ದಾವಣಗೆರೆ: ಮನೆಗಳ್ಳತನ ಮಾಡುವುದು, ಜೈಲಿಗೆ ಹೋಗುವುದು, ಜಾಮೀನು ಪಡೆದು ಹೊರ ಬಂದ ನಂತರ ಮತ್ತೆ ಅದೇ ಕಳ್ಳತನದಲ್ಲಿ ತೊಡಗುತ್ತಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಹರಪನಹಳ್ಳಿ ತಾಲೂಕಿನ ಹಲವಾಗಲು ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದ ಬಿ. ಶಿವಕುಮಾರ ಅಲಿಯಾಸ್ ಗಿರೀಶ್ ಬಂಧಿತ ಆರೋಪಿ. ಕಳ್ಳತನದ 9 ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಕೊಪ್ಪಳ ಜಿಲ್ಲೆ ಮುನಿರಾಬಾದ್‌ನಲ್ಲಿ ಫೆಬ್ರವರಿಯಲ್ಲಿ ನಡೆಸಿದ ಕಳ್ಳತನ ಸಂಬಂಧ ಜೈಲಿಗೆ ಹೋಗಿ,
ಜಾಮೀನು ಮೇಲೆ ಹೊರ ಬಂದ 15 ದಿನದಲ್ಲಿ ಹರಪನಹಳ್ಳಿ ತಾಲೂಕಿನಹಲವಾಗಲು ಗ್ರಾಮದ ಎಂ. ಲಿಂಗರಾಜ್ ಎಂಬುವರ ಮನೆ, ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಚಟನಹಳ್ಳಿ ಗ್ರಾಮದ ಮನೆಯಲ್ಲಿ ಕಳ್ಳತನ ಮಾಡಿದ್ದ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದ ಎಂ. ಲಿಂಗರಾಜ್ ಎಂಬುವರ ಮನೆ ಬೀಗ ಒಡೆದು ಒಟ್ಟು 65.6 ಗ್ರಾಂ ಬಂಗಾರ, 210 ಗ್ರಾಂ ಬೆಳ್ಳಿ ವಸ್ತುಗಳು, 45 ಸಾವಿರ ನಗದು ದೋಚಿದ್ದರು. ಪ್ರಕರಣ ಪತ್ತೆಗಾಗಿ ರಚಿಸಿದ್ದ ವಿಶೇಷ ತಂಡ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಹಲವಾಗಲು, ಕೆಂಚಟನಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 2.59 ಲಕ್ಷ ಮೌಲ್ಯದ ಒಟ್ಟು 98.6 ಗ್ರಾಂ ಬಂಗಾರ, 314 ಗ್ರಾಂ ಬೆಳ್ಳಿಯ ಆಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಜೈಲಿನಿಂದ ಹೊರ ಬರದಂತೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ಅಧೀಕ್ಷಕಿ ಯಶೋಧಾ ಎಸ್. ವಂಟಿಗೋಡಿ, ಹರಪನಹಳ್ಳಿ ಡಿವೈಎಸ್ಪಿ ಎಂ. ಪಾಂಡುರಂಗಯ್ಯ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಡಿ. ದುರುಗಪ್ಪ, ಹಲವಾಗಲು ಪಿಎಸ್‌ಐ ಎಂ.ಬಿ. ಸಣ್ಣನಿಂಗಣ್ಣನವರ್, ಸಿಬ್ಬಂದಿಗಳಾದ ಯು. ಮಾರುತಿ, ಸಿ.ಮಲ್ಲಿಕಾರ್ಜುನ, ನಾಗರಾಜ ಸುಣಗಾರ್,
ರಮೇಶ್ ನಾಯ್ಕ, ಪ್ರಹ್ಲಾದನಾಯ್ಕ, ಜಗದೀಶ, ಮಲ್ಲೇಶನಾಯ್ಕ, ಹನುಮಂತಪ್ಪ ಕಳ್ಳನನ್ನು ಬಂಧಿಸಿದ್ದಾರೆ. ಸೂಕ್ತ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು. ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್. ನೇಮೇಗೌಡ, ವೃತ್ತ ನಿರೀಕ್ಷಕ ಡಿ. ದುರುಗಪ್ಪ ಸುದ್ದಿಗೋಷ್ಠಿಯಲ್ಲಿ ಇದ್ದರು.