Advertisement

ನೀರಿನ ಸಮಸ್ಯೆ ನೀಗಿಸಲು 50 ಲಕ್ಷ ಮಂಜೂರು

10:50 AM Feb 08, 2019 | Team Udayavani |

ಹೊಸಪೇಟೆ: ಬೇಸಿಗೆಯಲ್ಲಿ ನೀರಿನ ಸಮಸ್ಯೆ ನಿವಾರಣೆಗಾಗಿ ಟಾಸ್ಕ್ಪೋರ್ಸ್‌ ವತಿಯಿಂದ 50 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಇದರಲ್ಲಿ ಈಗಾಗಲೇ ತಹಶೀಲ್ದಾರ್‌ ಖಾತೆಯಲ್ಲಿ 25 ಲಕ್ಷ ರೂ. ಜಮಾ ಮಾಡಲಾಗಿದೆ. ಅಧಿಕಾರಿಗಳು ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಮುಂಜಾಗ್ರತ ಕ್ರಮ ಕೊಳ್ಳಬೇಕೆಂದು ತಾಪಂ ಇಒ ಟಿ.ವೆಂಕೋಬಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಇದಲ್ಲದೆ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಇನ್ನು 50 ಲಕ್ಷ ರೂ. ಕ್ರಿಯಾ ಯೋಜನೆ ಸಲ್ಲಿಸಲಾಗಿದ್ದು, ಅಧಿಕಾರಿಗಳು ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಮೋಟರ್‌ಗೆ ಅಳವಡಿಸಿದ್ದ ವಿದ್ಯುತ್‌ ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದು. ಅಧಿಕಾರಿಗಳು ಜವಾಬ್ದಾರಿತನದಿಂದ ವರ್ತಿಸಬೇಕು ಎಂದು ತಾಕೀತು ಮಾಡಿದರು.

ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ಸಾರ್ವಜನಿಕರು ತಾಲೂಕು ಪಂಚಾಯತ್‌ ಕಚೇರಿ(08394-231753) ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ-ವಿಭಾಗದ ಕಚೇರಿ(9845780708) ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ತಿಳಿಸಿದರು.

ತಾಲೂಕಿನ ಧರ್ಮಸಾಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಹಲವು ಬಾರಿ ಸಮಸ್ಯೆ ಕುರಿತು ಹೇಳಿದರು ಪ್ರಯೋಜವಾಗಿಲ್ಲ ಎಂದು ತಾಪಂ ಅಧ್ಯಕ್ಷೆ ಜೋಗದ ನೀಲಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ-ವಿಭಾಗದ ಪಂಪಾಪತಿ ಮಾತನಾಡಿ, ಧರ್ಮಸಾಗರದಲ್ಲಿ ಕುಡಿವ ನೀರಿನ ಸಮಸ್ಯೆ ಆಗದಂತೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ತಾಲೂಕಿನ ಕಲ್ಲಹಳ್ಳಿ, ರಾಜಾಪುರ, ಬ್ಯಾಲಕುಂದಿ, ಜೀರಗನೂರ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಖಾಸಗಿ ಬೋರ್‌ವೆಲ್‌ ಕೊರೆಸಲು ತೀರ್ಮಾನ ಮಾಡಲಾಗಿದೆ. ತಾಲೂಕಿನಲ್ಲಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.

Advertisement

ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಷಣ್ಮುಖಪ್ಪ ಮಾತನಾಡಿ, ಪಿಡಬ್ಲ್ಯೂಡಿ ಎಇಇ ಪ್ರತಿ ಕೆಡಿಪಿ ಸಭೆಗೆ ಗೈರಾಗುತ್ತಿದ್ದಾರೆ. ಇಲಾಖೆ ಸಿಬ್ಬಂದಿ ಕಳುಹಿಸಿ ಪ್ರಗತಿ ವರದಿ ಸಲ್ಲಿಸಲಾಗುತ್ತಿದೆ. ಹೀಗಾಗಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೆಟ್ರಿಯಲ್ಲಿ ಭೂಮಿಪೂಜೆ ಮಾಡಲಾಗಿತ್ತು. ಅದಕ್ಕೆ ತಾಪಂ ಸದಸ್ಯರನ್ನು ಆಹ್ವಾನಿಸಿಲ್ಲ. ಪೋಟೋಕಾಲ್‌ ಪ್ರಕಾರ ತಾಪಂ ಸದಸ್ಯರನ್ನು ಆಹ್ವಾನಿಸಬೇಕು. ಮುಂದೆ ಹೀಗಾದಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದರು. ಪಶು ಸಂಗೋಪಣಾ ಇಲಾಖೆಯ ಸಹಾಯಕ ನಿರ್ದೇಶಕ ಬೆಣ್ಣಿ ಬಸವರಾಜ, 32 ಟನ್‌ ಭತ್ತದ ಹುಲ್ಲು ದಾಸ್ತಾನು ಮಾಡಲಾಗಿದೆ. ಜಾನುವಾರುಗಳಿಗೆ ಕುಡಿಯವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು. ಗಾದಿಗನೂರು, ಮೆಟ್ರಿ, ದೇವಲಾಪುರ, ವ್ಯಾಸನಕೇರಿ ಭಾಗದಲ್ಲಿ ಕುರಿಗಳ ಸಂಖ್ಯೆ ಹೆಚ್ಚು ಇದೆ. ಅಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ, ರೈತರ ಹೊಲಗಳ ಬದುಗಳಿಗೆ ಹಾಕಲು ಮುಸಕಿನ ಜೋಳ ಮತ್ತು ಜೋಳ ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ತಾಪಂ ಇಒ ಟಿ.ವೆಂಕೋಬಪ್ಪ ಮಾತನಾಡಿ, ಗ್ರಾಮದ ಹೊರ ವಲಯದಲ್ಲಿ ನೀರಿನ ತೊಟ್ಟಿ ನಿರ್ಮಿಸಬೇಕು. ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ತಾಪಂ ಉಪಾಧ್ಯಕ್ಷ ಬಿ.ಎಸ್‌.ಶಿವಮೂರ್ತಿ, ಬಿಸಿಎಂ ಅಧಿಕಾರಿ ಎರ್ರಿಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಮನ್ವ ಅಧಿಕಾರಿ ಗುರುರಾಜ್‌,ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ವಾಮದೇವ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ರಾಜೇಂದ್ರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next