Advertisement

ರಾಜ್ಯಕ್ಕೆ 1.18 ಕೋಟಿ ರೂಪಾಯಿ ಪರಿಹಾರ 

12:30 AM Jan 30, 2019 | Team Udayavani |

ಬೆಂಗಳೂರು: ಗ್ರಾಹಕರ ಅನುಕೂಲಕ್ಕಾಗಿ ಕೇಂದ್ರ  ಸರ್ಕಾರವು ಜಿಎಸ್‌ಟಿ ತೆರಿಗೆ ಇಳಿಕೆ ಮಾಡಿದರೂ ಅದರ ಲಾಭ ಗ್ರಾಹಕರಿಗೆ ವರ್ಗಾಯಿಸದೆ ವಂಚಿಸುತ್ತಿದ್ದ ಉತ್ಪಾದಕರಿಗೆ ಬಿಸಿ ಮುಟ್ಟಿಸುತ್ತಿರುವ ರಾಷ್ಟ್ರೀಯ ಲಾಭಬಡುಕತನ ನಿರೋಧಕ ಪ್ರಾಧಿಕಾರವು (ನ್ಯಾಷನಲ್‌ ಆ್ಯಂಟಿ ಪ್ರಾಟಿಯರಿಂಗ್‌ ಅಥಾರಿಟಿ) ಪ್ರತಿಷ್ಠಿತ ಹಾರ್ಡ್ ಕ್ಯಾಸೆಲ್‌ ರೆಸ್ಟೊರೆಂಟ್‌ ಪ್ರೈವೇಟ್‌ ಲಿಮಿಟೆಡ್‌ಗೆ
(ಮ್ಯಾಕ್‌ ಡೊನಾಲ್ಡ್‌) ಬರೋಬ್ಬರಿ 7.49 ಕೋಟಿ ರೂ. ದಂಡ ವಿಧಿಸಿದೆ. ಅದರಂತೆ, ಕರ್ನಾಟಕಕ್ಕೆ 1.18 ಕೋಟಿ ರೂ. ಪರಿಹಾರ ಸಿಗಲಿದೆ.

Advertisement

ಕರ್ನಾಟಕ ಸೇರಿ ದೇಶಾದ್ಯಂತ ಒಟ್ಟು 10 ರಾಜ್ಯಗಳಿಗೆ ಕಂಪೆನಿಯು ಒಟ್ಟು 7.49 ಕೋಟಿ ರೂ. ದಂಡ ಪಾವತಿಸಬೇಕಿದ್ದು, ಈ ಪೈಕಿ ಕರ್ನಾಟಕಕ್ಕೆ 1.18 ಕೋಟಿ ರೂ. ಪರಿಹಾರ ಸಿಗಲಿದೆ. ವಿಳಂಬ ದಂಡ ಪಾವತಿಗೆ ಮಾಸಿಕ ಶೇ.18ರಷ್ಟು ಹೆಚ್ಚುವರಿ ದಂಡವನ್ನೂ ವಿಧಿಸಿದೆ. ಆ ಮೂಲಕ ತೆರಿಗೆ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೆ ವಂಚಿಸುವವರ ವಿರುದಟಛಿ ಪ್ರಹಾರ ನಡೆಸಿದೆ.
ಬ್ರಾಂಡೆಡ್‌ ಆಹಾರ ಉತ್ಪನ್ನಕ್ಕೆ ಸಂಬಂಧಪಟ್ಟಂತೆ ಜಿಎಸ್‌ಟಿಯನ್ನು ಶೇ.18ರಿಂದ ಶೇ.5ಕ್ಕೆ ಇಳಿಕೆ ಮಾಡಿತ್ತು. ಅದರಂತೆ ಬ್ರಾಂಡೆಡ್‌ ಆಹಾರ ಉತ್ಪನ್ನಗಳ ಬೆಲೆಯಲ್ಲಿ ಸೇರಿರುವ ತೆರಿಗೆ ಪ್ರಮಾಣವೂ ಶೇ.18ರಿಂದ ಶೇ.5ಕ್ಕೆ ಇಳಿಕೆಯಾಗಬೇಕು. ಆದರೆ ಬಹಳಷ್ಟು ಕಡೆ ತೆರಿಗೆ ಇಳಿಕೆಯ ಲಾಭವನ್ನು ಉತ್ಪಾದಕರು, ಗ್ರಾಹಕರಿಗೆ ವರ್ಗಾಯಿಸುತ್ತಿರಲಿಲ್ಲ. ಗ್ರಾಹಕರಿಗೂ ತೆರಿಗೆ ಇಳಿಕೆಯ ಲಾಭ ಸಿಗುತ್ತಿರಲಿಲ್ಲ. ಬ್ರಾಂಡೆಟ್‌ ಆಹಾರ ಉತ್ಪನ್ನದ ಜಿಎಸ್‌ಟಿ ದರ ಶೇ. 18ರಿಂದ ಶೇ.5ಕ್ಕೆ ಇಳಿಕೆಯಾದರೂ ಮ್ಯಾಕ್‌ ಡೊನಾಲ್ಡ್‌ ಬ್ರಾಂಡ್‌ನ‌ ಕಂಪೆನಿಯು ಹಳೆಯ ತೆರಿಗೆ ದರದಲ್ಲೇ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿತ್ತು. ಈ ಬಗ್ಗೆ ಕರ್ನಾಟಕ ಸೇರಿ ಹಲವು ರಾಜ್ಯಗಳ ಗ್ರಾಹಕರು ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರು. ರಾಜ್ಯದ ಮಟ್ಟದ ಲಾಭಬಡುಕತನ ನಿರೋಧಕ ಪರಾಮರ್ಶನ ಸಮಿತಿಗಳು ದೂರುಗಳನ್ನು ಕೇಂದ್ರದ ಸ್ಥಾಯಿ ಸಮಿತಿಗೆ ರವಾನಿಸಿದ್ದವು. 2018ರ ಆಗಸ್ಟ್‌ 20ರಂದು ಪ್ರಕರಣವು ರಾಷ್ಟ್ರೀಯ ಲಾಭಬಡುಕತನ ನಿರೋಧಕ ಪ್ರಾಧಿಕಾರಕ್ಕೆ ಶಿಫಾರಸ್ಸಾಗಿತ್ತು.

