Advertisement

“ಕಿಂಡಿ ಅಣೆಕಟ್ಟು ಮರುನಿರ್ಮಾಣಕ್ಕೆ 30 ಕೋ.ರೂ.’

11:59 PM Oct 26, 2019 | mahesh |

ಬೆಳ್ತಂಗಡಿ: ಪ್ರವಾಹದಿಂದ ಹಾನಿಯಾಗಿರುವ ಬೆಳ್ತಂಗಡಿ ತಾಲೂಕಿನ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕಿಂಡಿ ಅಣೆಕಟ್ಟುಗಳ ಮರು ನಿರ್ಮಾಣಕ್ಕಾಗಿ 30 ಕೋ.ರೂ.ಗಳನ್ನು ಬಿಡುಗಡೆಗೊಳಿಸಲಾಗಿದ್ದು, ಮಳೆ ನಿಂತ ತತ್‌ಕ್ಷಣ ಕಾಮಗಾರಿ ಆರಂಭದ ಕುರಿತು ಎಂಜಿನಿಯರ್‌ಗಳ ಜತೆ ಚರ್ಚಿಸಲಾಗುವುದು ಎಂದು ರಾಜ್ಯ ಕಾನೂನು ಮತ್ತು ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

Advertisement

ಅವರು ಶನಿವಾರ ಇಲ್ಲಿನ ಕುಕ್ಕಾವು ಮತ್ತು ಚಾರ್ಮಾಡಿ ಗ್ರಾಮದ ಅರಣೆಪಾದೆ, ಪರ್ಲಾಣಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪತ್ರಕರ್ತರ ಜತೆ ಮಾತನಾಡಿದರು. ನದಿ ಪಾತ್ರಗಳ ಪ್ರದೇಶದಲ್ಲಿ ಕೆಲವೊಂದೆಡೆ ಕೃಷಿ ತೋಟಗಳಿಗೆ ನೀರು ನುಗ್ಗದಂತೆ ತಡೆಗೋಡೆ ನಿರ್ಮಾಣಕ್ಕೆ ಶಾಸಕರಿಂದ ಮನವಿ ಬಂದಿದೆ. ಈ ಕುರಿತು ಅಧ್ಯಯನ ನಡೆಸಲು ಐಐಎಸ್‌ಸಿಯ ಶ್ರೀನಿವಾಸ್‌ ಅವರನ್ನು ಕಳುಹಿಸಿ ಅವರು ನೀಡಿದ ವರದಿಯ ಆಧಾರದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಅಂತರ ಪ್ರದೇಶದಲ್ಲಿ ಸುಮಾರು 100 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಕಾಲುವೆ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು, ಅದರ ದುರಸ್ತಿಗಾಗಿ ಕ್ರಿಯಾಯೋಜನೆ ತಯಾರಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದೇವೆ ಎಂದರು.

ನದಿಗಳ ಹೂಳು ತೆಗೆಯುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ನದಿಯಿಂದ ತೆಗೆದ ಹೂಳುಗಳನ್ನು ಏನು ಮಾಡಬಹುದು ಎಂಬ ಸಮಸ್ಯೆಯೂ ಎದುರಾಗುತ್ತದೆ. ಕಿಂಡಿ ಅಣೆಕಟ್ಟು, ಸೇತುವೆ, ರಸ್ತೆ ಅಥವಾ ಇನ್ನಿತರ ನಿರ್ಮಾಣಗಳಿಗೆ ಹಾನಿಯಾಗಿದ್ದರೆ ಅವುಗಳನ್ನು ಮಳೆ ನಿಂತ ತತ್‌ಕ್ಷಣ ಆದ್ಯತೆಯ ಮೇಲೆ ಮರು ನಿರ್ಮಾಣಗೊಳಿಸಲಾಗುತ್ತದೆ. ಸಂಪರ್ಕ ಕಡಿತದ ಭೀತಿ ಇದ್ದರೆ ಮರುಸಂಪರ್ಕಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಜತೆಗೆ ವಿದ್ಯುತ್‌ ಸಂಪರ್ಕಕ್ಕೂ ಸೂಚನೆ ನೀಡಲಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಸಂಪುಟದ ಸಭೆಯಲ್ಲಿ ಚರ್ಚೆ ಮಾಡುವಂತೆ ಮುಖ್ಯಮಂತ್ರಿ ಎಲ್ಲ ಸಚಿವರುಗಳಿಗೆ ಸೂಚನೆ ನೀಡಿದ್ದಾರೆ. ಸಂಭವಿಸಿದ ಅನಾಹುತ ಮತ್ತು ಜನರಿಗೆ ಬೇಕಾದ ನೆರವಿನ ಬಗ್ಗೆ ಸಭೆಯಲ್ಲಿ ಅಭಿಪ್ರಾಯ ತಿಳಿಸುತ್ತೇವೆ ಎಂದು ಸಚಿವರು ತಿಳಿಸಿದರು.

Advertisement

ಶಾಸಕರ ಕಾರ್ಯಕ್ಕೆ ಮೆಚ್ಚುಗೆ
ತಾಲೂಕಿನ ಪ್ರವಾಹ ಪರಿಸ್ಥಿತಿ ಮತ್ತು ಪರಿಹಾರ ಕಾರ್ಯಗಳ ಕುರಿತು ಶಾಸಕರ ಪ್ರಯತ್ನಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರವಾಹದ ತೊಂದರೆಗಳ ಕುರಿತು ಸಂತ್ರಸ್ತರು ಸಚಿವರಲ್ಲಿ ವಿವರಿಸಿದರು.

ಸಚಿವರ ಜತೆ ತಹಶೀಲ್ದಾರ್‌ ಗಣಪತಿ ಶಾಸ್ತ್ರಿ, ಸಣ್ಣ ನೀರಾವರಿ ಇಲಾಖೆಯ ಸರಕಾರದ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಅಧೀಕ್ಷಕ ಎಂಜಿನಿಯರ್‌ ರಾಜಶೇಖರ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೃಷ್ಣ ಕುಮಾರ್‌, ಸಹಾಯಕ ಎಂಜಿನಿಯರ್‌ಗಳಾದ ಪ್ರಸನ್ನ ಮತ್ತು ಶಿವಪ್ರಸನ್ನ, ಕಿರಿಯ ಎಂಜಿನಿಯರ್‌ ರಾಕೇಶ್‌, ತಾ.ಪಂ. ಇಒ ಕೆ.ಇ. ಜಯರಾಂ ಇದ್ದರು.

ಜಿ.ಪಂ. ಸದಸ್ಯೆ ಸೌಮ್ಯಲತಾ, ತಾ.ಪಂ. ಸದಸ್ಯ ಕೊರಗಪ್ಪ ಗೌಡ ಅರಣಪಾದೆ, ಚಾರ್ಮಾಡಿ ಗ್ರಾ.ಪಂ. ಅಧ್ಯಕ್ಷೆ ಶೈಲಜಾ, ಪಿಡಿಒಗಳಾದ ಪ್ರಕಾಶ್‌ ಶೆಟ್ಟಿ, ಜಯಕೀರ್ತಿ ಎಚ್‌.ಬಿ., ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next