ಬೆಂಗಳೂರು:ಇನ್‌ಸ್ಟ್ರಾಗ್ರಾಂ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ಗಿಫ್ಟ್ ಕಳುಹಿಸುವುದಾಗಿ ನಂಬಿಸಿ ಮಹಿಳೆ ಸೇರಿ ಇಬ್ಬರ ಖಾತೆಯಿಂದ 7 ಲಕ್ಷ ರೂ. ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ದೊಡ್ಡಕಲ್ಲಸಂದ್ರ ನಿವಾಸಿ ನೇಹಾ ಅಶೋಕ್ ಕುರೇಕರ್ ಅವರು ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ನೇಹಾ ಅಶೋಕ್ ಕುರೇಕರ್ ಅವರಿಗೆ ಇನ್‌ಸ್ಟ್ರಾಗ್ರಾಂನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಪರಿಚಯವಾಗಿ ದ್ದು, ವಾಟ್ಸ್‌ಆ್ಯಪ್ ನಂಬರ್ ಪಡೆದುಕೊಂಡಿದ್ದಾನೆ. ಬಳಿಕ ಸಂದೇಶ ಹಾಗೂ ಆಗಾಗ್ಗೆ ಕರೆ ಮಾಡುತ್ತಿದ್ದ. ಈ ಮಧ್ಯೆ ಉಡುಗೊರೆ ಕಳುಹಿಸುತ್ತೇನೆ. ಅದರಲ್ಲಿ ಒಂದು ಐ-ಫೋನ್ ಮತ್ತು ಪೌಂಡ್ಸ್‌ಗಳು ಇವೆ ಎಂದು ನಂಬಿಸಿದ್ದಾನೆ. ಅನಂತರ ಮತ್ತೂಬ್ಬ ವ್ಯಕ್ತಿ ಕರೆ ಮಾಡಿ, ದೆಹಲಿಯ ಕಸ್ಟಮ್ಸ್ ಕಚೇರಿಯಿಂದ ಕರೆ ಮಾಡುತ್ತಿದ್ದೇವೆ. ಉಡುಗೊರೆಯ ಬಾಕ್ಸ್ ದೆಹಲಿಗೆ ಬಂದಿದ್ದು, ಇಲ್ಲಿಂದ ಕಳುಹಿಸಲು ಕೆಲವೊಂದು ಪ್ರಕ್ರಿಯೆಗಳಿವೆ. ಅದಕ್ಕೆ ಹಣ ಪಾವತಿಸಬೇಕಿದೆ ಎಂದು ನಂಬಿಸಿದ್ದಾನೆ. ಬಳಿಕ ನೇಹಾ ಹಾಗೂ ಅವರ ಪತಿಯ ಖಾತೆಯಿಂದ ಒಟ್ಟು 7, 34,810 ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖೀಸಿದ್ದಾರೆ ಎಂದು ಪೊಲೀಸರು ಹೇಳಿದರು.