ಕರ್ನಾಟಕಕ್ಕೆ 1.18 ಕೋಟಿ ರೂ. ಪರಿಹಾರ: ಅದರಂತೆಸ್ಥಾಯಿ ಸಮಿತಿ ಪರಿಶೀಲಿಸಿದಾಗ ಕಂಪೆನಿಯು ತೆರಿಗೆ ಇಳಿಕೆಯಾಗಿದ್ದರೂ ಹಳೆಯ ತೆರಿಗೆ ದರದಲ್ಲೇ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದುದು ದೃಢಪಟ್ಟಿತ್ತು. ಆ ಹಿನ್ನೆಲೆಯಲ್ಲಿ ಪ್ರಾಧಿಕಾರವು ಕಂಪೆನಿಗೆ 7.49,27,786 ಕೋಟಿ ರೂ. ದಂಡ ವಿಧಿಸಿದೆ. ಅದರಂತೆ ಕಂಪೆನಿಯು ಕರ್ನಾಟಕ, ಆಂಧ್ರಪ್ರದೇಶ, ಛತ್ತೀಸ್‌ಗಡ, ಗೋವಾ,
ಗುಜರಾತ್‌, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣಕ್ಕೆ ಪರಿಹಾರ ನೀಡಬೇಕಿದೆ. ಕರ್ನಾಟಕಕ್ಕೆ 1,18,30,563 ಕೋಟಿ ರೂ. ಪರಿಹಾರ ಪಾವತಿಸಬೇಕಿದೆ. ವಿಳಂಬ ಪಾವತಿಗೆ ದಂಡ ಮೊತ್ತಕ್ಕೆ ಶೇ.18ರಷ್ಟು ದಂಡ ವಿಧಿಸುವಂತೆಯೂ ಪ್ರಾಧಿಕಾರ ಸೂಚಿಸಿದೆ.

ಕ್ಷೇಮಾಭಿವೃದ್ಧಿಗೆ ಹಣ ಬಳಕೆ: ಕಂಪೆನಿಯು ಪಾವತಿಸುವ ದಂಡ ಮೊತ್ತವನ್ನು ಕೇಂದ್ರ ಹಾಗೂ ರಾಜ್ಯ ಜಿಎಸ್‌ಟಿ ವಿಭಾಗಗಳು ತಲಾ ಶೇ.50ರಷ್ಟು ಹಂಚಿಕೆ ಮಾಡಿಕೊಳ್ಳಲಿವೆ. ಕಂಪೆನಿ ನೀಡುವ ದಂಡ ಮೊತ್ತವನ್ನು ಕೇಂದ್ರ ಹಾಗೂ ರಾಜ್ಯ ಸಾಮಾನ್ಯರ ಕಲ್ಯಾಣ ನಿಧಿಗೆ
ಠೇವಣಿ ಮಾಡಿ ಗ್ರಾಹಕರ ಅನುಕೂಲಕ್ಕೆ ವಿನಿಯೋಗಿಸಲು ಇಲಾಖೆ ಚಿಂತಿಸಿದೆ. 

