಗಿದ್ದು, ಒಂದೇ ವೇದಿಕೆಯಲ್ಲಿ 800 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಚಾಲನೆ ಕೊಡುತ್ತಿರುವುದು ಬೀದರ ಇತಿಹಾಸದಲ್ಲೇ ಮೊದಲು ಎಂದು
ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು. ನಗರದ ನೆಹರು ಕ್ರೀಡಾಂಗಣದ ಬೃಹತ್‌ ವೇದಿಕೆಯಲ್ಲಿ ರವಿವಾರ ನಡೆದ ಸಮಾರಂಭದಲ್ಲಿ
ಸುಮಾರು 800 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಕೆಲವು ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದ ಬಳಿಕ ನೂತನ ಜಿಲ್ಲಾ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಏನೂ ಮಾಡಿಲ್ಲ ಎಂದು ಟೀಕೆ ಮಾಡುವವರಿಗೆ ಈ ಕಾರ್ಯಕ್ರಮವೇ ಉತ್ತರವಾಗಿದೆ ಎಂದರು. ದಿ| ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೀದರನಲ್ಲಿ ವೈದ್ಯ ಕಾಲೇಜು ಮಂಜೂರು ಮಾಡಿಸಿ ಉದ್ಘಾಟನೆಯೂ ಮಾಡಲಾಗಿತ್ತು. ಆದರೆ, ನಂತರ ಮೂರ್‍ನಾಲ್ಕು ಜನ ಸಿಎಂಗಳು ಅಧಿಕಾರ ನಡೆಸಿದರೂ ಒಂದು ಆಸ್ಪತ್ರೆ ಮಂಜೂರು ಮಾಡಿಸಲು ಸಾಧ್ಯವಾಗಲಿಲ್ಲ. ಪುನಃ ಕಾಂಗ್ರೆಸ್‌ ಸರ್ಕಾರವೇ ಸುಸಜ್ಜಿತ ಆಸ್ಪತ್ರೆ ಮಂಜೂರು ಮಾಡಿ ಲೋಕಾರ್ಪಣೆಯನ್ನೂ ಮಾಡಿದೆ. ರಾಜ್ಯದಲ್ಲಿ ಹಿಂದೆ ಕೇವಲ 4 ಸರ್ಕಾರಿ ವೈದ್ಯ ಕಾಲೇಜಿಗಳಿದ್ದರೆ ನಮ್ಮ ಸರ್ಕಾರದ ಅವಧಿಯಲ್ಲಿ ಹೊಸದಾಗಿ 16 ಕಾಲೇಜು ಮಂಜೂರು ಮಾಡಿಸಲಾಗಿದೆ. ಬಡ ಮಕ್ಕಳು ಸಹ ವೈದ್ಯರಾಗಬೇಕೆಂಬುದು ಸರ್ಕಾರದ ಉದ್ದೇಶ. ಬೇರೆಯವರು ಈ ಯೋಚನೆಯನ್ನೂ ಮಾಡಲಿಲ್ಲ ಎಂದರು. ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವ ಶರಣಪ್ರಕಾಶ ಪಾಟೀಲ, ಶಾಸಕರಾದ ರಹೀಮ್‌ ಖಾನ್‌, ರಾಜಶೇಖರ ಪಾಟೀಲ, ಮಲ್ಲಿಕಾರ್ಜುನ ಖೂಬಾ, ವಿಜಯಸಿಂಗ್‌, ಶರಣಪ್ಪ ಮಟ್ಟೂರ, ಉಮೇಶ ಜಾಧವ, ಪುಟ್ಟರಂಗಶೆಟ್ಟಿ, ಜಿಪಂ ಅಧ್ಯಕ್ಷೆ ಭಾರತಬಾಯಿ, ಉಪಾಧ್ಯಕ್ಷ ಪ್ರಕಾಶ ಪಾಟೀಲ, ಬುಡಾ ಅಧ್ಯಕ್ಷ ಸಂಜಯ ಜಾಗೀರದಾರ, ನಗರಸಭೆ ಉಪಾಧ್ಯಕ್ಷೆ ಶಾಲಿನಿ, ಪ್ರಮುಖರಾದ ಬಸವರಾಜ ಬುಳ್ಳಾ, ಕೃಷ್ಣಮೂರ್ತಿ, ಡಿಸಿ ಡಾ|ಮಹಾದೇವ, ಎಸ್‌ಪಿ ದೇವರಾಜ, ಸಿಇಒ ಡಾ|ಸೆಲ್ವಮಣಿ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next