ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದಿಂದ (ಕೆಯುಐಡಿಎಫ್ಸಿ) ಪಡೆದ ಸಾಲ ಪಾವತಿಯಲ್ಲಿ ತೋರಿದ ನಿರ್ಲಕ್ಷ್ಯದಿಂದಾಗಿ 60 ಕೋಟಿ ರೂ.ಗಳನ್ನು ಬಡ್ಡಿ ಹಾಗೂ ಚಕ್ರಬಡ್ಡಿ ರೂಪದಲ್ಲಿ ಪಾವತಿಸಲಾಗಿದೆ.
ಕೆಯುಐಡಿಎಫ್ಸಿಯಿಂದ ಬಿಬಿಎಂಪಿ 2006ರಲ್ಲಿ ಕರ್ನಾಟಕ ಪುರಸಭೆಗಳ ಸುಧಾರಣಾ ಯೋಜನೆಯಡಿ (ಕೆಎಂಆರ್‌ಪಿ) ವಿವಿಧ ಯೋಜನೆಗಳಿಗಾಗಿ 73.40 ಕೋಟಿ ಸಾಲ ಪಡೆದಿತ್ತು. ಆ ಮೊತ್ತಕ್ಕೆ 24.33 ಕೋಟಿ ಬಡ್ಡಿ ಸೇರಿಸಿ ಒಟ್ಟು 97.73 ಕೋಟಿ ಬಿಬಿಎಂಪಿ ಪಾವತಿಸಬೇಕಿತ್ತು. ಆದರೆ, 2011ರ ನಂತರ ಅಸಲು ಹಾಗೂ ಬಡ್ಡಿ ಪಾವತಿಸದ ಹಿನ್ನೆಲೆಯಲ್ಲಿ ಕೆಯುಐಡಿಎಫ್ಸಿಯವರು ಬಾಕಿ ಮೊತ್ತಕ್ಕೆ ಚಕ್ರಬಡ್ಡಿ ಸೇರಿಸಿದ್ದಾರೆ.
ಸಾಲ ಮರುಪಾವತಿ ಮಾಡುವಂತೆ ಕೆಯುಐಡಿಎಫ್ಸಿಯು ಪಾಲಿಕೆಗೆ 21 ಬಾರಿ ಪತ್ರ ಬರೆದಿದೆ. ಆದರೆ, ಕಳೆದ ಏಳು ವರ್ಷಗಳಿಂದ ಯಾವುದೇ ಬಜೆಟ್‌ನಲ್ಲಿ ಸಾಲ ಪಡೆದಿರುವ ಮಾಹಿತಿಯನ್ನು ಅಧಿಕಾರಿಗಳು ಉಲ್ಲೇಖೀಸಿಲ್ಲ. ಕೆಎಂಆರ್‌ಪಿ ಮುಖ್ಯ ಎಂಜಿನಿಯರ್ ಹಾಗೂ ಕಾರ್ಯಪಾಲಕ ಎಂಜಿನಿಯರ್ ಪಾಲಿಕೆಯ ಲೆಕ್ಕಪತ್ರ ವಿಭಾಗಕ್ಕೂ ಸಾಲ ಪಡೆದ ಖರ್ಚು ಮಾಡಿದ ಮಾಹಿತಿಯನ್ನು ನೀಡದ ಹಿನ್ನೆಲೆಯಲ್ಲಿ ಬಡ್ಡಿ ಪ್ರಮಾಣ ಸುಮಾರು 60 ಕೋಟಿ ರೂ.ಗೇರಿದೆ.
ಕಳೆದ 2016ರ ಡಿಸೆಂಬರ್ 30 ರಿಂದ 2017ರ ಮಾರ್ಚ್ 30ರಲ್ಲಿ ಬಿಬಿಎಂಪಿಯಿಂದ ಕೆಯುಐಡಿಎಫ್ಸಿಗೆ 36.31 ಕೋಟಿ ಅಸಲು, 38.08 ಕೋಟಿ ಬಡ್ಡಿ ಮತ್ತು 19.84 ಕೋಟಿ ರೂ. ಚಕ್ರಬಡ್ಡಿ ಸೇರಿ ಒಟ್ಟು 94.24 ಕೋಟಿ ಪಾವತಿಸಲಾಗಿದೆ. ಇದಾದ ನಂತರವೂ ಬಿಬಿಎಂಪಿ 61.42 ಕೋಟಿ ರೂ. ಸಾಲ ಪಾವತಿಸಬೇಕಿದೆ.
2006ರಲ್ಲಿ ಸಾಲದ ಹಣದಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳ ಮಾಹಿತಿಯನ್ನು ನೀಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈವರೆಗೆ ಕಾಮಗಾರಿಯ ಕುರಿತು ಯಾವುದೇ ಮಾಹಿತಿ ನೀಡಲು ಅಧಿಕಾರಿಗಳು ಮುಂದಾಗದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಮಾರು 20 ಕೋಟಿಯನ್ನು ಚಕ್ರಬಡ್ಡಿಯಾಗಿ ಪಾವತಿಸಬೇಕಾಗಿದೆ. ಹೀಗಾಗಿ ಆಯುಕ್ತರು ಕೂಡಲೇ ಇದನ್ನು ತನಿಖೆಗೆ ಆದೇಶಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು,’
-ಗೌತಮ್ ಕುಮಾರ್, ಲೆಕ್ಕಪತ್ರ ಸ್ಥಾಯಿ ಸಮಿತಿ ಸದಸ್ಯ