Advertisement

ನಗರಸಭೆಗೆ ಹೆಚ್ಚಿದ 16 ಲಕ್ಷ ರೂ. ಆದಾಯ

04:13 PM Oct 26, 2018 | |

ಕಾರವಾರ: ನಗರದಲ್ಲಿ ಒಳ ಚರಂಡಿ ವ್ಯವಸ್ಥೆಗೆ ಮನೆ ಮತ್ತು ಅಪಾರ್ಟಮೆಂಟ್‌ಗಳ ಕೊಳಚೆ ನೀರು ಸಂಪರ್ಕದ ವ್ಯವಸ್ಥೆ ಬಹುತೇಕ ಅನಧಿಕೃತವಾಗಿ ನಡೆಯುತ್ತಿತ್ತು. ಜೊತೆಗೆ ನಗರಸಭೆಗೆ ಬರಬೇಕಾದ ಆದಾಯವೂ ನಷ್ಟವಾಗುತ್ತಿತ್ತು. ಒಳ ಚರಂಡಿಗೆ ಮನೆಗಳ ಮತ್ತು ಅಪಾರ್ಟಮೆಂಟ್‌ಗಳ ಅಕ್ರಮ ಸಂಪರ್ಕಕ್ಕೆ ಕಡಿವಾಣ ಹಾಕಿ ಸಕ್ರಮಾತಿ ಮಾಡುವ ಅಭಿಯಾನವನ್ನು ನಗರಸಭೆ ಜಾರಿ ಮಾಡಿದ ನಂತರ ಅದಕ್ಕೆ ಹೊಸ ರೂಪ ಬಂದಿದ್ದು, ಈತನಕ 1138 ಸಂಪರ್ಕಗಳು ಅಧಿಕೃತವಾಗಿವೆ. ಇದರ ಪರಿಣಾಮ ನಗರಸಭೆಗೆ 15 ಲಕ್ಷ ರೂ. ಆದಾಯ ಬಂದಿದೆ.

Advertisement

ಪೌರಾಯುಕ್ತರಾಗಿ ಎಸ್‌. ಯೋಗೇಶ್ವರ ಕಾರವಾರ ನಗರಸಭೆಗೆ ಬರುವ ಮುನ್ನ ನಗರದ ಒಳ ಚರಂಡಿ ವ್ಯವಸ್ಥೆಗೆ ಕೇವಲ 224 ಅಧಿಕೃತ ಸಂಪರ್ಕಗಳಿದ್ದವು. ಇದರಲ್ಲಿ ಕೆಲ ಹೋಟೆಲ್‌ ಮತ್ತು ವಸತಿ ಗೃಹಗಳು, ಮನೆಗಳು ಮಾತ್ರ ಅಧಿಕೃತವಾಗಿ ನಗರಸಭೆಗೆ 2500 ಶುಲ್ಕ ತುಂಬಿ ಒಳಚರಂಡಿಗೆ ಸಂಪರ್ಕ ಪಡೆದಿದ್ದವು. ಸಾವಿರಕ್ಕೂ ಹೆಚ್ಚು ಮನೆಗಳು, ಕೆಲ ಅಪಾರ್ಟಮೆಂಟ್‌ಗಳ ನಿವಾಸಿಗಳು ಅಕ್ರಮವಾಗಿ ಕೊಳಚೆ ನೀರು ಬಿಡುತ್ತಿದ್ದವು. ಜೊತೆಗೆ ಒಳ ಚರಂಡಿ ವ್ಯವಸ್ಥೆ ಸರಿಯಿಲ್ಲ ಎಂಬ ಆಪಾದನೆ ಕೇಳಿ ಬರುತ್ತಿತ್ತು. ಒಳ ಚರಂಡಿ ವ್ಯವಸ್ಥೆಯನ್ನೇ ನಗರಸಭೆಗೆ ಹಸ್ತಾಂತರ ಮಾಡಿಕೊಳ್ಳುವುದು ಬೇಡ. ಕೆಯುಐಡಿಎಫ್‌ಸಿ ಯೋಜನೆ ವಿಫಲವಾಗಿದೆ. ಅವರು ಅದರ ನಿರ್ವಹಣೆ ಮಾಡುತ್ತಿಲ್ಲ ಎಂಬ ಆಪಾದನೆ ಜೋರಾಗಿಯೇ ಇತ್ತು. ಆದರೆ ಇದರ ಆಂತರ್ಯದ ಮರ್ಮವೇ ಬೇರೆಯಾಗಿತ್ತು. ಕೆಲ ಅಪಾರ್ಟಮೆಂಟ್‌ಗಳ ನಿವಾಸಿಗಳಿಗೆ ನೊಟೀಸ್‌ ನೀಡಿ, ಒಳಚರಂಡಿ ವ್ಯವಸ್ಥೆ ಸಂಪರ್ಕ ಕಡಿತ ಮಾಡುವ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿರಲಿಲ್ಲ. ಈ ಮಧ್ಯೆ ಕೆಯುಐಡಿಎಫ್‌ ಸಿಯಿಂದ ಒಳಚರಂಡಿ ವ್ಯವಸ್ಥೆಯನ್ನು ನಗರಸಭೆ ಹಸ್ತಾಂತರ ಮಾಡಿಕೊಂಡು, ಅದನ್ನು ನಿರ್ವಹಣೆ ಸಹ ಮಾಡುತ್ತಾ ಬಂದಿತ್ತು. 