ದೂರು ನೀಡಬಹುದು
ಯಾವುದೇ ಉತ್ಪಾದಕರು ಜಿಎಸ್‌ಟಿ ತೆರಿಗೆ ಪ್ರಮಾಣಕ್ಕಿಂತಲೂ ಹೆಚ್ಚು ತೆರಿಗೆ ಸಂಗ್ರಹಿಸುತ್ತಿದ್ದರೆ ಈ ಬಗ್ಗೆ ರಾಜ್ಯ ಲಾಭಬಡುಕತನ ನಿರೋಧಕ ಪ್ರಾಧಿಕಾರಕ್ಕೆ ಆನ್‌ಲೈನ್‌ನಲ್ಲಿ ದೂರು ನೀಡಬಹುದು. ನಿಗದಿತ ನಮೂನೆಯ ಅರ್ಜಿಯಲ್ಲಿ ಅಗತ್ಯ ಮಾಹಿತಿ, ಉತ್ಪನ್ನ ಖರೀದಿ ರಸೀದಿ, ಆಧಾರ್‌ ಸಂಖ್ಯೆ ಇತರೆ ಮಾಹಿತಿ ದಾಖಲಿಸಿ ಆನ್‌ಲೈನ್‌ನಲ್ಲೇ ಸಲ್ಲಿಸಬೇಕು. ಹೆಸರು, ವಿಳಾಸವಿಲ್ಲದೆ, ನಿಗದಿತ ನಮೂನೆಯಲ್ಲಿಯೂ ವಿವರ ದಾಖಲಿಸದೆ ಸಾಮಾನ್ಯ ರೀತಿಯಲ್ಲಿ ನೀಡುವ ದೂರುಗಳು ಸ್ವೀಕಾರಾರ್ಹವಲ್ಲ. ರಾಜ್ಯ ಮಟ್ಟದಲ್ಲಿ ಲಾಭ ಬಡುಕತನ ನಿರೋಧಕ ಪರಾಮರ್ಶನ ಸಮಿತಿಯಿದ್ದು, ಇದಕ್ಕೆ ರಾಜ್ಯ ಹೆಚ್ಚುವರಿ ವಾಣಿಜ್ಯ ತೆರಿಗೆ ಆಯುಕ್ತ (ಲೆಕ್ಕಪರಿಶೋಧನೆ) ಬಿ.ಎ.ನಾಣಿಯಪ್ಪ ಹಾಗೂ ಕೇಂದ್ರೀಯ ತೆರಿಗೆ ಆಯುಕ್ತ ಜಿ.ನಾರಾಯಣಸ್ವಾಮಿ ಸದಸ್ಯರಾಗಿದ್ದಾರೆ. ರಾಜ್ಯ ಗ್ರಾಹಕರು ದೂರು ಸಲ್ಲಿಸಬೇಕಾದ ಇ-ಮೇಲ್‌ ವಿಳಾಸ: adcomic@gmail.com 

Advertisement

ರಾಜ್ಯದಲ್ಲಿ ಯಾವುದೇ ಉತ್ಪಾದಕರು ಜಿಎಸ್‌ಟಿ ತೆರಿಗೆ ಇಳಿಕೆಯ ಲಾಭವನ್ನು ವರ್ಗಾಯಿಸದಿದ್ದರೆ ಗ್ರಾಹಕರು ರಾಜ್ಯ ಲಾಭ ಬಡುಕತನ ನಿರೋಧಕ ಪರಾಮರ್ಶನ ಸಮಿತಿಗೆ ದೂರು ನೀಡಬಹುದು.
● ಬಿ.ಎ.ನಾಣಿಯಪ್ಪ, ಹೆಚ್ಚುವರಿ ವಾಣಿಜ್ಯ ತೆರಿಗೆ ಆಯುಕ್ತರು (ಲೆಕ್ಕ ಪರಿಶೋಧನೆ), ರಾಜ್ಯ ಮಟ್ಟದ ಲಾಭ ಬಡುಕತನ ನಿರೋಧಕ
ಪರಾಮರ್ಶನ ಸಮಿತಿ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next