ಬೆಂಗಳೂರು: ಸಾರ್ವಜನಿಕ ಕ್ಷೇತ್ರದ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಲಿ., (ಕೆಐಒಸಿಎಲ್) ಪ್ರಸಕ್ತ ಸಾಲಿನ ಹಣಕಾಸು ವರ್ಷದ ಅರ್ಧ ವಾರ್ಷಿಕ ವರದಿಯಲ್ಲಿ ಪೋರ್ಟ್ ಬೇಸ್ಡ್ ಪೆಲೆಟ್ (ಪಿಬಿಟಿ)ನಲ್ಲಿ 59.12 ಕೋಟಿ ರೂ. ಗಳಿಸಿ, 45.89 ಕೋಟಿ ರೂ. ನಿವ್ವಳ (ಪಿಎಟಿ) ಲಾಭ ಗಳಿಸಿದೆ.
ಕಂಪನಿ 2017-18ನೇ ಸಾಲಿನ ಇದೇ ಅವಧಿಯಲ್ಲಿ ಪಿಬಿಟಿ 10.44 ಕೋಟಿ ರೂ. ಹಾಗೂ ಪಿಎಟಿ 8.35 ಕೋಟಿ ರೂ. ಗಳಿಸಿತ್ತು. ಅದಕ್ಕೆ ಹೋಲಿಸಿದ್ದಲ್ಲಿ ಈ ಆರ್ಥಿಕ ವರ್ಷದಲ್ಲಿ ಅತ್ಯಧಿಕ ನಿವ್ವಳ ಲಾಭವನ್ನು ತನ್ನದಾಗಿಸಿಕೊಂಡಿದೆ. ಒಟ್ಟಾರೆ ಕೆಐಒಸಿಎಲ್ ಕಳೆದ 5 ವರ್ಷಗಳಲ್ಲಿ ಈ ಸಾಲಿನ 2ನೇ ತ್ತೈಮಾಸಿಕದಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ವಿ. ಸುಬ್ಟಾರಾವ್ ತಿಳಿಸಿದ್ದಾರೆ.
ಕಂಪನಿ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಲಿಕೊಳ್ಳಲು ಯೋಜನೆ ರೂಪಿಸಿದ್ದು, ಜಾಗತಿಕ ಉಕ್ಕು ಉತ್ಪಾದಕರೊಂದಿಗೆ ಮಾತುಕತೆ ನಡೆಸಿದೆ. ಡಾಲರ್ ಮೌಲ್ಯ ಏರಿಕೆ, ದೇಶಿ ಮಾರುಕಟ್ಟೆಯಲ್ಲಿ ಉಕ್ಕು ಉತ್ಪಾದನೆ ಹೆಚ್ಚಳ ಮತ್ತು ರಫ್ತು ವಹಿವಾಟಿನ ಏರಿಕೆಯಿಂದ ಕಂಪನಿ ಆರ್ಥಿಕವಾಗಿ ಸುಧಾರಣೆಗೊಂಡಿದೆ.
ಈ ಸಾಲಿನಾಂತ್ಯಕ್ಕೆ ಕಂಪನಿಯು ಎಲ್ಲ ಅನುಮೋದಿತ ಯೋಜನೆಗಳನ್ನು ಪೂರ್ಣಗೊಳಿಸಲಿದ್ದು, ಪೆಲೆಟ್ ಪ್ಲಾಂಟ್ ಮತ್ತು ಬ್ಲಾಸ್ಟ್ ಫರೆ°ಸ್ ಘಟಕದ ನಿರ್ಮಾಣ ಕಾರ್ಯ 2 ರಿಂದ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಿ ಕಾರ್ಯನಿರ್ವಹಣೆ ತೊಡಗಿಸಿಕೊಳ್ಳಲಿದೆ.
ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯತ್ತ ಕೆಐಒಸಿಎಲ್ ಸಾಗಿದ್ದು, ಪೆಲೆಟ್ ಉತ್ಪಾದನೆಯಲ್ಲಿ ಆಧುನಿಕತೆ ಅಳವಡಿಸಿಕೊಂಡಿದೆ. ವಿವಿಧ ಮೂಲಗಳಿಂದ ಸತತವಾಗಿ ಕಬ್ಬಿಣ ಅದಿರನ್ನು ಸಂಗ್ರಹಿಸಿ ನಿರಂತರವಾಗಿ ಪೆಲೆಟ್ ಉತ್ಪಾದನೆ ಮಾಡುವ ಮೂಲಕ ಪೆಲೆಟ್ಸ್ ಅನ್ನು ಯೂರೋಪಿಯನ್ ಮಾರುಕಟ್ಟೆಗೆ ಪೂರೈಸುತ್ತಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ಕಂಪನಿ ಕಾರ್ಯ ನಿರ್ವಹಿಸುವ ಮೂಲಕ ಉತ್ತಮ ಸಾಧನೆ ಮಾಡಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.