Advertisement

ಒಳ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ

11:24 AM Oct 10, 2021 | Team Udayavani |

ಮುದ್ದೇಬಿಹಾಳ: ಪಟ್ಟಣದ ಬಸವೇಶ್ವರ ವೃತ್ತದಿಂದ ದ್ಯಾಮವ್ವನ ಕಟ್ಟೆ, ಇಂದಿರಾ ವೃತ್ತ ಮಾರ್ಗವಾಗಿ ಬನಶಂಕರಿ ವೃತ್ತದವರೆಗಿನ ಆಂತರಿಕ ಒಳ ರಸ್ತೆಯನ್ನು ಅಭಿವೃದ್ಧಿ ಮಾಡಲು ಸರ್ಕಾರದಿಂದ 5 ಕೋಟಿ ರೂ ಅನುದಾನ ಬಿಡುಗಡೆ ಆಗಲಿದೆ. ಆ ಅನುದಾನ ಸದ್ಭಳಕೆ ಆಗಬೇಕಾದರೆ ರಸ್ತೆ ಅಭಿವೃದ್ಧಿ ಕಾರ್ಯ ನಿರಾತಂಕವಾಗಿ ನಡೆಯಬೇಕು. ಇದಕ್ಕೆ ರಸ್ತೆ ಅಕ್ಕಪಕ್ಕ ಇರುವ ವ್ಯಾಪಾರಸ್ಥರು, ಅಂಗಡಿಕಾರರು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ನಎ.ಎಸ್. ಪಾಟೀಲ ನಡಹಳ್ಳಿ ಮನವಿ ಮಾಡಿದರು.

Advertisement

ಶನಿವಾರ ಸಂಜೆ ಪಟ್ಟಣದ ಬಸವೇಶ್ವರ ವೃತ್ತದಿಂದ ಮುಖ್ಯ ಬಜಾರ್‌ ರಸ್ತೆ ಅಭಿವೃದ್ಧಿ ಕುರಿತು ಪಿಡಬ್ಲೂಡಿ ಅಧಿಕಾರಿಗಳ ಸಮೇತ ಪರಿಶೀಲನೆ ನಡೆಸಿ ಅಲ್ಲಲ್ಲಿ ಇರುವ ಅಂಗಡಿಕಾರರನ ಜೊತೆ ಮಾತನಾಡಿ ನಂತರ ಕಾಯಿಪಲ್ಯೆ ಮಾರುಕಟ್ಟೆ ಹಿಂಭಾಗದಲ್ಲಿರುವ ಖಾಸ್ಗೇತೇಶ್ವರ ಮಠದಲ್ಲಿ ನಡೆದ ರಸ್ತೆ ಅಕ್ಕಪಕ್ಕ ಇರುವ ಅಂಗಡಿಕಾರರು, ವ್ಯಾಪಾರಸ್ಥರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇದನ್ನೂ ಓದಿ :ಬೆಳೆ ಪರಿಹಾರ: ರೈತರಿಗೆ ಅನ್ಯಾಯವಾಗದಂತೆ ಕ್ರಮ

ತುಂಬಾ ಹಳೆ ಕಾಲದ ರಸ್ತೆ ಇದಾಗಿರುವುದರಿಂದ ಸಾಕಷ್ಟು ಇಕ್ಕಟ್ಟಾಗಿ ಸಂಚಾರ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗತೊಡಗಿದೆ. ಇದನ್ನು ಅಭಿವೃದ್ಧಿ ಮಾಡಿದರೆ ಇಡಿ ಊರು ಸುಂದರವಾಗಿ ಕಾಣುವುದರ ಜೊತೆಗೆ ಸಂಚಾರ ಸಮಸ್ಯೆಯೂ ಬಗೆಹರಿದು ಅಂಗಡಿಕಾರರ ವ್ಯಾಪಾರ, ವ್ಯವಹಾರಕ್ಕೆ ಹೆಚ್ಚು ಅನುಕೂಲ ಆಗಲಿದೆ. ಬಹಳ ವರ್ಷಗಳಿಂದಲೇ ಈ ರಸ್ತೆ ಅಭಿವೃದ್ಧಿ ಕಾಣದೆ ನನೆಗುದಿಗೆ ಬಿದ್ದಿದೆ. ಎಲ್ಲರೂ ಸಹಕಾರ ನೀಡಿದರೆ ಮಾತ್ರ ಸುಂದರವಾಗಿ ಕಾಣುವಂತೆ ರಸ್ತೆ ಅಭಿವೃದ್ಧಿ ಮಾಡಲಾಗುತ್ತದೆ ಎಂದರು.

ರಸ್ತೆಯ ಎರಡೂ ಕಡೆ ಕೆಲವು ಅತಿಕ್ರಮಣ ಇವೆ. ಅವುಗಳನ್ನು ಈ ಮೊದಲೊಮ್ಮೆ ಗುರುತಿಸಲಾಗಿತ್ತು. ಈಗ ಮತ್ತೂಮ್ಮೆ ಪಿಡಬ್ಲೂಡಿ ಇಲಾಖೆಯವರು ಗುರುತು ಮಾಡುತ್ತಾರೆ. ಎಲ್ಲೆಲ್ಲಿ ಅತಿಕ್ರಮಣ ಇದೆಯೋ ಅವನ್ನು ಮೂಲ ಕಟ್ಟಡಕ್ಕೆ ತೊಂದರೆ ಆಗದಂತೆ ತೆರವು ಗೊಳಿಸಲಾಗುತ್ತದೆ. ಪ್ರಾರಂಭದಲ್ಲಿ ಸ್ವಲ್ಪ ಕಷ್ಟ ಅನ್ನಿಸಿದರೂ ಅಭಿವೃದ್ಧಿ ಶುರುವಾದಾಗ ಎಲ್ಲವೂ ಸರಿ ಹೋಗುತ್ತದೆ. ಅಂಗಡಿಕಾರರು, ವ್ಯಾಪಾರಸ್ಥರು ಸಹಕಾರ ಕೊಡಬೇಕು ಎಂದರು.

