ಹುಣಸೂರು: ತಾಲೂಕಿನ ದೊಡ್ಡ ಕೆರೆಯಾದ ಹೆರಿಗೆ ಕೆರೆಯ ಎಡದಂಡೆ ನಾಲೆ, ಪಿಕಪ್‌ನಾಲಾ ಲೆನಿಂಗ್ ಹಾಗೂ ವಿವಿಧ ದುರಸ್ತಿಯ 80 ಲಕ್ಷ ರೂ ವೆಚ್ಚದ ಕಾಮಗಾರಿಗಳಿಗೆ ಶಾಸಕ ಮಂಜುನಾಥ್ ಚಾಲನೆ ನೀಡಿದರು.
ತಾಲೂಕಿನ ಹನಗೋಡು ಹೋಬಳಿಯ ಹೊಸಕೋಟೆ ಗ್ರಾಮದ ಬಳಿಯ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಸರಕಾರದ ಮೇಲೆ ಒತ್ತಡ ತಂದು ಹನಗೊಡು ಅಣೆಕಟ್ಟು ನಾಲೆಗಳು ಹಾಗೂ ಹಾರಂಗಿ ಬಲದಂಡೆ ನಾಲೆಗಳ ಆಧುನೀಕರಣ ಯೋಜನೆಗೆ 230 ಕೋಟಿ ರೂ ಗೂ ಹೆಚ್ಚು ಅನುದಾನ ಬಿಡುಗಡೆಯಾಗಿದೆ ಎಂದರು.
ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ದುಸ್ಥಿತಿಯಲ್ಲಿದ್ದ ಹೆರಿಗೆ ಕೆರೆ ಏರಿಯನ್ನು ಆಧುನಿಕ ತಂತ್ರಜ್ಞಾನ ಬಳಸಿ ವಿಶಿಷ್ಟ ಮಾದರಿಯಲ್ಲಿ 4 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಗೊಳಿಸಲಾಗುತ್ತಿದ್ದು, 500 ಎಕರೆ ವಿಸ್ತೀರ್ಣದ ಹೆರಿಗೆ ಕೆರೆಯಲ್ಲಿ ಸಾಕಷ್ಟು ನೀರು ಸಂಗ್ರಹವಾಗಲಿದ್ದು, ಈ ಭಾಗದ ರೈತರ ಬಹುದಿನದ ಬೇಡಿಕೆ ಈಡೇರಿಸಿದ ತೃಪ್ತಿ ತಮಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕುಂಟೇರಿ ಕೆರೆಗೆ 40 ಲಕ್ಷ: ಹನಗೋಡಿನ ಕುಂಟೇರಿಕೆರೆ ಅಭಿವೃದ್ಧಿ ಕಾಮಗಾರಿಗೂ ಚಾಲನೆ ನೀಡಲಾಗಿದೆ. ಮಳೆ ನೀರಿನ ಸಂಗ್ರಹಿಸಿಟ್ಟುಕೊಂಡ ಜಲ ಸಂವೃದ್ಧಿ ಹೆಚ್ಚಿಸಲು ನೀರಾವರಿ ಇಲಾಖೆಯಿಂದ ಅನೇಕ ಕಾಮಗಾರಿಗಳನ್ನು ಕೆಗೊಳ್ಳಲಾಗಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಆಯಾ ಭಾಗದ ರೈತರು ಉಸ್ತುವಾರಿ ವಹಿಸುವಂತೆ ಕೋರಿದರು.
ಇಷ್ಟೇ ಅಲ್ಲದೆ ಬರದ ನಾಡೆಂದೇ ಪ್ರತೀತಿಯಾದ ಬಿಳಿಕೆರೆ ಹೋಬಳಿಯ ಬಿಳಿಕೆರೆ-ಹಳೇಬೀಡು, ಕೆರೆ-ಜೀನಹಳ್ಳಿ ಕೆರೆ ಹಾಗೂ ಬೀಜಿಗನಹಳ್ಳಿ ಗ್ರಾಪಂ ವ್ಯಾಪ್ತಿಯ ಸೋಮನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಿಗೆ ನೀರುಣಿಸುವ, ಹನಗೋಡು ಭಾಗದ ಮುದಗನೂರು ಕೆರೆ ಸುತ್ತಮುತ್ತಲ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಸೇರಿದಂತೆ ಸುಮಾರು 400 ಕೋಟಿ ರೂ ಗೂ ಹೆಚ್ಚು ವಿವಿದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಕೆಲ ಯೋಜನೆಗಳ ಉದ್ಘಾಟನೆಯನ್ನು ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇ 31ರಂದು ನಗರಸಭಾ ಮೈದಾನದಲ್ಲಿ ನೆರವೇರಿಸಲಿದ್ದಾರೆ ಎಂದರು.
ತಾಪಂ ಸದಸ್ಯ ಶ್ರೀನಿವಾಸ್, ಗ್ರಾಪಂ ಅಧ್ಯಕ್ಷ ರಾಮಕಷ್ಣ, ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಅಂಜಲಿ, ರಾಮಸ್ವಾಮಿ, ಮಾಜಿ ಸದಸ್ಯ ಅಂಥೋಣಿ, ಫಾಧರ್ ವಿಲಿಯಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಟಿ.ವಿ.ನಾರಾಯಣ್, ಶಿರೇನಹಳ್ಳಿ ಬಸವರಾಜೇಗೌಡ, ಯುವ ಅಧ್ಯಕ್ಷ ರಾಘು, ಮುಖಂಡರುಗಳಾದ ಹರಿಹರಆನಂದಸ್ವಾಮಿ, ಬಿಳಿಕೆರೆ ಸ್ವಾಮಿ, ಹೊಸಕೋಟೆಸೋಮಯ್ಯ, ಸಂತೋಷ್, ದೇವಣ್ಣ, ನವೀನ್, ಬೋರೇಗೌಡ, ನೇರಳಕುಪ್ಪೆ ಮಹದೇವ್, ಹಾರಂಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕುಶುಕುಮಾರ್ ಇತರರು ಇದ್ದರು.