Advertisement

60 ಕೋಟಿ ಆಸೆ ತೋರಿಸಿ 28 ಲಕ್ಷ ವಂಚನೆ

12:36 PM Oct 23, 2018 | |

ಬೆಂಗಳೂರು: ಖಾಸಗಿ ಬ್ಯಾಂಕ್‌ಗಳಿಂದ ಸಾಲ ಕೊಡಿಸುವ ನೆಪದಲ್ಲಿ ಹಲವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿ ಯುಬಿ ಸಿಟಿಯಲ್ಲಿನ ಕಚೇರಿ ಬಂದ್‌ ಮಾಡಿರುವ ಜೆ.ಎಂ ಗ್ರೂಪ್‌ ವಿರುದ್ಧ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಮತ್ತೂಂದು ದೂರು ದಾಖಲಾಗಿದೆ.

Advertisement

60 ಕೋಟಿ ರೂ. ಪ್ರಾಜೆಕ್ಟ್ ಲೋನ್‌ ಕೊಡಿಸುವುದಾಗಿ ನಂಬಿಸಿ, 2017ರಿಂದ ಹಂತ ಹಂತವಾಗಿ 28 ಲಕ್ಷ ರೂ. ಪಡೆದು ಜೆ.ಎಂ ಗ್ರೂಪ್‌ನ ಸಿಇಒ ಎನ್ನಲಾದ ಜೋಸೆಫ್ ಮ್ಯಾಥ್ಯೂ ಸೇರಿ ಮೂವರು ವಂಚಿಸಿದ್ದಾರೆ ಎಂದು ಆರೋಪಿಸಿ ಉದ್ಯಮಿ ಕೆ. ಶ್ರೀನಿವಾಸುಲು ರೆಡ್ಡಿ ಎಂಬುವವರು ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಜೋಸೆಫ್ ಮ್ಯಾಥ್ಯೂ, ಮ್ಯಾನೇಜರ್‌ ಸೆಂಥಿಲ್‌ ಕುಮಾರ್‌ ಹಾಗೂ ಅಕೌಂಟೆಂಟ್‌ ಪ್ರಿಯಾ ಎಂಬುವವರ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.  

2017ರಲ್ಲಿ ಪ್ರಾಜೆಕ್ಟ್ ಲೋನ್‌ ಆಗಿ 60 ಕೋಟಿ ರೂ. ಕೊಡಿಸುವುದಾಗಿ ಹೇಳಿದ್ದ ಜೋಸೆಫ್ ಮ್ಯಾಥ್ಯೂ, ಅದಕ್ಕೆ ಪ್ರತಿಯಾಗಿ ರೀ ಫ‌ಂಡಮೆಂಟಲ್‌ ಶುಲ್ಕವಾಗಿ 20 ಲಕ್ಷ ರೂ. ನೀಡುವಂತೆ ಹೇಳಿದ್ದು, ಅದಕ್ಕೆ ಒಪ್ಪಿಗೆ ಸೂಚಿಸಿದ್ದೆ. ಆದರಂತೆ, ಸಾಲ ಕೊಡಿಸುವ ತಾಂತ್ರಿಕ ಪ್ರಕ್ರಿಯೆಗಳ ಶುಲ್ಕವಾಗಿ 2017ರ ನವೆಂಬರ್‌ನಲ್ಲಿ 2 ಲಕ್ಷ ರೂ.ಗಳನ್ನು ಕಂಪನಿಯ ಅಕೌಂಟ್‌ಗೆ ಹಾಕಿಸಿಕೊಂಡಿದ್ದರು.

ಬಳಿಕ ಡಿಸೆಂಬರ್‌ನಲ್ಲಿ ಒಮ್ಮೆ 9 ಲಕ್ಷ ರೂ. ಮತ್ತೂಂದು ಬಾರಿ 11 ಲಕ್ಷ ರೂ.ಗಳನ್ನು ಆರ್‌ಟಿಜಿಎಸ್‌ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದರು. ಕಡೆಯದಾಗಿ ಸಾಲ ಮಂಜೂರಾಗಿದೆ ಎಂದು ಲೆಟರ್‌ ನೀಡಿ ಇದೇ ವರ್ಷದ ಜನವರಿ 19ರಂದು 6 ಲಕ್ಷ ರೂ. ವರ್ಗಾವಣೆ  ಮಾಡಿಸಿಕೊಂಡಿದ್ದರು. ಕೆಲ ದಿನಗಳ ಬಳಿಕ ಸಾಲ ಪಡೆಯುವ ಸಂಬಂಧ ಕರೆ ಮಾಡಿದರೆ ಸ್ವೀಕರಿಸಲಿಲ್ಲ. ಅನುಮಾನ ಬಂದು ಯುಬಿಸಿಟಿಗೆ ಹೋಗಿ ನೋಡಿದಾಗ ಆಫೀಸ್‌ ಮುಚ್ಚಿಕೊಂಡು ಹೋಗಿರುವುದು ಗೊತ್ತಾಯಿತು ಎಂದು ದೂರುದಾರ ಶ್ರೀನಿವಾಸುಲು ರೆಡ್ಡಿ ಆರೋಪಿಸಿದ್ದಾರೆ.

ನಿವೃತ್ತ ಅರಣ್ಯಾಧಿಕಾರಿಗೆ 33 ಲಕ್ಷ ರೂ. ವಂಚನೆ!: ಯಾವುದೇ ದಾಖಲೆಗಳಿಲ್ಲದೆ ಕಡಿಮೆ ಬಡ್ಡಿಗೆ 30 ಕೋಟಿ ರೂ. ಸಾಲ ನೀಡುವುದಾಗಿ ನಂಬಿಸಿದ್ದ ಜೆ.ಎಂ ಗ್ರೂಪ್‌ ಸಿಬ್ಬಂದಿ, 33 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆ ಎಂದು ಕೇರಳದ ಕಣ್ಣೂರಿನ ನಿವೃತ್ತ ಅರಣ್ಯ ಅಧಿಕಾರಿ ಚಂದ್ರನ್‌ ಎಂಬುವವರು ಕೂಡ ಕೆಲ ದಿನಗಳ ಹಿಂದೆ ದೂರು ನೀಡಿದ್ದರು. ಎರಡೂ ಪ್ರಕರಣಗಳ ಸಂಬಂಧ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next