Advertisement

ಅಂಕತ್ತಡ್ಕ-ಮಂಜುನಾಥನಗರ ರಸ್ತೆಗೆ 2 ಕೋಟಿ ರೂ. ಮಂಜೂರು

04:14 AM Jan 31, 2019 | Team Udayavani |

ಸವಣೂರು: ಬೆಳಂದೂರು ಜಿ.ಪಂ. ವ್ಯಾಪ್ತಿಯ ಸವಣೂರು ಗ್ರಾ.ಪಂ.ಗೆ ಒಳಪಟ್ಟ ಅಂಕತ್ತಡ್ಕ-ಬಂಬಿಲ-ಮಂಜುನಾಥನಗರ ಸಂಪರ್ಕ ರಸ್ತೆ ಅಭಿವೃದ್ಧಿಗೆ ಕೊನೆಗೂ ದಿನ ಕೂಡಿ ಬಂದಿದೆ.

Advertisement

ಈ ರಸ್ತೆಯ ಅಭಿವೃದ್ಧ್ದಿಗೆ ಲೋಕೋಪಯೋಗಿ ಇಲಾಖೆ ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯ ಎಂಜಿನಿಯರ್‌ ಅವರು ಟೆಂಡರ್‌ ಪ್ರಕಟನೆ ನೀಡಿದ್ದು, ಈ ರಸ್ತೆಗೆ 2 ಕೋಟಿ ರೂ. ಅನುದಾನದ ಕಾಮಗಾರಿ ನಡೆಯಲಿದೆ.

ಪಾಲ್ತಾಡಿ ಗ್ರಾಮದ ಮಂಜುನಾಥನಗರ- ಅಂಕತ್ತಡ್ಕ ಸಂಪರ್ಕಿಸುವ ಈ ರಸ್ತೆಯು ಇಂಗುಗುಂಡಿಯಂತಹ ಹೊಂಡಗಳಿಂದ ಆವೃತ್ತ ವಾಗಿದ್ದು, ಸುಗಮ ಸಂಚಾರಕ್ಕೆ ಅಡಚಣೆಯಾಗಿತ್ತು. ಈ ರಸ್ತೆಯನ್ನು ಬೆಳ್ಳಾರೆ, ಮಾಡಾವು, ಕುಂಬ್ರ ಪೇಟೆ ಹಾಗೂ ಅಂಕತ್ತಡ್ಕ ಭಾಗದವರು ಸವಣೂರು ಸಂಪರ್ಕಿಸಲು ಉಪಯೋಗಿಸಲಾಗುತ್ತಿದೆ.

ತಾತ್ಕಾಲಿಕ ದುರಸ್ತಿಯಲ್ಲೇ ತೃಪ್ತಿ
ಮಳೆಗಾಲದಲ್ಲಿ ಈ ರಸ್ತೆ ಸಂಪೂರ್ಣ ಹದೆಗೆಟ್ಟು ಸಂಚರಿಸುವುದೇ ಕಷ್ಟಕರವಾದ ಪರಿಸ್ಥಿತಿ ಉದ್ಭವಿಸುತ್ತಿತ್ತು. ಪ್ರತೀ ಬಾರಿಯೂ ಮಳೆಗಾಲದಲ್ಲಿ ಊರಿನ ಪ್ರಮುಖರು ಸೇರಿಕೊಂಡು ತಮ್ಮ ಸ್ವಂತ ಖರ್ಚಿನಲ್ಲಿ ಕೆಂಪು ಕಲ್ಲು, ದಪ್ಪ ಮರಳು ತಂದು ಹೊಂಡ ಮುಚ್ಚಿಸಿ ರಸ್ತೆ ದುರಸ್ತಿಪಡಿಸುವ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದರು. ಈ ಬಾರಿ ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ. ಅವರ ಮುಂದಾಳತ್ವದಲ್ಲಿ ದುರಸ್ತಿ ಮಾಡಲಾಗಿತ್ತು.

ಸಂಸದರ ಶಿಫಾರಸು, ಶಾಸಕರ ಮುತುವರ್ಜಿ
ಈ ಭಾಗದ ಪ್ರಮುಖರ ಹಾಗೂ ಸಾರ್ವಜನಿಕರ ಬೇಡಿಕೆಯಂತೆ ಸಂಸದ ನಳಿನ್‌ ಕುಮಾರ್‌ ಅವರ ಶಿಫಾರಸಿನಂತೆ ಶಾಸಕ ಎಸ್‌. ಅಂಗಾರ ಅವರು 2 ಕೋಟಿ ರೂ. ಅನುದಾನವನ್ನು ಲೋಕೋಪಯೋಗಿ ಇಲಾಖೆಯ ಮೂಲಕ ಬಿಡುಗಡೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಪ್ರಧಾನ ಮಂತ್ರಿ ಗ್ರಾಮ ಸಡಕ್‌
ಅಂಕತ್ತಡ್ಕದಿಂದ ಬೇರಿಕೆ ತಿರುವಿನ ವರೆಗೆ ಈ ಹಿಂದೆ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಗ್ರಾಮ ಸಡಕ್‌ ಯೋಜನೆಯಲ್ಲಿ ಡಾಮರು ಕಾಮಗಾರಿ ನಡೆಸಲಾಗಿತ್ತು. ಬಂಬಿಲ ಕ್ರಾಸ್‌ನಿಂದ ಮಂಜುನಾಥನಗರದವರೆಗೆ ಸುವರ್ಣ ಗ್ರಾಮ ಯೋಜನೆ, ಸಂಸದರ ಅನುದಾನದಲ್ಲಿ ಡಾಮರು ಹಾಕಲಾಗಿತ್ತು. ಬೇರಿಕೆ ತಿರುವಿನಿಂದ ಮಂಜುನಾಥನಗರದವರೆಗಿನ ರಸ್ತೆ ಡಾಮರು ಕಾಣದೆ ಹಾಗೆಯೇ ಉಳಿದುಕೊಂಡಿತ್ತು. ಇದೀಗ ಅನುದಾನ ಬಿಡುಗಡೆಗೊಂಡಿದೆ. ಟೆಂಡರ್‌ ಪ್ರಕ್ರಿಯೆ ನಡೆದ ಬಳಿಕ 6 ತಿಂಗಳೊಳಗೆ ಈ ರಸ್ತೆ ಅಭಿವೃದ್ಧಿಯಾಗಲಿದೆ.