Advertisement

ಈ ವೇಳೆ ಸ್ಥಳ ಪರಿಶೀಲನೆಗೆ ಬಂದಿದ್ದ ಶಾಸಕರೊಂದಿಗೆ ರಸ್ತೆಯಲ್ಲೇ ಕೆಲ ಅಂಗಡಿಕಾರರು ಮಾತನಾಡಿ, ಅಭಿವೃದ್ಧಿಗೆ ತಮ್ಮ ಬೆಂಬಲ ಸೂಚಿಸಿದರೆ ಮತ್ತೇ ಕೆಲವರು ನಮ್ಮ ಅಂಗಡಿ ಹೋಗುತ್ತವೆ, ಅಂಗಡಿ ಮುಂದಿನ ಟೆರೇಸ್‌ ಹೋಗುತ್ತವೆ ಎಂದೆಲ್ಲ ಅಳಲು ತೋಡಿಕೊಂಡರು.

ಖಾಸ್ಗೇತೇಶ್ವರ ಮಠದಲ್ಲಿ ನಡೆದ ಸಭೆಯಲ್ಲಿ ಬಹಳಷ್ಟು ವ್ಯಾಪಾರಸ್ಥರು ರಸ್ತೆ ಅಭಿವೃದ್ಧಿಗೆ ಸಹಮತ ವ್ಯಕ್ತಪಡಿಸಿದರೂ ಕೆಲವರು ಮಾತ್ರ ಸಾಧಕ ಬಾಧಕಗಳ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಮಾಲಿಕತ್ವದ ಅಂಗಡಿಗಳಿಗೆ ಪರಿಹಾರ ಕೊಡಿಸಬೇಕು ಎಂದೆಲ್ಲ ಹೇಳಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಪಿಎಸೈ ರೇಣುಕಾ ಜಕನೂರ ಮಾತನಾಡಿ, ಅಭಿವೃದ್ಧಿ ಕೆಲಸಕ್ಕೆ ಎಲ್ಲರೂ ಸಹಕಾರ ನೀಡಬೇಕು. ರಸ್ತೆ ಅತಿಕ್ರಮಿಸಿ ಕಟ್ಟಡ ಕಟ್ಟಿಕೊಂಡಿದ್ದರೆ ಅದನ್ನು ಸ್ವ ಇಚ್ಛೆಯಿಂದ ತೆರವುಗೊಳಿಸಿಕೊಂಡು ಸಹಕಾರ ನೀಡಬೇಕು. ಬಲ ಪ್ರದರ್ಶನಕ್ಕೆ ಆಸ್ಪದ ಮಾಡಿಕೊಡಬಾರದು. ಪರಸ್ಪರ ಹೊಂದಾಣಿಕೆ, ಸಮನ್ವಯತೆ ಇದ್ದರೆ ಮಾತ್ರ ರಸ್ತೆ ಅಭಿವೃದ್ಧಿ ಆಗಿ ಸಂಚಾರ ಸೇರಿದಂತೆ ಎಲ್ಲ ಸಮಸ್ಯೆಗಳೂ ಬಗೆಹರಿಯುತ್ತವೆ ಎಂದರು.

ಬಹು ಹೊತ್ತಿನವರೆಗೆ ಚರ್ಚೆ ನಡೆದರೂ ಯಾವುದೇ ಸ್ಪಷ್ಟ ತೀರ್ಮಾನ ಸಭೆಯಲ್ಲಿ ಹೊರ ಹೊಮ್ಮಲಿಲ್ಲ. ಸದ್ಯ ಎಲ್ಲರೂ ಕಾಯ್ದು ನೋಡಲು ತೀರ್ಮಾನಿಸಿದ್ದಾರೆ. ಈ ಕುರಿತು ಇನ್ನೊಂದು ಸುತ್ತಿನ ಚರ್ಚೆ ನಡೆಸಲು ಬಜಾರ ವ್ಯಾಪಾರಸ್ಥರು ತೀರ್ಮಾನಿಸಿದ್ದಾರೆ. ಎಲ್ಲೆಲ್ಲಿ ಕಟ್ಟಡಗಳಿಗೆ ಧಕ್ಕೆ ಆಗುತ್ತದೆ ಎನ್ನುವ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ. ಒಟ್ಟಾರೆ ರಸ್ತೆ ಅಗಲೀಕರಣಗೊಂಡು ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆ ಬಗೆಹರಿದು ಸಂಚಾರ ಸುಗಮಗೊಂಡರೆ ಸಾಕು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿ ಕೇಳಿ ಬಂತು.

Advertisement

Udayavani is now on Telegram. Click here to join our channel and stay updated with the latest news.

Next