ದೇವನಹಳ್ಳಿ: ಚುನಾವಣಾ ಅಕ್ರಮಗಳ ಮೇಲೆ ಕಣ್ಣಿಟ್ಟಿರುವ ಚುನಾವಣಾ ಆಯೋಗ ಮತ್ತು ಪೊಲೀಸರ ಕಾರ್ಯಾಚರಣೆ ತೀವ್ರಗೊಳ್ಳುತ್ತಿದ್ದು, ದಾಖಲೆಗಳಿಲ್ಲದೆ ಬಸ್‌ನಲ್ಲಿ ಸಾಗಿಸುತ್ತಿದ್ದ 63.26 ಲಕ್ಷ ನಗದು ದೇವನಹಳ್ಳಿಯ ರಾಣಿ ಸರ್ಕಲ್‌ನ ಚೆಕ್‌ಪೋಸ್ಟ್‌ನಲ್ಲಿ ವಶಪಡಿಸಿಕೊಳ್ಳಲಾಗಿದೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಖಾಸಗಿ ಟ್ರಾವೆಲ್ಸ್‌ನ ಬಸ್‌ಗಳಲ್ಲಿ ಹೈದರಾಬಾದ್‌ನಿಂದ ಬೆಂಗಳೂರಿಗೆ ತರುತ್ತಿದ್ದ 52.54 ಲಕ್ಷ ರೂ. ಹಾಗೂ ಹೈದರಾಬಾದ್‌ನಿಂದ ಮೈಸೂರಿಗೆ ಕೊಂಡೊಯ್ಯುತ್ತಿದ್ದ 10.72 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೈದರಾಬಾದ್‌ನಿಂದ ಖಾಸಗಿ ಬಸ್‌ನಲ್ಲಿ ತಡರಾತ್ರಿ 12 ಗಂಟೆ ಸುಮಾರಿಗೆ ರಾಣಿ ಸರ್ಕಲ್ ಚೆಕ್‌ಪೋಸ್ಟ್‌ನಲ್ಲಿ ಬಸ್‌ನ ಎಲ್ಲ ಪ್ರಯಾಣಿಕರ ಬ್ಯಾಗ್‌ಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ತಮಿಳುನಾಡು ಮೂಲದ ಕಾರ್ತಿಕೇಯನ್ ಮತ್ತು ವೆಂಕಟೇಶ್ ಪ್ರಭು ಹಾಗೂ ಶಿವಕಾಶಿ ಎಂಬುವವರಿಗೆ ಸೇರಿದ ಬ್ಯಾಗಿನಲ್ಲಿ ರೂ.500 ಮುಖಬೆಲೆಯ 5,024 ನೋಟುಗಳು ಹಾಗೂ ರೂ.2000 ಮುಖಬೆಲೆಯ 1,371 ನೋಟುಗಳು ಸೇರಿದಂತೆ ದಾಖಲೆಯಿಲ್ಲದ ಒಟ್ಟು 52.54 ಲಕ್ಷ ರೂ. ಪತ್ತೆಯಾಗಿದೆ. ಹೀಗಾರಿ ಅವರನ್ನೂ ವಶಕ್ಕೆ ಪಡೆಯಲಾಗಿದೆ. ಚುನಾವಣಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ.
ಮತ್ತೂಂದು ಪ್ರಕರಣದಲ್ಲಿ ಇದೇ ಚೆಕ್‌ಪೋಸ್ಟ್‌ನಲ್ಲಿ ನಸುಕಿನ 4.30ರ ಸುಮಾರಿಗೆ ಹೈದರಾಬಾದ್‌ನಿಂದ ಮೈಸೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ತಪಾಸಣೆ ಮಾಡಿ, ಬೆಂಗಳೂರಿನ ಫ್ರೆàಜರ್ ಟೌನ್ ನಿವಾಸಿ ಜಮೀರ್ ಅಹ್ಮದ್ ಎಂಬುವವರ ಬ್ಯಾಗ್‌ನಲ್ಲಿ 2000 ರೂ. ಮುಖಬೆಲೆಯ 450 ನೋಟುಗಳು ಹಾಗೂ 500ರೂ. ಮುಖಬೆಲೆಯ 345 ನೋಟುಗಳು ಸೇರಿದಂತೆ ದಾಖಲೆಯಿಲ್ಲದ ಒಟ್ಟು 10.72 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ. ಅಹ್ಮದ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಗಳ ಕುರಿತಂತೆ ಜಿಲ್ಲಾಧಿಕಾರಿ ಎಸ್.ಪಾಲಯ್ಯ ಮಾತನಾಡಿ, ಚೆಕ್‌ಪೋಸ್ಟ್‌ನಲ್ಲಿ ಸ್ಟಾಟಿಕ್ ಸರ್ವೇಲೆನ್ಸ್ ಟೀಮ್ (ಎಸ್‌ಎಸ್‌ಟಿ) ತಂಡ ಪರಿಶೀಲನೆ ವೇಳೆ ಬಸ್ಸನಲ್ಲಿ ದೊರೆತ ಹಣ ವಶಕ್ಕೆ ಪಡೆಯಲಾಗಿದೆ. ಈಗಾಗಲೇ ಹಣದ ಮೂಲ ಪತ್ತೆಗೆ ಪರಿಶೀಲನೆ ನಡೆಸಲಾಗುತ್ತಿದೆ.
ಎರಡು ಪ್ರಕರಣಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಮೊತ್ತ ಪತ್ತೆಯಾಗಿರುವುದರಿಂದ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿ ತನಿಖೆ ಮುಂದುವರಿಸಲಾಗಿದೆ. ದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಎಸ್‌ಪಿ ಭೀಮ್ ಶಂಕರ್ ಗುಳದ್, ಚುನಾವಣಾಧಿಕಾರಿ ಮಂಜುನಾಥ್, ತಹಸೀಲ್ದಾರ್ ಎಂ.ರಾಜಣ್ಣ, ದೇವನಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್, ರೇಷ್ಮೆ ಇಲಾಖಾಧಿಕಾರಿ ಶ್ರೀನಿವಾಸ್ ಮೂರ್ತಿ, ಪಿಡಿಓ ಆದರ್ಶಕುಮಾರ್ ಇದ್ದರು.