ದಾವಣಗೆರೆ: ಬೆಲೆ ಬಾಳುವ ವಜ್ರ ಮಾರಾಟ ಮತ್ತು 30 ಕೋಟಿ ಕಪ್ಪುಹಣ ಸಕ್ರಮದ ಸೋಗಲ್ಲಿ ವ್ಯಕ್ತಿಯೊಬ್ಬನಿಗೆ ವಂಚಿಸಿದ ಆರೋಪದಡಿ ದುನಿಯಾ ವಿಜಿ ಅಭಿಮಾನಿಗಳ ಬಳಗದ ರಾಜ್ಯಾಧ್ಯಕ್ಷ, ಹೊನ್ನಾಳಿ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ, ಚಲನಚಿತ್ರ ನಿರ್ಮಾಪಕ
ಸೇರಿ ಮೂವರನ್ನು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ.
ದುನಿಯಾ ವಿಜಿ ಅಭಿಮಾನಿಗಳ ಬಳಗದ ರಾಜ್ಯಾಧ್ಯಕ್ಷ ದೊಡ್ಡೇಶ್, ಹೊನ್ನಾಳಿ ತಾಪಂ ಮಾಜಿ ಉಪಾಧ್ಯಕ್ಷ, ಬೆಳ್ಳಿಬೆಟ್ಟ ಚಿತ್ರ ನಿರ್ಮಾಪಕ ಉತ್ತೇಶ್ ಹಾಗೂ ದಾವಣಗೆರೆ ಎಸ್‌ಎಸ್ ಬಡಾವಣೆ ನಿವಾಸಿ, ಎಚ್‌ಡಿಎಫ್‌ಸಿ ಬ್ಯಾಂಕ್ ಮಾಜಿ ನೌಕರ ಗುರುರಾಜ್ ಬಂಧಿತ ಆರೋಪಿಗಳು. ಬಂಧಿತರಿಂದ 2 ಕಾರು, 2 ಲಕ್ಷ ರೂ. ನಗದು ಸೇರಿ ಒಟ್ಟು 68.66 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್ ತಿಳಿಸಿದ್ದಾರೆ.
ಘಟನೆ ವಿವರ: ಬೆಂಗಳೂರಿನಲ್ಲಿರುವ ಸೆಕ್ಯುರಿಟಿ ಏಜೆನ್ಸಿಯ ತಬರೇಜ್ ಎಂಬುವವರನ್ನು ಸಂಪರ್ಕಿಸಿದ ಆರೋಪಿಗಳು, ತಮ್ಮ ಬಳಿ 30 ಕೋಟಿ ರೂ. ಕಪ್ಪುಹಣ ಇದ್ದು, ಅದನ್ನು ಸಕ್ರಮ ಮಾಡಿ ಕೊಡಬೇಕು, ಜೊತೆಗೆ ಬೆಲೆ ಬಾಳುವ ವಜ್ರ ಖರೀದಿಸಬೇಕು ಎಂದು ಹೇಳಿದ್ದಾರೆ. ಜು.28ರಂದು ತಬರೇಜ್ ರನ್ನು ದಾವಣಗೆರೆಗೆ ಕರೆಸಿಕೊಂಡಿದ್ದಾರೆ. ದಾವಣಗೆರೆಗೆ ಬಂದ ತಬರೇಜ್‌ರನ್ನು ಹುತ್ತೇಶರ ಸ್ವಂತ ಊರಾದ ಹೊನ್ನಾಳಿ ತಾಲೂಕು ಕೆಂಚಿಕೊಪ್ಪ ಗ್ರಾಮಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಹುತ್ತೇಶ್ ಮನೆಯಲ್ಲಿ ಅವರನ್ನು ಮೂರು ದಿನಗಳ ಕಾಲ ಕೂಡಿಹಾಕಿದ್ದಾರೆ. ಆತನ ಬಳಿ ಇದ್ದ 2 ಲಕ್ಷ ರೂ. ಹಾಗೂ ಅವರು ತಂದಿದ್ದ ಬೆಂಜ್ ಕಾರ್ ಕಸಿದುಕೊಂಡಿದ್ದಾರೆ. ನಂತರ ಆತನನ್ನು ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿ-4ಕ್ಕೆ ಕರೆತಂದು