ಆದರೆ ಒಳಚರಂಡಿ ವ್ಯವಸ್ಥೆಯಿಂದ ಆದಾಯ ಮಾತ್ರ ಖೋತಾ ಆಗುತ್ತಿತ್ತು. ಇದನ್ನು ಮನಗಂಡ ಜಿಲ್ಲಾಧಿಕಾರಿ ಮತ್ತು ಪೌರಾಯುಕ್ತರು ಒಳಚರಂಡಿ ವ್ಯವಸ್ಥೆ ಸಂಪರ್ಕದ ಸಕ್ರಮ ಅಭಿಯಾನ ಆರಂಭಿಸಿದರು. ನಗರಸಭೆ ಪರಿಸರ, ಎಂಜಿನಿಯರಿಂಗ್‌, ಪೌರಕಾರ್ಮಿಕರ ವಿಭಾಗ ಅಕ್ರಮ ಸಂಪರ್ಕ ಪತ್ತೆ ಹಚ್ಚಿದವು. ಇವುಗಳಿಗೆ 5 ಸಾವಿರ ರೂ. ದಂಡ ಹಾಕಿದರು. ಅಕ್ರಮ ಸಂಪರ್ಕ ಕಡಿತ ಮಾಡಿ ಅಪಾರ್ಟಮೆಂಟ್‌ ನಿವಾಸಿಗಳಿಗೆ ಎಚ್ಚರಿಕೆ ನೀಡಿದರು. ತತ್ಪರಿಣಾಮ 464 ಸಂಪರ್ಕ ಸಂಖ್ಯೆ ಕಂಡು ಬಂತು. ಇದನ್ನು ಸರಿ ಹಾದಿಗೆ ತರಲು ಸೆಪ್ಟೆಂಬರ್‌ನಲ್ಲಿ ಬಿಗಿ ಕ್ರಮ ಕೈಗೊಂಡ ಪರಿಣಾಮ ಒಳಚರಂಡಿಗೆ ಮನೆ ಮತ್ತು ಅಪಾರ್ಟಮೆಂಟ್‌, ಹೋಟೆಲ್‌, ವಸತಿ ಗೃಹಗಳ ಸಕ್ರಮಾತಿಗೆ ಮುಂದಾದವು.