ಬಸ್‌ ಸಂಚಾರಕ್ಕೆ ಬೇಡಿಕೆ
ಈ ರಸ್ತೆಯಲ್ಲಿ ಸರಕಾರಿ ಬಸ್‌ ಓಡಿಸುವಂತೆ ಈ ಹಿಂದಿನಿಂದಲೂ ಬೇಡಿಕೆ ಸಾರ್ವಜನಿಕ ವಲಯ ದಿಂದ ಕೇಳಿಬಂದಿತ್ತು. ಬಳಿಕ ಗ್ರಾ.ಪಂ. ಮೂಲಕ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿಗೂ ಮನವಿ ಮಾಡಲಾಗಿತ್ತು. ರಸ್ತೆಯ ಅವ್ಯವಸ್ಥೆಯಿಂದಾಗಿ ಬಸ್‌ ಓಡಾಟಕ್ಕೆ ಕಷ್ಟಕರವಾಗುವ ಸಾಧ್ಯತೆಯಿಂದ ಈ ಭಾಗದಲ್ಲಿ ಬಸ್‌ ಓಡಾಟ ಪ್ರಕ್ರಿಯೆಗೆ ಚಾಲನೆ ಸಿಕ್ಕಿರಲಿಲ್ಲ. ಇನ್ನು ರಸ್ತೆ ಅಭಿವೃದ್ಧಿಯಾದರೆ ಬಸ್‌ ಸಂಚಾರದ ಬೇಡಿಕೆಗೆ ಪುಷ್ಠಿ ಸಿಗಲಿದೆ.

ಟೆಂಡರ್‌ ಪ್ರಕ್ರಿಯೆ ಬಳಿಕ ಕಾಮಗಾರಿ
ಅಂಕತ್ತಡ್ಕ-ಮಂಜುನಾಥನಗರ ರಸ್ತೆಗೆ 2 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಟೆಂಡರ್‌ ಪ್ರಕಟನೆ ನೀಡಲಾಗಿದೆ ಮಾರ್ಚ್‌ ಅಂತ್ಯಕ್ಕೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಬಳಿಕ 6 ತಿಂಗಳೊಳಗೆ ಕಾಮಗಾರಿ ಮುಗಿಯಲಿದೆ. ಸುಳ್ಯ ಕ್ಷೇತ್ರವೂ ಹೆಚ್ಚು ವಿಸ್ತೀರ್ಣ ಹೊಂದಿದ್ದು, ಎಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಪ್ರಯತ್ನ ಮಾಡಲಾಗುತ್ತಿದೆ. 
– ಎಸ್‌. ಅಂಗಾರ
ಶಾಸಕರು, ಸುಳ್ಯ

ಜನಪ್ರತಿನಿಧಿಗಳ ಶ್ರಮ: ಅಭಿನಂದನಾರ್ಹ
ಅಂಕತ್ತಡ್ಕ-ಮಂಜುನಾಥನಗರ ರಸ್ತೆಗೆ 2 ಕೋಟಿ ಅನುದಾನ ಬಿಡುಗಡೆಯಾಗುವ ಮೂಲಕ ಬಹುವರ್ಷಗಳ ಬೇಡಿಕೆ ಈಡೇರಿದೆ. ಹಲವು ವರ್ಷಗಳಿಂದ ಈ ಕುರಿತು ಪ್ರಯತ್ನಿಸಲಾಗಿದೆ. ಅನುದಾನ ಮಂಜೂರುಗೊಳ್ಳುವಲ್ಲಿ ಗ್ರಾ.ಪಂ.ನಿಂದ ಸಂಸದರವರೆಗೂ ಸಾಕಷ್ಟು ಶ್ರಮ ವಹಿಸಿದ್ದಾರೆ. ಅವರೆಲ್ಲರೂ ಅಭಿನಂದನಾರ್ಹರು. 
 – ಬಿ.ಕೆ. ರಮೇಶ್‌ಸ್ಥಾಪಕಾಧ್ಯಕ್ಷರು,
ಭಾರತಿ ಗ್ರಾಮ ವಿಕಾಸ ಪ್ರತಿಷ್ಠಾನ, ಪಾಲ್ತಾಡಿ

ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next