ಬೆಂಗಳೂರಿಗೆ ಬಸ್ ಮೂಲಕ ಕಳುಹಿಸಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಒಂದು ವಾರದ ನಂತರ ತಬರೇಜ್ ವಾಪಸ್ ನ್ಯಾಮತಿಗೆ ಬಂದು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದರು. ದೂರು ಆಧರಿಸಿ ತನಿಖೆ ನಡೆಸಿದ ಗ್ರಾಮಾಂತರ ಡಿಎಸ್‌ಪಿ ಮಂಜುನಾಥ ಕೆ. ಗಂಗಲ್, ಹೊನ್ನಾಳಿ ಸಿಪಿಐ ಜೆ. ರಮೇಶ್, ನ್ಯಾಮತಿ ಪಿಎಸ್‌ಐ ಎನ್.ಸಿ. ಕಾಡದೇವರ, ಆ.9ರಂದು ಹೊನ್ನಾಳಿ ತಾಲೂಕು ಕಮ್ಮಾರಗಟ್ಟ ಬಳಿ ಎರಡು ಕಾರ್‌ಗಳನ್ನು ವಶಪಡಿಸಿಕೊಂಡು, ಮೂವರನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಅವರ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಆರೋಪಿಗಳಿಂದ ವಶಪಡಿಸಿಕೊಂಡಿರುವ ಫೋರ್ಡ್ ಇಕೋ ಎಸ್‌ಯುವಿ ಕಾರ್ ಬೇರೆಯವರ ಹೆಸರಲ್ಲಿದೆ. ಇದು ಯಾರದ್ದು ಎಂದು ಪತ್ತೆ ಮಾಡುವಲ್ಲಿ ನಮ್ಮ ತಂಡ ನಿರತವಾಗಿದೆ. ಮೇಲ್ನೋಟಕ್ಕೆ ಈ ಆರೋಪಿಗಳು ಇಂತಹುದ್ದೇ ಕೃತ್ಯ ಇನ್ನು ಹಲವು ಕಡೆ ಮಾಡಿರುವ ಶಂಕೆ ಇದೆ. ಇನ್ನಷ್ಟು ತನಿಖೆ ನಂತರ ಇದು ಗೊತ್ತಾಗಲಿದೆ ಎಂದು ಅವರು ಹೇಳಿದರು. ಪ್ರಕರಣದಲ್ಲಿ ಆರೋಪಿಗಳ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಜಿ. ಶಿವಾನಂದಪ್ಪ, ದೊಡ್ಡಬಸಪ್ಪ, ಎಚ್.ವಿ. ಹರೀಶ, ವೆಂಕಟರಮಣ, ಫೈರೋಜ್ ಖಅನ್, ಪ್ರಕಾಶ್, ರಾಜಶೇಖರ್ ಹೇಮನಾಯ್ಕ, ವಿಜಯ್, ನಾಗರಾಜ, ತಾಂತ್ರಿಕ ವಿಭಾಗದ ರಾಮಚಂದ್ರರಿಗೆ ಇಲಾಖೆಯಿಂದ 10 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ ಎಂದು ಅವರು ತಿಳಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಯಶೋಧ ಎಸ್.ವಂಟಿಗೋಡಿ, ಗ್ರಾಮಾಂತರ ವಿಭಾಗದ ಉಪಾಧೀಕ್ಷಕ ಮಂಜುನಾಥ ಕೆ. ಗಂಗಲ್, ಹೊನ್ನಾಳಿ ಸಿಪಿಐ ಜೆ. ರಮೇಶ, ಪಿಎಸ್‌ಐ ಎನ್.ಸಿ. ಕಾಡದೇವರ ಮಠ ಸುದ್ದಿಗೋಷ್ಠಿಯಲ್ಲಿದ್ದರು.