ಅಕ್ಟೋಬರ್‌ ಮೂರನೇ ವಾರ ಮುಗಿಯುವ ಹೊತ್ತಿಗೆ ನಗರದಲ್ಲಿ ಒಳಚರಂಡಿ ವ್ಯವಸ್ಥೆಗೆ ಸಂಪರ್ಕ ಪಡೆದವರ ಸಂಖ್ಯೆ 1138 ತಲುಪಿದೆ. ಇದರ ಪರಿಣಾಮ ನಗರಸಭೆಗೆ 16 ಲಕ್ಷ ರೂ. ಆದಾಯವೂ ಸಂದಾಯವಾಗಿದೆ. ಇನ್ನು ಸಹ ಒಳಚರಂಡಿಗೆ ಸಕ್ರಮಾತಿ ಪಡೆಯಲು ಜನರು ಅರ್ಜಿ ಸಲ್ಲಿಸುತ್ತಿದ್ದುಮ ಇನ್ನಷ್ಟು ಆದಾಯ ಬರಲಿದೆ. ಇದರಿಂದ ಕೊಳಚೆ ನಿರ್ವಹಣೆ ಸಹ ಉತ್ತಮವಾಗಲಿದೆ. ನಗರದಲ್ಲಿ 789 ಮ್ಯಾನ್‌ ಹೋಲ್‌ಗ‌ಳಿದ್ದು, ಅವುಗಳನ್ನು ಸಹ ನಿರ್ವಹಿಸಲು ಇದೀಗ ದಾರಿ ಸುಲಭವಾಗಿದೆ.

ಕೋಣೆನಾಲ ನಿರ್ವಹಣೆಗೆ 15 ಲಕ್ಷ: ಕೋಣೆನಾಲ ನಿರ್ವಹಣೆಗೆ 20 ಲಕ್ಷ ರೂ. ಯೋಜನೆ ರೂಪಿಸಿದ್ದು, 5 ವರ್ಷ ಸತತ ನಿರ್ವಹಣೆಯ ಜೊತೆಗೆ ಕೊಳಚೆಯ ಹೂಳನ್ನು ಆಗಾಗ ತೆಗೆಸಲು ಯೋಜನೆ ರೂಪುಗೊಳ್ಳುತ್ತಿದೆ. ಕೋಣೆನಾಲಾವನ್ನು ಸಮಪರ್ಕವಾಗಿ ಮತ್ತು ನಿರಂತರವಾಗಿ ಅದನ್ನು ಸುಸ್ಥಿತಿಯಲ್ಲಿ ಇಡಲು ನಗರಸಭೆ ವೈಜ್ಞಾನಿಕ ಕ್ರಮಗಳಿಗೆ ಮುಂದಾಗಿದೆ.

Advertisement

ಕುಡಿವ ನೀರಿನ ಬಿಲ್‌ ಪಾವತಿಗೆ ಕ್ರಮ: ನಗರದಲ್ಲಿ ಕುಡಿವ ನೀರು ಒದಗಿಸುತ್ತಿದ್ದರೂ ಬಿಲ್‌ ಪಾವತಿಗೆ ನಿರ್ಧಿಷ್ಟ ವ್ಯವಸ್ಥೆ ಇರಲಿಲ್ಲ. ಬಿಲ್‌ ಕೊಡುವವರು ಸಹ ಇರಲಿಲ್ಲ. ಈಗ ಕುಡಿಯುವ ನೀರಿನ ಬಿಲ್‌ ವಸೂಲಾತಿಗೆ ಕಂಪ್ಯೂಟರ್‌ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮನೆಗೆ ಬಿಲ್‌ ನೀಡಲಾಗುತ್ತಿದೆ. ತಿಂಗಳ ಬಿಲ್‌ ಪಾವತಿಯನ್ನು ನಗರಸಭೆಯಲ್ಲಿ ದೃಢೀಕರಿಸಿಕೊಂಡು ಬ್ಯಾಂಕ್‌ಗೆ ಹಣ ಪಾವತಿ ವ್ಯವಸ್ಥೆ ಇದೆ.

ತೆರಿಗೆ ವಸೂಲಿ ಪದ್ಧತಿ ಸುಧಾರಣೆ: ತೆರಿಗೆ ವಸೂಲಾತಿ ಪದ್ಧತಿ ಸುಧಾರಿಸಲಾಗಿದೆ. ನ್ಯೂ ಕೆಎಚ್‌ಬಿ ಕಾಲೊನಿಯ ಬಹುತೇಕ ಮನೆಗಳಿಗೆ ನಗರಸಭೆಯ ಮನೆ ನಂಬರ್‌ ಇಲ್ಲ. ಪ್ರತಿ ಮನೆಗೆ ನಂಬರ್‌ ನೀಡುವ ಅಭಿಯಾನ ನವೆಂವರ್‌ನಿಂದ ಪ್ರಾರಂಭವಾಗಲಿದೆ. ನಗರಸಭೆ ಅಧಿ ಕಾರಿಗಳು ಖುದ್ದಾಗಿ ಬಂದು ಮನೆ ನಂಬರ್‌ ನೀಡಲಿದ್ದಾರೆ. ಈಗ ತೆರಿಗೆ ಕಟ್ಟಿದ ಮಾಹಿತಿ, ಸೈಟ್‌ ಸಂಖ್ಯೆ ದಾಖಲಿಸಿಕೊಂಡು, ಕೆಎಚ್‌ಬಿ ನಗರಸಭೆಗೆ ಹಸ್ತಾಂತರವಾದ ದಿನದಿಂದ ತೆರಿಗೆ ಸಂಗ್ರಹಿಸುವ ಬಗ್ಗೆ ನಿರ್ಧಾರವಾಗಬೇಕಿದೆ. ಇಲ್ಲವೇ ಮನೆ ನಿರ್ಮಾಣದ ವರ್ಷದಿಂದ ತೆರಿಗೆ ಸಂಗ್ರಹಿಸಬೇಕೇ? ಎಂಬುದನ್ನು ಸದ್ಯವೇ ನಿರ್ಧರಿಸುವ ಸಾಧ್ಯತೆ ಇದೆ. ಈ ಅಂಶ ನಿರ್ಣಯದ ನಂತರ ನ್ಯೂ ಕೆಎಚ್‌ಬಿ ಪ್ರತಿ ಮನೆಗೆ ನಗರಸಭೆಯ ನಂಬರ್‌ ನೀಡಲಿದೆ. ಮನೆ ಮನೆಗೆ ತೆರಿಗೆ ಬಾಕಿ ಇದ್ದರೆ ಅದನ್ನು ತಿಳಿಸಿ, ತೆರಿಗೆ ಪಾವತಿಗೆ ವಿನಂತಿಸುವ ಅಭಿಯಾನ ಇದಾಗಿದ್ದು, ನಗರಸಭೆಯನ್ನು ಆರ್ಥಿಕ ಸುಸ್ಥಿರತೆಯತ್ತ ಒಯ್ಯಲು ಪ್ರಯತ್ನಗಳು ಸಾಗಿವೆ.

ನಗರಸಭೆ ಜನರಿಗೆ ಮೂಲ ಸೌಕರ್ಯ ನೀಡಲು ಬದ್ಧವಿದೆ. ಹಾಗೆಯೇ ಜನತೆ ಸಹ ತೆರಿಗೆ ಕಟ್ಟಬೇಕು. ಒಳಚರಂಡಿ ವ್ಯವಸ್ಥೆ ಸಂಪರ್ಕ ಸಕ್ರಮ ಮಾಡಿಕೊಳ್ಳಬೇಕು. ನಗರವನ್ನು ಸ್ವಚ್ಛವಾಗಿಡಲು ಮತ್ತು ಅಕ್ರಮವಾಗಿರುವ ಕೆಲ ಅಂಶಗಳನ್ನು ಸಕ್ರಮ ಮಾಡಿ, ಸುಧಾರಣೆಯತ್ತ ನಗರಸಭೆಯನ್ನು ಕೊಂಡಯ್ಯಲು ಪ್ರಯತ್ನ ಸಾಗಿದೆ. ಇದಕ್ಕೆ ಜನರ ಸಹಕಾರ ಸಹ ಮುಖ್ಯ.
 ಎಸ್‌.ಯೋಗೇಶ್ವರ ಪೌರಾಯುಕ್ತರು,
 ನಗರಸಭೆ ಕಾರವಾರ 

„ನಾಗರಾಜ ಹರಪನಹಳ್ಳಿ 

Advertisement

Udayavani is now on Telegram. Click here to join our channel and stay updated with the latest news.

Next